ADVERTISEMENT

ಹನೂರು | ಮಕ್ಕಳಲ್ಲಿ ಕೃಷಿ ಪ್ರೀತಿ ಚಿಗುರಿಸುತ್ತಿರುವ ಅನಿಷಾ ಸಂಸ್ಥೆ

ಸರ್ಕಾರಿ ಶಾಲೆಗಳಲ್ಲಿ ಕೈತೋಟಗಳ ನಿರ್ಮಾಣಕ್ಕೆ ತರಬೇತಿ, ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2024, 6:03 IST
Last Updated 13 ಜುಲೈ 2024, 6:03 IST
<div class="paragraphs"><p>ಮಕ್ಕಳಿಗೆ ವಿತರಣೆ ಮಾಡಲು ನಾಟಿ ಬಿತ್ತನೆ ಬೀಜ ತಂದಿರುವ ಅನಿಷಾ ಸಂಸ್ಥೆಯ ರಾಜನ್ ಪಳನಿಯಪ್ಪನ್</p></div>

ಮಕ್ಕಳಿಗೆ ವಿತರಣೆ ಮಾಡಲು ನಾಟಿ ಬಿತ್ತನೆ ಬೀಜ ತಂದಿರುವ ಅನಿಷಾ ಸಂಸ್ಥೆಯ ರಾಜನ್ ಪಳನಿಯಪ್ಪನ್

   

ಹನೂರು: ಶಾಲೆ ಕೇವಲ ಓದು, ಕಲಿಕೆಗೆ ಮಾತ್ರ ಸೀಮಿತಗೊಳ್ಳದೇ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾದಾಗ ಮಾತ್ರ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂಬ ಮಾತು ಹನೂರು ತಾಲ್ಲೂಕಿನ ಶೈಕ್ಷಣಿಕ ವಲಯದಲ್ಲಿ ಸದ್ದಿಲ್ಲದೆ ನಡೆಯುತ್ತಿದೆ.

ಮಾರ್ಟಳ್ಳಿ ಸಮೀಪದ ಕಡಬೂರು ಗ್ರಾಮದಲ್ಲಿರುವ ಅನಿಷಾ ಸಾವಯವ ಕೃಷಿ ಸಂಸ್ಥೆಯು ಪ್ರತಿ ವರ್ಷ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಮಕ್ಕಳಿಗೆ ಕೈತೋಟದ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಪ್ರಾಯೋಗಿಕವಾಗಿ ಕೈತೋಟಗಳ ಮಹತ್ವವನ್ನು ತಿಳಿಸುತ್ತಾ ಬಂದಿದ್ದಾರೆ. ಸತತ  ಎಂಟು ವರ್ಷಗಳಿಂದ ಈ ಕಾರ್ಯದಲ್ಲಿ ತೊಡಗಿರುವ ಅನಿಷಾ ಸಂಸ್ಥೆ ಶೈಕ್ಷಣಿಕ ವಲಯದ ಎಲ್ಲಾ ಶಾಲೆಗಳನ್ನು ತಲುಪಿದ್ದು ಮಕ್ಕಳಲ್ಲಿ ಪರಿಸರ ಹಾಗೂ ತಾಜಾ ತರಕಾರಿಗಳ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ.

ADVERTISEMENT

2006ರಲ್ಲಿ ಆರಂಭವಾದ ಅನಿಷಾ ಸಂಸ್ಥೆಯು ಎರಡು ದಶಕಗಳಿಂದ ಮಾರ್ಟಳ್ಳಿ, ಮಹದೇಶ್ವರ ಬೆಟ್ಟ ಹಾಗೂ ಸುತ್ತಮುತ್ತಲ ಹಳ್ಳಿಗಳಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ರೂಢಿಸುವುದು ಹಾಗೂ ಸಾವಯವ ಕೃಷಿ ವಿಧಾನಗಳನ್ನು ಜನರಲ್ಲಿ ಜಾಗೃತಿಗೊಳಿಸುವ ಕಾರ್ಯವನ್ನು ಮಾಡಿಕೊಂಡು ಬರುತ್ತಿದೆ.

