ಚಾಮರಾಜನಗರ: ಜಿಲ್ಲಾ ಪಂಚಾಯಿತಿಯ ತೆರಕಣಾಂಬಿ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಎಂ.ಅಶ್ವಿನಿ ಅವರು ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿದ್ದ ಮೈಸೂರು ವಿಭಾಗದಪ್ರಾದೇಶಿಕ ಆಯುಕ್ತ ಎನ್.ಜಯರಾಮ್ ಅವರ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಚುನಾವಣಾ ಪ್ರಕ್ರಿಯೆ ನಡೆಯಿತು.
ಜಿಲ್ಲಾ ಪಂಚಾಯಿತಿಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ನ 13 ಸದಸ್ಯರು ಹಾಗೂ ಬಿಜೆಪಿಯ ಆರು ಸದಸ್ಯರು ಚುನಾವಣಾ ಸಭೆಗೆ ಹಾಜರಾಗಿದ್ದರು.
ಪಕ್ಷದ ಆಂತರಿಕ ಒಪ್ಪಂದದಂತೆ ಕಾಂಗ್ರೆಸ್‌ನಿಂದ ಎಂ.ಅಶ್ವಿನಿ ಅವರು ಮಾತ್ರ ನಾಮಪತ್ರ ಸಲ್ಲಿಸಿದರು. ಪ್ರತಿ ಪಕ್ಷ ಬಿಜೆಪಿ ತನ್ನ ಅಭ್ಯರ್ಥಿಯನ್ನು ಹಾಕಿರಲಿಲ್ಲ.
ಸದಸ್ಯರ ಹಾಜರಾತಿಯನ್ನು ದಾಖಲಿಸಿದ ನಂತರ, ಸಲ್ಲಿಕೆಯಾಗಿದ ನಾಮಪತ್ರವನ್ನು ಪರಿಶೀಲಿಸಿದ ಎನ್.ಜಯರಾಮ್ ಅವರು ನಾಮಪತ್ರ ಅಂಗೀಕರಿಸಿದರು.
‘ಅಶ್ವಿನಿ ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅಧ್ಯಕ್ಷರಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ’ ಎಂದು ಜಯರಾಮ್ ಅವರು ಘೋಷಿಸಿದರು.
ಅಭಿನಂದಿಸದ್ದಕ್ಕೆ ಆಕ್ರೋಶ: ಆಯ್ಕೆಯನ್ನು ಘೋಷಣೆ ಮಾಡಿದ ನಂತರ ಜಯರಾಮ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯಿತಿ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್, ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಗಾಯತ್ರಿ ಅವರು ವೇದಿಕೆಯಿಂದ ಕೆಳಗಿಳಿದರು.
ಜಯರಾಮ್ ಅವರು ಅಶ್ವಿನಿ ಅವರತ್ತ ಕೈಮುಗಿದು, ಒಳ್ಳೆಯಾದಾಗಲಿ ಎಂದು ಹೇಳಿ ಹೊರಟರು. ಜಿಲ್ಲಾ ಪಂಚಾಯಿತಿ ಸಿಇಒ ಅಲ್ಲೇ ಇದ್ದರು.
ಅಧಿಕಾರಿಗಳೆಲ್ಲ ಹೊರ ಹೋಗುತ್ತಲೇ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಎಸ್.ಮಹೇಶ್ ಅವರು, ‘ಅಧ್ಯಕ್ಷರಾಗಿ ಆಯ್ಕೆ ಆದವರನ್ನು ವೇದಿಕೆ ಮೇಲೆ ಕರೆದು ಪುಷ್ಪಗುಚ್ಛ ನೀಡಿ ಅಭಿನಂದಿಸುವುದು ಇಷ್ಟರವರೆಗೆ ಪಾಲಿಸಿಕೊಂಡು ಬಂದ ಸಂಪ್ರದಾಯ. ಸೀದಾ ಹೊರಟು ಹೋಗುವುದೆಂದರೆ ಏನರ್ಥ, ಚುನಾವಣಾಧಿಕಾರಿ ವಾಪಸ್ ಬಂದು ಅಭಿನಂದನೆ ಸಲ್ಲಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆರೆಹಳ್ಳಿ ನವೀನ್, ಚೆನ್ನಪ್ಪ, ಯೋಗೇಶ್ ಸೇರಿದಂತೆ ಕಾಂಗ್ರೆಸ್‌ನ ಉಳಿದ ಸದಸ್ಯರು ಇದಕ್ಕೆ ಧ್ವನಿ ಸೇರಿಸಿದರು. ಸಿಇಒ ಹರ್ಷಲ್ ಭೋಯರ್ ನಾರಾಯಣ ಅವರು, ‘ಕೋವಿಡ್–19 ಕಾರಣಕ್ಕೆ ಪುಷ್ಪಗುಚ್ಛ ನೀಡಿಲ್ಲ. ಜಿಲ್ಲಾ ಪಂಚಾಯಿತಿ ವತಿಯಿಂದ ಎಲ್ಲ ಗೌರವವನ್ನೂ ನೀಡುತ್ತೇವೆ’ ಎಂದು ಮನವೊಲಿಸಲು ಯತ್ನಿಸಿದರು. ಆದರೆ, ಸದಸ್ಯರು ಪಟ್ಟು ಬಿಡಲಿಲ್ಲ.
