ADVERTISEMENT

ತತ್ವಪದ ಎತ್ತಿಕೊಂಡವರ ಕೂಸು ಅಂಬಳೆ ಸಿದ್ದಮಣಿ

45 ವರ್ಷಗಳಿಂದ ತತ್ವ ಪದ ಪಸರಿಸಿದ ಆಕಾಶವಾಣಿ ಕಲಾವಿದೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:52 IST
Last Updated 10 ಜುಲೈ 2024, 6:52 IST
ಅಂಬಳೆ ಸಿದ್ದಮಣಿ ತಂಬೂರಿ ಬಳಸಿ ಸಂಗಡಿಗರೊಡನೆ ತತ್ವಪದ ಹಾಡಿದ ಸಂದರ್ಭ
ಅಂಬಳೆ ಸಿದ್ದಮಣಿ ತಂಬೂರಿ ಬಳಸಿ ಸಂಗಡಿಗರೊಡನೆ ತತ್ವಪದ ಹಾಡಿದ ಸಂದರ್ಭ   

ಯಳಂದೂರು: ‘ಏನೈತಿ ಜೀವನದಾಗ, ಹೋಗುತೈತೆ ಮಣ್ಣಾಗ, ಚಿಂತಿಯಲ್ಲ ಕೂಡುದೈತಿ ಜಂತಿಲ್ಲದ ಮನೆಯಾಗ..’ ಎಂಬ ಪದ ಅಲೆ ಅಲೆಯಾಗಿ ತೇಲಿ ಬರುವುದರ ಜತೆಗೆ ಕರದಲ್ಲಿ ಮೀಟಿದ  ತಂಬೂರಿ ತಂತಿಗಳ ನೀನಾದ ಹಾಡಿನ ಜೊತೆ ಬೆರೆತು ಸುಶ್ರಾವ್ಯವಾಗಿ ಮಾರ್ದನಿಸುತ್ತದೆ. ಆಲಿಸುವವರ ಕಿವಿ ಮುಟ್ಟುತ್ತಲೇ ಕೆಲ ಕ್ಷಣ ಜೀವನದ ಭಾವ, ಬಂಧನಗಳನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಅಂತಹ ಮಾಂತ್ರಿಕತೆಯನ್ನು ತತ್ವ ಪದಗಳ ಮೂಲಕ ಪಲ್ಲವಿಸುವ ಅಂಬಳೆ ಸಿದ್ದಮಣಿ ಅಪ್ಪಟ ಗ್ರಾಮೀಣ ಪ್ರತಿಭೆ.  

ತಾಲ್ಲೂಕಿನ ಅಂಬಳೆ ನಾಗರಿಕತೆಯಿಂದ ದೂರು ಇರುವ ಊರು. ಆದರೆ, ಶಿವ ಭಜನೆ, ಸೋಭಾನೆ, ಜನಪದ ಕಥೆ, ಕಾವ್ಯ, ಹಾಡು, ಹಸೆಗಳಿಗೆ ಇಲ್ಲಿ ಕೊರತೆ ಇಲ್ಲ. ಇಂತಹ ಕುಗ್ರಾಮದಲ್ಲಿ ಹಿರಿಯರಿಂದ ಬಾಯ್ದೆರೆಯಾಗಿ ಬಂದ ಭಜನೆ ಆಲಿಸುತ್ತ, ಜನ ಸಮೂಹದಲ್ಲಿ ಹಾಡುತ್ತ ನೂರಾರು ತತ್ವಪದ, ಭಜನೆಗಳ ಮೌಲ್ಯಗಳನ್ನು ಹಿಡಿದಿಟ್ಟುಕೊಂಡ ಹಿರಿಜೀವ ಸಿದ್ದಮಣಿ. 