ರೈತರಿಗೆ, ರೈತ ಮಹಿಳೆಯರಿಗೆ ವಿವಿಧ ಬಗೆಯ ಒಣಭೂಮಿ ಬೇಸಾಯದ ಸುಧಾರಿತ ಪದ್ಧತಿಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಕೃಷಿಯಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದೆ. ಆರ್ಥಿಕ ಸಮಸ್ಯೆ ಹಾಗೂ ಇತರ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿರುವ  ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಸಾಮಾಜಿಕ ಜವಾಬ್ದಾರಿಯನ್ನು ಸಂಸ್ಥೆ ಮೆರೆಯುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

2016ರಲ್ಲಿ ಇನ್ನೊಂದು ಮಜಲು ಆರಂಭಿಸಿದ ಅನಿಷಾ ಸಂಸ್ಥೆಯು ಪ್ರತಿ ವರ್ಷ ಮಕ್ಕಳಿಗೆ ಹತ್ತರಿಂದ ಹನ್ನೆರಡು ತರಹದ ನಾಟಿ ಬಿತ್ತನೆ ಬೀಜಗಳನ್ನು ಕೊಟ್ಟು ವಾರ್ಷಿಕ ಹತ್ತರಿಂದ ಹನ್ನೆರಡು ಟನ್‌ಗಳಷ್ಟು ತರಕಾರಿಗಳನ್ನು ಸಾವಯವ ಪದ್ದತಿಯಲ್ಲಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿದೆ. ಸ್ವತಃ ಶಾಲೆಗಳಲ್ಲಿ ಬೆಳೆಯುವ ಸಾವಯವ ತರಕಾರಿ ಮಧ್ಯಾಹ್ನದ ಬಿಸಿಊಟಕ್ಕೂ ಬಳಕೆಯಾಗುತ್ತಿರುವುದು ವಿಶೇಷ.

ಮಕ್ಕಳು ತರಕಾರಿ ಬಳೆದ ಬಳಿಕ ಮುಂದಿನ ಅವಧಿಗೆ ಬಿತ್ತನೆಗೆ ಬೇಕಾದ ಬಿತ್ತನೆ ಬೀಜಗಳನ್ನು ಸಂಗ್ರಹಿಸುವ ಕಲೆಯನ್ನೂ ಮಕ್ಕಳಿಗೆ ತಿಳಿಹೇಳಲಾಗುತ್ತಿದೆ. ಗ್ರಾಮೀಣ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ ಹಾಗೂ ಆಹಾರದಲ್ಲಿ ಮಿಟಮಿನ್‌ಗಳ ಕೊರತೆಗಳನ್ನು ನೀಗಿಸಲು ಸಂಸ್ಥೆಯ ಕಾರ್ಯಕ್ರಮ ಸಹಕಾರಿಯಾಗಿದೆ ಎನ್ನುತ್ತಾರೆ ಸಿಬ್ಬಂದಿ.

ವರ್ಷದ ಪ್ರಾರಂಭದಲ್ಲಿ ಮಕ್ಕಳಿಗಾಗಿ ಕೈತೋಟಗಳ ಮಹತ್ವ ತಿಳಿಸುವ ಪ್ರೆರೇಪಣಾ ತರಗತಿಗ ಆರಂಭಿಸಿ ಪ್ರಾತ್ಯಕ್ಷಿಕೆಗಳನ್ನು ನೀಡಲಾಗುತ್ತದೆ. ಬಳಿಕ ಶಾಲಾ ಕೈತೋಟದ ಅವಶ್ಯಕತೆ, ಉಪಯೋಗ ಮತ್ತು ತೋಟಮಾಡುವ ವಿಧಾನಗಳನ್ನು ವಿಡಿಯೋಗಳ ಮೂಲಕ ತಿಳಿಸಿಕೊಡಲಾಗುತ್ತದೆ. ಶಾಲೆಯಲ್ಲಿ ಲಭ್ಯವಿರುವ ವ್ಯವಸ್ಥೆಗಳಿಗೆ ಅನುಗುಣವಾಗಿ ನೀರು ಉಳಿಸುವ ಹಾಗೂ ಕಡಿಮೆ ನಿರ್ವಹಣೆ ಬೇಡುವ ತರಕಾರಿ ಬೆಳೆಗೆ ಸಲಹೆ ನೀಡಲಾಗುತ್ತದೆ. ಮಕ್ಕಳು ತಮ್ಮ ಮನೆಗಳಲ್ಲೂ ಅದೇ ರೀತಿಯಲ್ಲಿ ಕೈತೋಟಗಳನ್ನು ನಿರ್ಮಿಸಿ, ನಿರ್ವಹಿಸಲು ಪ್ರೇರೇಪಿಸಲಾಗುತ್ತಿದೆ. ಇದರಿಂದ ಮಕ್ಕಳು ಮನೆಯಲ್ಲಿಯೇ ಪೌಷ್ಟಿಕಾಂಶಯುಕ್ತ ತರಕಾರಿ ಬೆಳೆದು ಇಡೀ ಕುಟುಂಬ ಬಳಸಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸಿಬ್ಬಂದಿ.