‘ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನವಿದೆ. ಅಧಿಕಾರಿಗಳು ಈ ರೀತಿ ವರ್ತಿಸುವುದರ ಮೂಲಕ ಜನಪ್ರತಿನಿಧಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಆಕೆ ಪರಿಶಿಷ್ಟ ವರ್ಗದ ಹೆಣ್ಣುಮಗಳು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ’ ಎಂದು ಕೆ.ಎಸ್.ಮಹೇಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಾದೇಶಿಕ ಆಯುಕ್ತರು ಮತ್ತೆ ಬಂದು ಅಭಿನಂದಿಸುವವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ. ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿ ವಿಷಯವನ್ನು ತಿಳಿಸಿ, ಮುಂದೆ ಏನು ಮಾಡುತ್ತೀರಿ ಎಂದು ಹೇಳಿ ಎಂದು ಪಟ್ಟು ಹಿಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಅವರು, ‘ನಡೆದಿರುವುದನ್ನು ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತರುತ್ತೇನೆ. ತಕ್ಷಣಕ್ಕೆ ಕರೆ ಮಾಡಲು ಆಗುವುದಿಲ್ಲ. ಪತ್ರವನ್ನೂ ಬರೆಯುತ್ತೇನೆ. ಜಿಲ್ಲಾ ಪಂಚಾಯಿತಿ ವತಿಯಿಂದ ನೂತನ ಅಧ್ಯಕ್ಷರಿಗೆ ಅಭಿನಂದನೆ, ಗೌರವ ಸಲ್ಲಿಸಲಾಗುವುದು’ ಎಂದರು.
ಹೊರಗಡೆ ಇದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮರಿಸ್ವಾಮಿ ಅವರು, ಇದನ್ನು ದೊಡ್ಡ ವಿಚಾರ ಮಾಡಬೇಡಿ, ಬೇಗ ಹೊರಗಡೆ ಬನ್ನಿ ಎಂದು ಸದಸ್ಯರಿಗೆ ಸಲಹೆ ನೀಡಿದರು. ಆ ನಂತರ ಸದಸ್ಯರು ಮೆತ್ತಗಾದರು.
ಬಳಿಕ ಹರ್ಷಲ್ ಭೋಯರ್ ನಾರಾಯಣರಾವ್ ಅವರು ಎಂ.ಅಶ್ವಿನಿ ಅವರನ್ನು ವೇದಿಕೆಗೆ ಕರೆದು ಪುಷ್ಪಗುಚ್ಛ ನೀಡಿ ಅಭಿನಂದಿಸಿ ಶುಭಹಾರೈಸಿದರು. ಉಪಾಧ್ಯಕ್ಷ ಕೆ.ಎಸ್.ಮಹೇಶ್ ಸೇರಿದಂತೆ ಕಾಂಗ್ರೆಸ್, ಬಿಜೆಪಿಯ ಇತರ ಸದಸ್ಯರು ಕೂಡ ಹೂಮಾಲೆ ಹಾಕಿ ಶುಭಾಶಯಕೋರಿದರು.
‘ಜಿಲ್ಲಾ ಪಂಚಾಯಿತಿ ಅಭಿವೃದ್ಧಿಗೆ ಒತ್ತು’
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಎಂ.ಅಶ್ವಿನಿ ಅವರು, ‘ನಾನು ಈ ಹಂತಕ್ಕೆ ಬರಲು ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರು ಕಾರಣ. ಈ ಸಂದರ್ಭದಲ್ಲಿ ಅವರನ್ನು ನಾನು ನೆನೆಯುತ್ತೇನೆ’ ಎಂದರು.
‘ಜಿಲ್ಲಾ ಪಂಚಾಯಿತಿಗೆ ಬರುವ ಅನುದಾನವನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಳಸಲಾಗುವುದು. ಗ್ರಾಮೀಣಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತೇನೆ’ ಎಂದು ಹೇಳಿದರು.
