ADVERTISEMENT

ಅಮಾವಾಸ್ಯೆ: ಮಾದಪ್ಪನ ಕ್ಷೇತ್ರಕ್ಕೆ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 8 ಮೇ 2024, 15:55 IST
Last Updated 8 ಮೇ 2024, 15:55 IST
ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಬುಧವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು
ಅಮಾವಾಸ್ಯೆ ಪ್ರಯುಕ್ತ ಮಹದೇಶ್ವರ ಬೆಟ್ಟಕ್ಕೆ ಬುಧವಾರ ಭಾರಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು   

ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಬುಧವಾರ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಜಿಲ್ಲೆ, ಹೊರ ಜಿಲ್ಲೆಗಳ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದರು.  

ಮಂಗಳವಾರದಿಂದಲೇ ಭಕ್ತರು ಬೆಟ್ಟಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ದೇವಸ್ಥಾನದ ಮುಂಭಾಗ ಹಾಗೂ ರಂಗಮಂದಿರ ಸೇರಿದಂತೆ ಇತರೆ ಕಡೆಗಳಲ್ಲಿ ಬಿಡಾರ ಹೂಡಿದ್ದ ಅವರು, ರಾತ್ರಿಯಿಡೀ ಮಾದಪ್ಪನ ಗೀತೆಗಳನ್ನು ಹಾಡಿ ಭಕ್ತಿ ಪರಾಕಾಷ್ಠೆ ಮೆರೆದರು.

ಬುಧವಾರ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ಮಾದಪ್ಪನಿಗೆ ವಿವಿಧ ಅಭಿಷೇಕ, ವಿಶೇಷ ಪೂಜೆಗಳು ಜರುಗಿದವು. ಹರಕೆ ಹೊತ್ತ ಭಕ್ತರು, ಬೆಳ್ಳಿ ರಥೋತ್ಸವ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪ ಉತ್ಸವಗಳಲ್ಲಿ ಪಾಲ್ಗೊಂಡರು. ಮುಡಿಸೇವೆ, ಉರುಳುಸೇವೆ, ಪಂಜಿನ ಸೇವೆ ನೆರವೇರಿಸಿದರು. ದೇವಸ್ಥಾನದ ಹೊರಗೆ ಧೂಪ ಹಾಕಿ ನಮಿಸಿದರು.

ADVERTISEMENT
ಮುಡಿಸೇವೆಯಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಹಣ ಪಡೆದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ರಘು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ

ಅಮಾವಾಸ್ಯೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ಮಾದಪ್ಪನ ದರ್ಶನ ಪಡೆದರು. ಭಕ್ತರಿಗೆ ದಾಸೋಹ ಭವನದಲ್ಲಿ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು.

ದೇವರ ದರ್ಶನಕ್ಕೆ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಟ್ಟಕ್ಕೆ ಬರುವ ಭಕ್ತರಿಗಾಗಿ ಕೆಎಸ್‌ಆರ್‌ಟಿಸಿಯು ಕೊಳ್ಳೇಗಾಲ, ಚಾಮರಾಜನಗರ ಸೇರಿದಂತೆ ಇತರೆ ಕಡೆಗಳಿಂದ 100 ಹೆಚ್ಚುವರಿ ಬಸ್ ವ್ಯವಸ್ಥೆ‌ ಕಲ್ಪಿಸಿತ್ತು.

ಕಟ್ಟೆಗೆ ಹತ್ತಿದ ಬಸ್: ಬುಧವಾರ ಬೆಟ್ಟಕ್ಕೆ ತೆರಳಿ ವಾಪಸಾಗುತ್ತಿದ್ದ ಕೊಳ್ಳೇಗಾಲ ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ತಿರುವಿನ ಬಳಿ ರಸ್ತೆ ಬಳಿಯ ಕಟ್ಟೆ ಮೇಲೆ ಹತ್ತಿದ್ದು, ದೊಡ್ಡ ಅ‌ಪಘಾತವೊಂದು ತಪ್ಪಿದೆ. 

ಎದುರಿಗೆ ಬಂದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಚಾಲಕ ಎಡಬದಿಗೆ ಬಂದಾಗ ಬಸ್‌ ಕಟ್ಟೆ ಮೇಲೆ ಹತ್ತಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಅಲ್ಲೇ ನಿಂತಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿ ಭೇಟಿ: ಮಹದೇಶ್ವರ ಬೆಟ್ಟಕ್ಕೆ ಹೈಕೋರ್ಟ್‌ ನ್ಯಾಯಮೂರ್ತಿ ಶಿವಶಂಕರಗೌಡ ಅವರು ಬುಧವಾರ ಕುಟುಂಬ ಸಮೇತ ಭೇಟಿ ನೀಡಿ ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು.

ಮೊದಲು ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಸಾಲೂರು‌ ಮಠಕ್ಕೆ ತೆರಳಿ ಶಾಂತಮಲ್ಲಿಕಾರ್ಜುನಸ್ವಾಮಿ ಅವರ ಆಶೀರ್ವಾದ ಪಡೆದರು.

ಮುಡಿಸೇವೆ: ಹೆಚ್ಚುವರಿ ಹಣ ವಸೂಲಿ

ಅಮಾವಾಸ್ಯೆ ಅಂಗವಾಗಿ ಬೆಟ್ಟಕ್ಕೆ ಬಂದಿದ್ದ ಭಕ್ತರು ಮುಡಿಸೇವೆ ಮಾಡಲು ಮುಂದಾದರು. ಪ್ರಾಧಿಕಾರದ ವತಿಯಿಂದ ಒಂದು ಮುಡಿಸೇವೆಗೆ ₹50  ನಿಗದಿಪಡಿಸಲಾಗಿದೆ. ಹೀಗಿದ್ದರೂ ಮುಡಿ ಮಾಡುವವರು ಭಕ್ತರ ಬಳಿ ಹೆಚ್ಚುವರಿಯಾಗಿ ₹50 ರಿಂದ ₹100 ವಸೂಲಿ ಮಾಡುತ್ತಿರುವ ಬಗ್ಗೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮುಡಿಸೇವೆ ವಿಭಾಗದ ಉ‌ಸ್ತುವಾರಿ ಜನಾರ್ದನ್‌ ಅವರಿಗೆ ಕರೆ ಮಾಡಿದಾಗ ‘ನಿಮಗೆ ಇಷ್ಟ ಇದ್ದರೆ ನಿಮಗೆ ಇಷ್ಟ ಬಂದಷ್ಟು ಕೊಟ್ಟು ಹೋಗಿ’ ಎಂದು ಜೋರಿನ ಧ್ವನಿಯಲ್ಲಿ ಹೇಳಿದರು. 

ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ರಸ್ತೆ ಬದಿಯ ಕಟ್ಟೆಯ ಮೇಲೆ ಹತ್ತಿರುವುದು
ರಾಜ್ಯ ಹೈಕೋರ್ಟ್‌ ನ್ಯಾಯಮೂರ್ತಿ ಶಿವಶಂಕರಗೌಡ ಅವರು ಕುಟುಂಬ ಸಮೇತರಾಗಿ ಸಾಲೂರು ಮಠಕ್ಕೆ ಭೇಟಿ ನೀಡಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಾದ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.