ಹನೂರು: ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಹೊರಗುತ್ತಿಗೆ ಆಧಾರದಲ್ಲಿ ನಿಯೋಜನೆ ಮಾಡಿಕೊಂಡಿರುವ ನೌಕರರ ನೇಮಕಾತಿಯಲ್ಲಿ ತಾರತಮ್ಯ ನಡೆದಿದ್ದು, ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಆಗ್ರಹಿಸಿದ್ದಾರೆ.
ಸ್ಥಳೀಯರಿಗೆ ಉದ್ಯೋಗ ನೀಡುವಲ್ಲಿ ಪ್ರಾಧಿಕಾರ ವಿಫಲವಾಗಿದೆ. ಹಣ ಹಾಗೂ ಪ್ರಭಾವಕ್ಕೆ ಮಣಿದು ನೌಕರಿ ನೀಡಲಾಗುತ್ತಿದೆ ಎಂದು ಚಂದ್ರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ವಿಡಿಯೊ ಹೆಚ್ಚು ಸದ್ದು ಮಾಡಿದೆ.
ವಿಡಿಯೋದಲ್ಲಿ ಏನಿದೆ: ಮಹದೇಶ್ವರ ಬೆಟ್ಟದ ಸುತ್ತ ವಾಸವಿರುವ ಸ್ಥಳೀಯ ವಿದ್ಯಾವಂತ ಯುವಕರನ್ನು ನೇಮಕ ಮಾಡಿಕೊಳ್ಳದೆ ಪ್ರಾಧಿಕಾರ ನಿರ್ಲ್ಯಕ್ಷ್ಯ ಧೋರಣೆ ಅನುಸರಿಸಿದೆ. ಇದರಿಂದಾಗಿ ಸ್ಥಳೀಯ ಯುವಕರು ಜೀವನ ನಿರ್ವಹಣೆಗೆ ಬೆಂಗಳೂರು, ತಮಿಳುನಾಡು ಸೇರಿದಂತೆ ಮಹಾನಗರಗಳಿಗೆ ವಲಸೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
‘ಹಣ, ಪ್ರಭಾವ ಬಳಸಿ ಬರುವವರಿಗೆ ಪ್ರಾಧಿಕಾರ ದೇವಾಲಯದಲ್ಲಿ ಗುತ್ತಿಗೆ ಆಧಾರದ ಕೆಲಸ ನೀಡುತ್ತಿದೆ. ಸೆಕ್ಯುರಿಟಿ ಹಾಗೂ ಕೆಳ ಹಂತದ ಹುದ್ದೆಗಳ ನೇಮಕಾತಿಗೆ ಹಣ ನಿಗದಿಪಡಿಸಿದ್ದು , ಹಣ ಕೊಟ್ಟವರಿಗೆ ಮಾತ್ರ ಕೆಲಸ ನೀಡಲಾಗುತ್ತಿದೆ’ ಎಂದು ಚಂದ್ರು ಆರೋಪ ಮಾಡಿದ್ದಾರೆ.
‘ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಬೇಡಿಕೆ ಇರಿಸಿದರೆ ಸರ್ಕಾರದ ನೀತಿ ನಿಯಮಗಳು ಹಾಗೂ ಮೀಸಲಾತಿಯ ಸಬೂಬು ಹೇಳುವ ಪ್ರಾಧಿಕಾರ ಅರ್ಹರಲ್ಲದವರಿಗೆ ಉದ್ಯೋಗ ನೀಡುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಪ್ರಾಧಿಕಾರದ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ, ಉಪಾಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳೀಯರ ಹಿತ ಕಾಯಲು ಈ ಬಗ್ಗೆ ಗಮನ ಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಕರೆ ಸ್ವೀಕರಿಸದ ಅಧಿಕಾರಿ: ಆರೋಪಗಳ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರಿಗೆ ಕರೆ ಮಾಡಲಾಯಿತಾದರೂ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.