ಬೇಸರವಾಗಿದೆ: ‘ಚುನಾವಣಾಧಿಕಾರಿ ಆಗಿದ್ದವರು ನನ್ನ ಆಯ್ಕೆಯನ್ನು ಘೋಷಣೆ ಮಾಡಿದ ನಂತರ ವೇದಿಕೆಗೆ ಕರೆದು ಅಭಿನಂದಿಸಬೇಕಿತ್ತು. ಆದರೆ, ಅದನ್ನು ಮಾಡಿಲ್ಲ. ಇದರಿಂದ ಬೇಸರವಾಗಿದೆ’ ಎಂದು ಹೇಳಿದರು.
ಶಿವಮ್ಮ ಗೈರು: ಹನೂರು ತಾಲ್ಲೂಕಿನ ಪಾಳ್ಯ ಕ್ಷೇತ್ರದ ಸದಸ್ಯೆ, ಮಾಜಿ ಅಧ್ಯಕ್ಷೆ ಶಿವಮ್ಮ ಅವರು ಚುನಾವಣಾ ಸಭೆಗೆ ಗೈರು ಆಗಿದ್ದರು.
ಪಕ್ಷದ ನಿರ್ಣಯದಂತೆ2019ರ ಅಕ್ಟೋಬರ್ ತಿಂಗಳ ಅಂತ್ಯದಲ್ಲೇ ಶಿವಮ್ಮ ರಾಜೀನಾಮೆ ನೀಡಬೇಕಿತ್ತು. ಆದರೆ, ಎರಡು ತಿಂಗಳು ತಡವಾಗಿ ರಾಜೀನಾಮೆ ನೀಡಿ, 12 ದಿನಗಳಲ್ಲಿ ವಾಪಸ್ ಪಡೆದಿದ್ದರು. ಇದರಿಂದಾಗಿ ಇತರ ಸದಸ್ಯರು ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮಾತ್ರವಲ್ಲದೇ ಸಾರ್ವಜನಿಕವಾಗಿ ಬೈದಾಡಿಕೊಂಡಿದ್ದರು. ನಂತರ ಮುಖಂಡರು ಮಧ್ಯಸ್ಥಿಕೆ ವಹಿಸಿ ಅವರು ರಾಜೀನಾಮೆ ನೀಡಿದ್ದರು.
ಚುನಾವಣಾ ಸಭೆಗೆ ಶಿವಮ್ಮ ಅವರು ಬಾರದಿದ್ದುದರ ಬಗ್ಗೆ ಅಶ್ವಿನಿ ಅವರನ್ನು ಕೇಳಿದಾಗ, ‘ನನಗೆ ಗೊತ್ತಿಲ್ಲ’ ಎಂದಷ್ಟೇ ಹೇಳಿದರು.
19 ಸದಸ್ಯರು ಹಾಜರಿ, ನಾಲ್ವರು ಗೈರು
ಕಾಂಗ್ರೆಸ್‌ನ ಕೆ.ಎಸ್.ಮಹೇಶ್, ಎಂ.ಮರುಗದಮಣಿ, ಉಮಾವತಿ ಎನ್., ಬರಗಿ ಚೆನ್ನಪ್ಪ, ಜೆ.ಯೋಗೇಶ್, ಕೆ.ಪಿ.ಸದಾಶಿವಮೂರ್ತಿ, ಬಿ.ಕೆ.ಬೊಮ್ಮಯ್ಯ, ಕೆರೆಹಳ್ಳಿ ನವೀನ್, ರಮೇಶ್, ರತ್ನಮ್ಮ, ಶಶಿಕಲಾ, ಎಸ್.ಬಸವರಾಜು, ರತ್ನಮ್ಮ, ಬಿಜೆಪಿ ಸದಸ್ಯರಾದ ಸಿ.ಎನ್.ಬಾಲರಾಜು, ಶೀಲಾ, ಡಿ.ಲೇಖಾ, ಮಂಜುಳಾ ಎನ್., ಜಯಂತಿ, ಚಂದ್ರಕಲಾ ಅವರು ಭಾಗವಹಿಸಿದ್ದರು.
ಮಾಜಿ ಅಧ್ಯಕ್ಷೆ, ಪಾಳ್ಯ ಕ್ಷೇತ್ರದ ಸದಸ್ಯ ಶಿವಮ್ಮ ಹಾಗೂ ಬಿಜೆಪಿಯ ಎ.ಆರ್.ಬಾಲರಾಜು, ಇಶ್ರಾತ್ ಭಾನು, ಎಲ್.ನಾಗರಾಜು ಅವರು ಗೈರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.