ಸಂತೇಮರಹಳ್ಳಿ: ಸ್ನಾತಕೋತ್ತರ ಪದವಿ ಜೊತೆಯಲ್ಲಿತ್ತು. ಮನಸ್ಸು ಮಾಡಿದ್ದರೆ ಲಕ್ಷಾಂತರ ರೂಪಾಯಿ ಸಂಬಳದ ಕೆಲಸವೂ ಸಿಗುತ್ತಿತ್ತು. ಎಲ್ಲವನ್ನೂ ಬಿಟ್ಟು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಸಂತೇಮರಹಳ್ಳಿಯ ನಿಖಿಲ್.
ಎಂಸಿಎ ವ್ಯಾಸಂಗ ಮಾಡಿರುವ ನಿಖಿಲ್, ವ್ಯವಸಾಯದ ಜೊತೆಗೆ ಕುರಿಗಳ ಸಾಕಾಣಿಕೆ ಹಾಗೂ ಹೈನುಗಾರಿಕೆಯನ್ನು ನಡೆಸಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ವ್ಯವಸಾಯ ಇವರ ಮೂಲ ಕಸುಬು. ಜತೆಗೆ ಬಂಡೂರು ತಳಿಯ ಕುರಿಗಳನ್ನು ಸಾಗುತ್ತಿದ್ದಾರೆ. ಜೊತೆಗೆ ಹಸು ಸಾಕಣಿಕೆಯೂ ಇದೆ.
ತಮ್ಮ ಜಮೀನಿನಲ್ಲಿ 20x30 ಸುತ್ತಳತೆಯಲ್ಲಿ ಕುರಿ ಸಾಕಾಣಿಕೆಗಾಗಿ ಮನೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ಮಳವಳ್ಳಿ ತಾಲ್ಲೂಕಿನ ಗ್ರಾಮವೊಂದರಲ್ಲಿ ಮರಿ ಟಗರುಗಳಿಗೆ ₹7,000 ದಿಂದ ₹8,000,ಹೆಣ್ಣು ಕುರಿಗಳಿಗೆ ₹10 ಸಾವಿರದಿಂದ ₹15 ಸಾವಿರ ನೀಡಿ ಬಂಡೂರು ತಳಿಯ 50 ಕುರಿಗಳನ್ನು ತಂದು ಸಾಕಿದ್ದಾರೆ. ಅದರ ಜತೆಗೆ ನಾಟಿ ಕುರಿಗಳನ್ನು ಸಾಕಾಣೆ ಮಾಡುತ್ತಿದ್ದಾರೆ. ಇದೀಗ ಅವರ ಬಳಿ 120 ಕುರಿಗಳಿವೆ.
ಗಂಡು ಕುರಿಗಳನ್ನು ಪ್ರತಿ ವರ್ಷ ಬಕ್ರೀದ್ ಹಬ್ಬದ ಸಮಯದಲ್ಲಿ ಮಾರಾಟ ಮಾಡುತ್ತಾರೆ. ಪ್ರತಿ ಕುರಿಗೆ ₹ 15 ಸಾವಿರದಿಂದ ₹25 ಸಾವಿರದವರೆಗೂ ಮಾರಾಟ ಮಾಡುತ್ತಾರೆ. ಪ್ರತಿ ವರ್ಷ ಕನಿಷ್ಠ 25 ಕುರಿಗಳನ್ನು ಮಾರಾಟ ಮಾಡುತ್ತಾರೆ.
ಬೆಳೆ ಮೇವಿಗೆ:ತಮ್ಮ ಜಮೀನಿನಲ್ಲಿ ಪ್ರತಿವರ್ಷ 2 ಎಕರೆಯಲ್ಲಿ ಹುರುಳಿ ಬೆಳೆದು, ಬಂದ ಬೆಳೆಯನ್ನು ಕುರಿಗಳ ಮೇವಿಗಾಗಿ ವರ್ಷಪೂರ್ತಿ ಸಂಗ್ರಹಿಸಿಡುತ್ತಾರೆ. ಜತೆಗೆ ಅಂಗಡಿಗಳಲ್ಲಿ ಕುರಿಗಳಿಗಾಗಿ ದೊರಕುವ ಆಹಾರಗಳನ್ನು ನೀಡುತ್ತಾರೆ. ಆಗಾಗ್ಗೆ ಪಶು ಇಲಾಖೆಯ ವೈದ್ಯಾಧಿಕಾರಿಗಳನ್ನು ಕರೆಸಿ ಕುರಿಗಳ ಆರೋಗ್ಯ ತಪಾಸಣೆ ನಡೆಸುತ್ತಾರೆ.
