ADVERTISEMENT

ಚಾಮರಾಜನಗರ: ಓಟದ ಮೂಲಕ ಏಡ್ಸ್‌ ಜಾಗೃತಿ

ಎಚ್‍ಐವಿ ನಿಯಂತ್ರಣಕ್ಕೆ ಜಿಲ್ಲಾಮಟ್ಟದ ಮ್ಯಾರಥಾನ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:35 IST
Last Updated 4 ಸೆಪ್ಟೆಂಬರ್ 2024, 15:35 IST
ಯುವಜನೋತ್ಸವದ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮದಡಿ ಎಚ್‍ಐವಿ ಏಡ್ಸ್ ಕುರಿತು ವ್ಯಾಪಕ ಅರಿವು ಮೂಡಿಸಲು ಚಾಮರಾಜನಗರದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಮ್ಯಾರಥಾನ್ ಓಟಕ್ಕೆ ಹಿರಿಯ ಸಿವಿಲ್ ನ್ಯಾಯಧೀಶ ಈಶ್ವರ್ ಚಾಲನೆ ನೀಡಿದರು
ಯುವಜನೋತ್ಸವದ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮದಡಿ ಎಚ್‍ಐವಿ ಏಡ್ಸ್ ಕುರಿತು ವ್ಯಾಪಕ ಅರಿವು ಮೂಡಿಸಲು ಚಾಮರಾಜನಗರದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಮ್ಯಾರಥಾನ್ ಓಟಕ್ಕೆ ಹಿರಿಯ ಸಿವಿಲ್ ನ್ಯಾಯಧೀಶ ಈಶ್ವರ್ ಚಾಲನೆ ನೀಡಿದರು   

ಚಾಮರಾಜನಗರ: ಯುವಜನೋತ್ಸವದ ಅಂಗವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣಾ ಐಇಸಿ ಪ್ರಚಾರಾಂದೋಲನ ಕಾರ್ಯಕ್ರಮದಡಿ ಎಚ್‍ಐವಿ ಏಡ್ಸ್ ಕುರಿತು ವ್ಯಾಪಕ ಅರಿವು ಮೂಡಿಸಲು ನಗರದಲ್ಲಿ ಬುಧವಾರ ಜಿಲ್ಲಾಮಟ್ಟದ ಮ್ಯಾರಥಾನ್ ಓಟ ಸ್ಪರ್ಧೆ ಆಯೋಜಿಸಲಾಗಿತ್ತು.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ, ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಚಾಮರಾಜನಗರ ವಿಶ್ವವಿದ್ಯಾಲಯ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ರೋಟರಿ ಸಿಲ್ಕ್ ಸಿಟಿ ಸಂಯುಕ್ತ ಆಶ್ರಯದಲ್ಲಿ ನಡೆದ ಮ್ಯಾರಥಾನ್ ಓಟಕ್ಕೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶ ಈಶ್ವರ್ ಚಾಲನೆ ನೀಡಿದರು.

ಜಿಲ್ಲಾಡಳಿತ ಭವನದ ಮುಂಭಾಗದಿಂದ ಆರಂಭವಾದ ಮ್ಯಾರಥಾನ್ ಓಟ ಡಿವೈಎಸ್‍ಪಿ ಕಚೇರಿ ಮೂಲಕ ಕರಿನಂಜನಪುರ-ಕೋರ್ಟ್ ರಸ್ತೆ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಪಚ್ಚಪ್ಪ ವೃತ್ತ, ಜೋಡಿರಸ್ತೆ ಮೂಲಕ ಸಾಗಿ ಬಳಿಕ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಂಡಿತು. ವಿವಿಧ ಶಾಲಾ ಕಾಲೇಜುಗಳ ಯುವಕ, ಯುವತಿಯರು ಬಹಳ ಉತ್ಸಾಹ, ಹುಮ್ಮಸ್ಸಿನಿಂದ ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದರು.