ಸಿದ್ದಮಣಿ 65 ವಸಂತಗಳನ್ನು ಕಂಡಿದ್ದಾರೆ. ನಾಡಿನ ತುಂಬಾ ರೂಢಿಗತವಾದ ತಮ್ಮ ಕಂಠದಿಂದ ತತ್ವ ಪದಗಳನ್ನು ಹಾಡಿದ್ದಾರೆ. ಯಾವುದೇ ವೇದಿಕೆಯಲ್ಲೂ ನುಡಿ ಕಟ್ಟಬಲ್ಲರು. ಹೊಸತನ ಸೃಷ್ಟಿಸಬಲ್ಲರು, ಸಾಮಾಜಿಕ ಮೌಲ್ಯಗಳನ್ನು ಮಹತ್ತನ್ನು ಸರಳವಾಗಿ ಹೇಳಬಲ್ಲ ಕಲೆಗಾರಿಕೆ ಇವರಿಗೆ ಸಿದ್ಧಿಸಿದೆ.

ADVERTISEMENT

ಊರಜಾತ್ರೆ, ಹಬ್ಬ-ಹರಿದಿನ, ಅಮಾವಾಸ್ಯೆ, ಹುಣ್ಣಿಮೆ, ಶ್ರಾವಣ ಮಾಸಗಳಲ್ಲಿ ಇವರ ಭಜನೆ ಮತ್ತು ತತ್ವ ಪದಗಳಿಗೆ ಕೇಳುಗರು ಕಿವಿಯಾಗುತ್ತಾರೆ ಎಂದು ಚಿಂತಕ ಅಂಬಳೆ ನಾಗೇಶ್ ಹೇಳುತ್ತಾರೆ.

ದಾರ್ಶನಿಕರು, ಸಾಧು ಸಂತರು, ತತ್ವ ಪದಕಾರರು ದಾರಿ ದೀಪ ಇದ್ದಾಗೆ. ಜೀವನ ಹೇಗೆ ಇರಬೇಕು, ಸನ್ನಡತೆ, ಸದ್ಭಕ್ತಿ ಹೇಗೆ ಅರಳಬೇಕು. ಜಗತ್ತು ನೋಡುವ ದೃಷ್ಟಿ ಹೇಗಿರಬೇಕು ಎಂಬುದನ್ನು ಪದಗಳಲ್ಲಿ ಕಟ್ಟಿಕೊಡಬೇಕು. ಭಜನೆ ಮತ್ತು ತತ್ವಪದ ಇಂದಿಗೂ ಜನ ಸಾಮಾನ್ಯರನ್ನು ಋಜು ಮಾರ್ಗದಲ್ಲಿ ನಡೆಯುವಂತೆ ಪ್ರೇರಿಪಿಸಬಲ್ಲ ದಾರಿದೀಪ. ಅರ್ಥ, ಭಾವ, ಪ್ರಧಾನ ರಚನೆಗಳನ್ನು ಉಳಿಸಿಕೊಂಡು ತತ್ವಗಳ ಆಚೆಗೂ ಚಿಂತಿಸುವಂತೆ ಮಾಡುತ್ತದೆ. ಪದಗಳ ಚೊಂಗು ಹಿಡಿದು ಸಾಗಿದರೆ ಹಾಡು ಕಟ್ಟುವ ಕುಶಲತೆಯೂ ಹೊಳೆಯುತ್ತದೆ. ಭಕ್ತಿ ಮಾರ್ಗದ ಮೂಲಕ ಆಧ್ಯಾತ್ಮಿಕ ಪ್ರಪಂಚದ ದರ್ಶನಕ್ಕೂ ಪದಕಾರರು ನೆರವಾದರೆ ಹಾಡು ಸಾರ್ಥಕವಾಗುತ್ತದೆ ಎನ್ನುತ್ತಾರೆ ಸಿದ್ದಮಣಿ.