ಸಂಸ್ಥೆಯಲ್ಲಿ ಸಂಗ್ರಹಿಸಲಾದ ನಾಟಿ ಬಿತ್ತನೆ ಬೀಜಗಳನ್ನಷ್ಟೇ ಕೈತೋಟಗಳಿಗೆ ಬಳಕೆ ಮಾಡಲಾಗುತ್ತಿದೆ. ಆಧುನಿಕತೆ ಭರಾಟೆಗೆ ಸಿಲುಕಿ ನಶಿಸುವ ಹಂತ ತಲುಪಿರುವ ನಾಟಿ ತಳಿಗಳನ್ನು ಪ್ರಚಲಿತ ಬಳಕೆಗೆ ತರುವುದು ಸಂಸ್ಥೆಯ ಉದ್ದೇಶ.

1500ಕ್ಕೂ ಹೆಚ್ಚು ಮಕ್ಕಳಿಗೆ ಅರಿವು

ಪ್ರಸಕ್ತ ವರ್ಷದಲ್ಲಿ 30 ಶಾಲೆಗಳಲ್ಲಿ ಕೈತೋಟ ಬೆಳೆಸುವ ಕಾರ್ಯಕ್ರಮ ರೂಪಿಸಿದ್ದೇವೆ. 1500ಕ್ಕೂ ಹೆಚ್ಚು ಮಕ್ಕಳಿಗೆ ಸಾವಯವ ಕೈತೋಟದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದರಿಂದ ಮಕ್ಕಳಿಗೆ ಕಲಿಕೆ ಜತೆಗೆ ಕೃಷಿ ಬಗ್ಗೆ ಆಸಕ್ತಿ ಮೂಡಿದಂತಾಗುತ್ತದೆ ಎಂದು ಕಡಬೂರು ಅನಿಷಾ ಸಂಸ್ಥೆ ರಾಜನ್ ಪಳನಿಯಪ್ಪನ್ ಹೇಳಿದರು.

ಅನಿಷಾ ಸಂಸ್ಥೆಯ ಕಾರ್ಯ ಶ್ಲಾಘನೀಯ

ವಿದ್ಯಾರ್ಥಿಗಳೇ ನೇರವಾಗಿ ಆಹಾರ ಪದಾರ್ಥಗಳನ್ನು ಬೆಳೆಯಲು ಆರಂಭಿಸಿದಾಗ ಆಹಾರದ ಮೌಲ್ಯ ಹಾಗೂ ರೈತರ ಶ್ರಮದ ಅರಿವಿಗೆ ಬರುತ್ತದೆ. ಹನೂರು ಶೈಕ್ಷಣಿಕ ವಲಯದ ವಿದ್ಯಾರ್ಥಿಗಳಿಗೆ ಇಂಥ ಅರಿವು ಮೂಡಿಸುತ್ತಿರುವ ಅನಿಷಾ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಮಹೇಶ್‌ ಹೇಳಿದರು.

ಮಕ್ಕಳಿಗೆ ಕೈತೋಟದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.