ADVERTISEMENT

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶ ಈಶ್ವರ್ ಮಾತನಾಡಿ, ‘ಎಚ್‌ಐವಿ, ಏಡ್ಸ್ ನಿಯಂತ್ರಣ ಕುರಿತು ಜನಸಾಮಾನ್ಯರಿಗೆ ವಿಶೇಷವಾಗಿ ಯುವ ಜನತೆಗೆ, ವಿದ್ಯಾರ್ಥಿಗಳಿಗೆ ಜಾಗೃತಿ ಅತ್ಯವಶ್ಯಕ. ವಿದ್ಯಾರ್ಥಿಗಳು ಏಡ್ಸ್ ಬಗ್ಗೆ ಅರಿವು ಹೊಂದಿ ಇತರರನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು’ ಎಂದರು.

‘ಏಡ್ಸ್ ರೋಗವು ಎಚ್‌ಐವಿ ವೈರಸ್‍ನಿಂದ ಹರಡುತ್ತದೆ. ಅಸುರಕ್ಷತೆಯ ಲೈಂಗಿಕತೆ, ಎಚ್.ಐ.ವಿ ಸೋಂಕು ಇರುವ ವ್ಯಕ್ತಿಗೆ ಚುಚ್ಚಿದ ಸೂಜಿ, ಸಿರಿಂಜ್‍ಗಳಿಂದ ಏಡ್ಸ್ ಹರಡಲಿದೆ. ಮೈಮರೆಯದೆ ಎಚ್ಚರದಿಂದ ಇದ್ದರೆ ಏಡ್ಸ್‌ನಿಂದ ದೂರವಿರಬಹುದು’ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್. ಚಿದಂಬರ, ಸಿಮ್ಸ್ ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ಡಾ.ಮಹೇಶ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ರಾಜೇಶ್, ಜಿಲ್ಲಾ ಕ್ಷಯರೋಗ ನಿರ್ಮೂನಾಧಿಕಾರಿ ಹಾಗೂ ಜಿಲ್ಲಾ ಏಡ್ಸ್ ಪ್ರತಿಬಂಧಕ ಘಟಕದ ನಿಯಂತ್ರಣಾಧಿಕಾರಿ ಡಾ. ಎಂ.ಎಸ್. ರವಿಕುಮಾರ್, ಸಮತಾ ಸೊಸೈಟಿಯ ಅಧ್ಯಕ್ಷೆ ದೀಪಾ ಬುದ್ಧೆ, ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್ ಇದ್ದರು.

ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಗಳಾದ ಚೈತನ್ಯ ನೆಟ್‍ವರ್ಕ್, ಸ್ನೇಹಜ್ಯೋತಿ ಮಹಿಳಾ ಸಂಘ, ಕೂರ್ ಸಂಸ್ಥೆ, ನಂದಿನಿ, ನಾಗಕೈವಲ್ಯ ಎಂಟರ್‌ಪ್ರೈಸಸ್, ಮಹೀಂದ್ರಾ ಟ್ರಾಕ್ಟರ್ ಡೀಲರ್ಸ್ ಸಂಸ್ಥೆಗಳು ಮ್ಯಾರಥಾನ್ ಓಟ ಸ್ಪರ್ಧೆಗೆ ಸಹಭಾಗಿತ್ವ ವಹಿಸಿದ್ದವು.

ಮ್ಯಾರಥಾನ್ ಓಟ ಆರಂಭಕ್ಕೂ ಮೊದಲು ಯಳಂದೂರಿನ ರಂಗದೇಗುಲ ಕಲಾವೇದಿಕೆ ಶಾಂತರಾಜು ಮತ್ತು ತಂಡದವರು ಎಚ್‍ಐವಿ ಏಡ್ಸ್ ಕುರಿತ ಜಾಗೃತಿ ಬೀದಿನಾಟಕವನ್ನು ಪ್ರಸ್ತುತಪಡಿಸಿದರು

ಮ್ಯಾರಥಾನ್ ಓಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು

ಎಚ್‌ಐವಿ ಬಗ್ಗೆ ಯುವಜನತೆ ಅರಿವು ಹೊಂದಿ: ಸಲಹೆ ಬೀದಿನಾಟಕ ಮೂಲಕ ಜನರಿಗೆ ಜಾಗೃತಿ ಶಾಲಾ ಕಾಲೇಜುಗಳ ಯುವಕ, ಯುವತಿಯರು ಭಾಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.