ಯಳಂದೂರು: ‘ತಾಯ್ತನ ಎಂಬುದು ಪ್ರತಿ ಹೆಣ್ಣಿನ ಜೀವನದ ಸಡಗರದ ಮಹತ್ವದ ಘಟ್ಟ’ ಎಂದು ಆಸ್ಪತ್ರೆ ವೈದ್ಯಾಧಿಕಾರಿ ಶ್ರೀಧರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ಹಾಗೂ ತಾಲ್ಲೂಕು ಆಸ್ಪತ್ರೆ ಸಂಯುಕ್ತವಾಗಿ ಆಯೋಜಿಸಿದ್ದ ಪ್ರಧಾನಮಂತ್ರಿ ಮಾತೃತ್ವ ಸುರಕ್ಷತಾ ದಿನ ಕಾರ್ಯಕ್ರಮದಲ್ಲಿ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಎಲ್ಲಾ ಸ್ತ್ರೀಯರಿಗೂ ಮಗು ಪಡೆಯುವ ಸಂತಸ ಇದ್ದೇ ಇರುತ್ತದೆ. ಮಾತೃತ್ವ, ಪೋಷಣೆ ಬಗ್ಗೆ ತಿಳಿದಿರುತ್ತದೆ. ಆದರೆ, ಗರ್ಭಿಣಿಗೆ ಹೆರಿಗೆಯ ಮೊದಲು, ಹೆರಿಗೆ ಸಂದರ್ಭ ಹಾಗೂ ಮಗುವಿನ ಆರೈಕೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಾಷ್ಟ್ರೀಯ ಸುರಕ್ಷತಾ ಮಾತೃತ್ವ ದಿನದ ಬಗ್ಗೆ ಅರಿವು ಮೂಡಿಸಲಾಗುತ್ತದೆ’ ಎಂದರು.
ಐಸಿಟಿಸಿ ವಿಭಾಗದ ಆಪ್ತ ಸಮಾಲೋಚಕ ಮಹೇಶ್ ಎಚ್ಐವಿ ಹಾಗೂ ಲೈಂಗಿಕ ರೋಗಗಳ ಬಗ್ಗೆ ಮಾಹಿತಿ ನೀಡಿ,‘ಹೆರಿಗೆಯನ್ನು ಆಸ್ಪತ್ರೆಗಳಲ್ಲಿ ಮಾಡಿಸಬೇಕು. ಇದರಿಂದ ಮಗು ಮತ್ತು ಗರ್ಭಿಣಿಯರ ಸುರಕ್ಷತೆ ಕಾಪಾಡಲು ಸಾಧ್ಯ’ ಎಂದು ತಿಳಿಸಿದರು.
ಡಾ.ಶಶಿರೇಖಾ, ‘ಗರ್ಭಧಾರಣೆ ಸಮಯದಲ್ಲಿ ಪೌಷ್ಠಿಕಾಂಶದ ಅವಶ್ಯಕತೆ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಸವಪೂರ್ವ ಆರೈಕೆ, ಎದೆಹಾಲಿನ ಮಹತ್ವ ಹಾಗೂ ಬಾಲ್ಯ ವಿವಾಹ ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತದೆ’ ಎಂದರು. ಡಾ.ನಾಗೇಂದ್ರಮೂರ್ತಿ, ಡಾ.ನಾಗೇಶ್, ಪುಟ್ಟು ಹಾಗೂ ಸುನಂದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.