ಚಾಮರಾಜನಗರ: ಮೂರು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಆರಂಭವಾಗಿರುವ ಕೃಷಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಹಾಗೂ ಅಗತ್ಯ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಕ್ರಮ ವಹಿಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಹಾಗೂ ಕಾಲೇಜಿನ ವಿಶೇಷ ಅಧಿಕಾರಿಎಂ.ಸಿ.ರಾಜಣ್ಣ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಭಾನುವಾರ ಮನವಿ ಮಾಡಿದರು.
ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ಕಾಲೇಜಿಗೆ ಸಚಿವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾಲೇಜಿಗೆ ಅಗತ್ಯವಾಗಿರುವ ಸೌಕರ್ಯಗಳ ಬಗ್ಗೆ ಪ್ರಸ್ತಾಪಿಸಿದರು.
ಎಂ.ಸಿ.ರಾಜಣ್ಣ ಅವರು ಮಾತನಾಡಿ, ‘2018ರಲ್ಲಿ ಕಾಲೇಜು ಆರಂಭಗೊಂಡಿದ್ದು, ಪ್ರತಿ ವರ್ಷ 30ರಿಂದ 35 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ. ಸದ್ಯ 92 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಮತ್ತೆ 33 ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ. ತಾತ್ಕಾಲಿಕವಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಗತಿಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಬಂಧಿಸಿದ ಕಟ್ಟಡದಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷಕ್ಕೆ ಇನ್ನಷ್ಟು ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ಅದಕ್ಕಾಗಿ ಕಾಲೇಜಿಗೆ ಸ್ವಂತ ಕಟ್ಟಡ ಆಗಬೇಕಿದೆ. ಯಡಬೆಟ್ಟದಲ್ಲಿ ಕಾಲೇಜಿಗಾಗಿ 77 ಎಕರೆ ಜಾಗ ಹಂಚಿಕೆ ಮಾಡಲಾಗಿದ್ದು, ಅಲ್ಲಿ ಕಟ್ಟಡ ನಿರ್ಮಿಸಲು ಅನುದಾನ ಬಿಡುಗಡೆ ಮಾಡಬೇಕು’ ಎಂದು ಕೋರಿದರು.
ವಿ.ವಿ. ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್ ಅವರು ಮಾತನಾಡಿ, ‘ಕೃಷಿ ಕಾಲೇಜಿಗಾಗಿ 77 ಎಕರೆ ಭೂಮಿ ಮಂಜೂರಾಗಿದೆ. ಸ್ವಂತ ಕಟ್ಟಡಕ್ಕಾಗಿ ಸರ್ಕಾರ ₹25 ಕೋಟಿ ಹಣ ಹಂಚಿಕೆ ಮಾಡಿದೆ. ಇನ್ನೂ ಬಿಡುಗಡೆಯಾಗಿಲ್ಲ. ಕೃಷಿ ವಿವಿಯಿಂದ ₹5 ಕೋಟಿ ಬಿಡುಗಡೆ ಮಾಡಲಾಗಿದ್ದು, ಕಾಲೇಜಿಗೆ ಸೇರಿದ ಜಮೀನಿನಲ್ಲಿ ಬೇಲಿ ನಿರ್ಮಾಣ ಸೇರಿದಂತೆ ಇತರೆ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಎರಡು ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ 15 ಎಕರೆ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅದೇ ಜಾಗದಲ್ಲಿ ಪ್ರಾಯೋಗಿಕ ತರಗತಿಗಳನ್ನು ನಡೆಸಲು ತೀರ್ಮಾನಿಸಿದ್ದೇವೆ’ ಎಂದರು.
‘₹80 ಲಕ್ಷ ವೆಚ್ಚದಲ್ಲಿ ಒಂದು ಪ್ರಯೋಗಾಲಯ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಸ್ವಂತ ಕಟ್ಟಡದಲ್ಲೇ ತರಗತಿಗಳನ್ನು ನಡೆಸಲು ಯೋಜಿಸಲಾಗಿದೆ. ಸರ್ಕಾರ ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಸಚಿವರ ಗಮನಕ್ಕೆ ತಂದರು.