‘ಪಶು ವೈದ್ಯಾಧಿಕಾರಿಗಳು ಪ್ರತಿ 4 ಹಾಗೂ 5 ತಿಂಗಳಿಗೊಮ್ಮೆ ಕುರಿಗಳಿಗೆ ಉಚಿತವಾಗಿ ರೋಗ ನಿರೋಧಕ ಚುಚ್ಚು ಮದ್ದು ನೀಡುತ್ತಾರೆ. ಇದರಿಂದ ಕುರಿಗಳಿಗೆ ಯಾವುದೇ ರೋಗದ ಬಾಧೆ ಇದುವರೆಗೂ ಕಾಣಿಸಿಕೊಂಡಿಲ್ಲ’ ಎಂದು ನಿಖಿಲ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿದ್ದಾರೆ. ಪಂಪ್‍ಸೆಟ್ ಮೂಲಕ ನೀರನ್ನು ಶೇಖರಣೆ ಮಾಡಿಕೊಳ್ಳುತ್ತಾರೆ. ಕುರಿಗಳು ಹಾಗೂ ಹಸುಗಳಿಗೆ ಕುಡಿಯಲು ಇದರಿಂದಲೇ ನೀರು ಪೂರೈಸುತ್ತಾರೆ.
ಕುರಿಗಳ ಜತೆಗೆ ಹಸುಗಳನ್ನು ಸಾಕಿಕೊಂಡು ಹೈನುಗಾರಿಕೆಗೂ ಹೆಚ್ಚು ಒತ್ತು ನೀಡಿದ್ದಾರೆ. ಸಾಕಿರುವ 5 ಹಸುಗಳಲ್ಲಿ ಈಗ 3 ಹಸುಗಳು ಹಾಲು ಕೊಡುತ್ತಿವೆ. ಪ್ರತಿದಿನ 20 ರಿಂದ 25 ಲೀಟರ್‌ವೆರಗೆ ಡೇರಿಗೆ ಹಾಲು ಪೂರೈಕೆ ಮಾಡುತ್ತಿದ್ದು, ಪ್ರತಿ ವಾರ ₹2,500–₹3000 ಹೈನುಗಾರಿಕೆಯಲ್ಲಿಯೂ ಹಣ ಗಳಿಸುತ್ತಿದ್ದಾರೆ.
‘ಕೃಷಿಯಲ್ಲಿ ನೆಮ್ಮದಿ ಇದೆ’
ಜಮೀನಿನ ಅರ್ಧ ಎಕರೆಯಲ್ಲಿ ಹಸುಗಳಿಗಾಗಿ ಮೇವು ಬೆಳೆಸುತ್ತಿದ್ದಾರೆ. ತೆಂಗು, ಅರಿಸಿನ, ಕಬ್ಬುಗಳನ್ನೂ ಬೆಳೆಯುತ್ತಾರೆ. ರಾಸಾನಿಕ ಗೊಬ್ಬರಗಳನ್ನು ಇವರು ಬಳಸುವುದಿಲ್ಲ. ಯಥೇಚ್ಛವಾಗಿ ಕುರಿ ಹಾಗೂ ಹಸುಗಳಿಂದ ಗೊಬ್ಬರ ದೊರಕುವುದರಿಂದ ಜಮೀನಿಗೆ ಅವುಗಳನ್ನೇ ಗೊಬ್ಬರವಾಗಿ ಬಳಸುತ್ತಿದ್ದಾರೆ.
‘ಜಮೀನಿನಲ್ಲಿ ಮನೆ ಮಾಡಿಕೊಂಡು ಕುರಿ ಹಾಗೂ ಹಸುಗಳನ್ನು ಸಾಕುವುದರಿಂದ ನೆಮ್ಮದಿ ಇದೆ. ಜತೆಗೆ ಇವುಗಳಿಂದ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ. ಹಸುಗಳ ಹಾಲಿನಿಂದ ಬಂದ ಹಣ ಮನೆ ಖರ್ಚಿಗೆ ಆಗುತ್ತದೆ. ಕುರಿಗಳ ಮಾರಾಟದಿಂದಲೂ ಲಾಭ ಬರುತ್ತಿದೆ’ ಎಂದು ನಿಖಿಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.