ನಿರ್ಲಕ್ಷ:

45 ವರ್ಷಗಳಿಂದ ತತ್ವ ಪದಕಾರರಾಗಿ, ಭಜನೆ ಮೇಳಗಳಲ್ಲಿ ಛಾಪು ಮೂಡಿಸಿರುವ ಸಿದ್ದಮಣಿ ಸಾವಿರಾರು ಕಾರ್ಯಕ್ರಮಗಳಲ್ಲಿ ಭಕ್ತಿ ಸುಧೆ ಹರಿಸಿದ್ದಾರೆ. ಮೈಸೂರು ಕಲಾ ಮಂದಿರ, ಜಿಲ್ಲಾ ಮಟ್ಟದ ಭಜನೆ ಸ್ಪರ್ಧೆ, ಮೈಸೂರು ದಸರಾ ಕಾರ್ಯಕ್ರಮ, ಜನಪದ ಉತ್ಸವ, ಮಹಿಳಾ ಮತ್ತು ಸಂಸ್ಕೃತಿ ಉತ್ಸವ, ಯುವಜನ ಮೇಳ, ಸುತ್ತೂರಿನ ರಾಜ್ಯ ಮಟ್ಟದ ಜಾತ್ರ ಮಹೋತ್ಸವಗಳಲ್ಲೂ ಹಾಡಿದ್ದಾರೆ.

ಮೈಸೂರು ಆಕಾಶವಾಣಿಯಲ್ಲೂ ಇವರ ವಿಶಿಷ್ಠ ಧ್ವನಿಯ ತಂಬೂರಿ ನಾದದ ಪದಗಳು ಮನೆ ಮನ ಮುಟ್ಟಿದೆ. ಆದರೆ, ಯಾರೂ ತಮ್ಮನ್ನು ಗುರುತಿಸಿಲ್ಲ ಎಂಬ ನೋವು ಇವರ ಮನದಲ್ಲಿ ಬೇರೂರಿದೆ. 4 ಮಕ್ಕಳು ಮತ್ತು ಪತಿ ಚಿಕ್ಕನಾಗಯ್ಯ ಅವರಿಗೂ ಜನಪದಗಳನ್ನು ಪರಿಚಯಿಸಿದ್ದಾರೆ. ಆದರೆ, ಈಚಿನ ಪೀಳಿಗೆ ಭಜನೆ, ತತ್ವ ಪದಗಳ ಬಗ್ಗೆ ಬೆನ್ನು ಮಾಡಿರುವುದು ಬೇಸರ ತಂದಿದೆ ಎಂಬುದು ಸಿದ್ದಮಣಿ ಅವರ ಮಾತು.

ಜನ ಸಾಮಾನ್ಯರು ತಮ್ಮೆಲ್ಲ ಭಾವ ಬಯಕೆಗೆ ಬಾಯಾಗಿ ತತ್ವ ಪದಗಳನ್ನು ಬಳಸಬಹುದು. ತಮ್ಮ ಹೃದಯದ ದೈವಿಕತೆಯನ್ನು ಪದ ರಚನೆಯ ಮೂಲಕ ಉಪಾಧಿಯಾಗಿ ಕಟ್ಟಬಹುದು. ಕಾಲಕಾಲಕ್ಕೆ ಮೌಲ್ಯದ ರೂಪಕಗಳನ್ನು ಬದಲಾಯಿಸುತ್ತ, ನಿರಕ್ಷರಿಗಳು ಶಿಷ್ಟ ಮತ್ತು ದೇಶಿ ಶೈಲಿಯಲ್ಲಿ ಹಾಡಬಹುದು. ಹಾಡಿನ ಜೊತೆ ತಂಬೂರಿ, ತಾಳ ಸೇರಿಸುವ ಮಾರ್ಗವನ್ನು ಕರಗತ ಮಾಡಿಕೊಂಡರೆ ತತ್ವಪದ ಹೊಸತನದ ಸಂಕೇತವಾಗಿ ಮೂಡುತ್ತದೆ ಎಂದು ಮಾತು ಮುಗಿಸುತ್ತಾರೆ ಸಿದ್ದಮಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.