ಸಿಬ್ಬಂದಿ ಭರ್ತಿಗೆ ಕ್ರಮ ವಹಿಸಿ: ‘ಸದ್ಯ ಲಭ್ಯವಿರುವ ಸಿಬ್ಬಂದಿಯನ್ನು ಬಳಸಿಕೊಂಡು ಬೋಧನೆ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ಮಾಡುತ್ತಿದ್ದೇವೆ. ಸಿಬ್ಬಂದಿಯ ಕೊರತೆ ಇದೆ. ಸಾಕಷ್ಟು ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲದಿರುವುದರಿಂದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ಮಾನ್ಯತೆ ಪಡೆಯುವುದಕ್ಕೂ ತೊಂದರೆಯಾಗುತ್ತಿದೆ. ಸಿಬ್ಬಂದಿ ನೇಮಕಾತಿಗೆ ಕ್ರಮ ವಹಿಸಬೇಕು’ ಎಂದು ಕುಲಪತಿ ಅವರು ಮನವಿ ಮಾಡಿದರು.
ಶೀಘ್ರ ಬಿಡುಗಡೆಗೆ ಕ್ರಮ
ನಂತರ ಮಾತನಾಡಿದ ಬಿ.ಸಿ.ಪಾಟೀಲ ಅವರು, ‘ಕೃಷಿ ಕಾಲೇಜಿಗಾಗಿ ₹25 ಕೋಟಿ ನೀಡಲು ಸರ್ಕಾರ ನಿರ್ಧರಿಸಿದೆ. ಅನುದಾನ ಬಿಡುಗಡೆಯಾಗಬೇಕಾದರೆ ಸಚಿವ ಸಂಪುಟದ ಒಪ್ಪಿಗೆ ಬೇಕು. ಶೀಘ್ರದಲ್ಲಿ ಈ ವಿಷಯವನ್ನು ಸಂಪುಟದಲ್ಲಿ ಮುಂದಿಟ್ಟು ಅನುಮೋದನೆ ಪಡೆಯಲಾಗುವುದು’ ಎಂದರು.
ಸಿಬ್ಬಂದಿ ನೇಮಕಾತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿ ಕೃಷಿ ಕಾಲೇಜಿಗೆ ಬೇಡಿಕೆ ಇದೆ. ಅನುಮತಿ ನೀಡುವಂತೆ ಎಲ್ಲ ಕಡೆಗಳಿಂದ ಮನವಿಗಳು ಬರುತ್ತಿವೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಎಲ್ಲ ನೇಮಕಾತಿಗಳನ್ನು ತಡೆ ಹಿಡಿಯಲಾಗಿತ್ತು. ಈಗ ಆ ನಿಯಮವನ್ನು ಸಡಿಲಿಕೆ ಮಾಡಿ ನೇಮಕಾತಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಇದಕ್ಕೂ ಮೊದಲು, ಸಚಿವರು ಕೃಷಿ ವಿಜ್ಞಾನ ಕೇಂದ್ರದ ಕಾರ್ಯನಿರ್ವಹಣೆ ಬಗ್ಗೆ ಅಲ್ಲಿನ ಮುಖ್ಯಸ್ಥೆ ಚಂದ್ರಕಲಾ ಹಣಗಿ ಅವರಿಂದ ಮಾಹಿತಿ ಪಡೆದರು. ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಪ್ರಾಯೋಗಿಕವಾಗಿ ರಾಗಿ ಬೆಳೆ ಬೆಳೆದಿರುವುದನ್ನು ಪರಿಶೀಲಿಸಿದರು. ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ತೆರಳಿ ಪರಿಶೀಲಿಸಿದರು. ಡಿಜಿಟಲ್ ಗ್ರಂಥಾಲಯ ಸೌಲಭ್ಯವನ್ನೂ ವೀಕ್ಷಿಸಿದರು.
ಕಾಲೇಜಿಗೆ ಭೇಟಿ ನೀಡುವುದಕ್ಕೂ ಮುನ್ನ ಕೊತ್ತಲವಾಡಿಯಲ್ಲಿ ಕುಮಾರ್ ಎಂಬುವವರ ಮನೆಗೆ ತೆರಳಿಗೆ ಉಪಾಹಾರ (ರಾಗಿ ರೊಟ್ಟಿ) ಸೇವಿಸಿದರು. ನಂತರ ಅರಕಲವಾಡಿಯಲ್ಲಿ ಬಿಜೆಪಿ ಮುಖಂಡ ಹಾಗೂ ರೈತ ಮಹೇಶ್ ಅವರ ಮನೆಗೆ ತೆರಳಿದರು.
ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ ಕುಮಾರ್, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಬೈರೇಗೌಡ, ಜಂಟಿ ಕೃಷಿ ನಿರ್ದೇಶಕಿ ಎಚ್.ಟಿ. ಚಂದ್ರಕಲಾ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.