ADVERTISEMENT

ವಿನಾಶದ ಅಂಚಿನಲ್ಲಿರುವ ಪ್ರಾಣಿ ಸಿಂಹ: ವನ್ಯಜೀವಿ ಛಾಯಾಗ್ರಾಹಕ ಮಧು ಕಳವಳ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 13:44 IST
Last Updated 11 ಆಗಸ್ಟ್ 2024, 13:44 IST
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಂಹಗಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಿಂಹದ ಚಿತ್ರ ಪ್ರದರ್ಶಿಸಿದರು. ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಪಾಲ್ಗೊಂಡಿದ್ದರು
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಂಹಗಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಿಂಹದ ಚಿತ್ರ ಪ್ರದರ್ಶಿಸಿದರು. ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಪಾಲ್ಗೊಂಡಿದ್ದರು   

ಗುಂಡ್ಲುಪೇಟೆ: ವಿಶ್ವದಲ್ಲಿ ಸುಮಾರು 23 ಸಾವಿರ ಸಿಂಹಗಳಿದ್ದು, ಭಾರತದಲ್ಲಿ ಕೇವಲ 624 ಸಿಂಹಗಳಿರುವ ಕಾರಣ ತೀರಾ ವಿನಾಶದಂಚಿನಲ್ಲಿವೆ ಎಂದು ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ತೆರಕಣಾಂಬಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸಿಂಹಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಲ್ಲಿ 2 ಬಗೆಯ ಸಿಂಹಗಳಿದ್ದು, ಆಫ್ರಿಕಾದ ಸಿಂಹ ಹಾಗೂ ಏಷ್ಯಾದ ಸಿಂಹಗಳು ಎಂದು ವಿಂಗಡಿಸಲಾಗಿದೆ. ಆಫ್ರಿಕಾದ ಸಿಂಹಗಳು ಆಫ್ರಿಕಾದಲ್ಲಿ ವಾಸವಿದ್ದರೆ ಏಷ್ಯಾದ ಸಿಂಹಗಳು ಕೇವಲ ಭಾರತದಲ್ಲಿ ಮಾತ್ರ ನೆಲೆಸಿವೆ ಎಂದರು. ಭಾರತದಲ್ಲಿ ಮಾತ್ರ ಅದೂ ಗುಜರಾತದ ಸಾಸನ್ ಗಿರ್ ವನ್ಯಜೀವಿ ಧಾಮದಲ್ಲಿ ಇರುವ ಸಿಂಹಗಳು ಭಾರತದ ಹೆಮ್ಮೆ ಎಂದು ತಿಳಿಸಿದರು.

ಮಧ್ಯ ಪ್ರದೇಶದಿಂದ ಭಾರತದ ಉತ್ತರದಲ್ಲಿ ನೆಲೆಕಂಡುಕೊಂಡಿದ್ದ ಸಿಂಹಗಳು ದೆಹಲಿಯಲ್ಲೂ ನೆಲೆಸಿದ್ದವು. ಮಾನವನ ಅತಿಯಾಸೆ, ಅಭಿವೃದ್ಧಿಯ ದಾಳಿಗೆ ಸಿಲುಕಿ ಇವು ವಿನಾಶದಂಚಿನಲ್ಲಿವೆ. ಕೇವಲ ಗಿರ್‌ನಲ್ಲಿ ನೆಲೆಸಿರುವುದರಿಂದ ಸಾಂಕ್ರಾಮಿಕ ರೋಗದ ಭಯದ ನೆರಳಲ್ಲಿ ಬದುಕಿದ್ದು, ಇವುಗಳನ್ನು ಮಧ್ಯಪ್ರದೇಶದ ಪುಲ್ಪುರ್ ಕುನೋ ಕಾಡಿಗೆ ಪರಿಚಯಿಸುವ ಕೆಲಸ ಶೀಘ್ರ ಆಗಬೇಕು ಎಂದ ಸಲಹೆ ನೀಡಿದರು.

ADVERTISEMENT

ಶಿಕ್ಷಕ ನಂಜುಂಡಸ್ವಾಮಿ ಮಾತನಾಡಿ, ಸಿಂಹಗಳು ತೀರಾ ನಾಜೂಕಿನ ಪರಿಸ್ಥಿತಿಯಲ್ಲಿದ್ದು, ಅವುಗಳ ರಕ್ಷಣೆ ಎಲ್ಲರ ಹೊಣೆ. ಸಿಂಹಗಳ ನಾಶ ಭಾರತದ ಪುರಾತನ ಸಂಸ್ಕೃತಿಯ ನಾಶವಾಗಬಲ್ಲದು ಹಾಗೂ ಪರಿಸರಕ್ಕೆ ಮಾರಕವಾಗಬಹುದು ಎಂದು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.