ಚಾಮರಾಜನಗರ: ಜಿಲ್ಲೆಯಾದ್ಯಂತ ಮುಸ್ಲಿಮರು ಸೋಮವಾರ ಬಕ್ರೀದ್ (ಈದ್ ಉಲ್ ಅದಾ) ಹಬ್ಬವನ್ನು ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಿದರು.
ಬೆಳಿಗ್ಗೆ ಹೊಸಬಟ್ಟೆ ನಗರದ ಪಾಲಿಟೆಕ್ನಿಕ್ ಕಾಲೇಜು ಬಳಿಕ ಈದ್ಗಾ ಮೈದಾನಕ್ಕೆ ಹಾಗೂ ಅಹಲೆ ಹದೀಶ್ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ದೇವರನ್ನು ಸ್ಮರಿಸಿದರು. ಮಹಿಳೆಯರು, ವೃದ್ಧರು, ಮಕ್ಕಳು ಮನೆಗಳಲ್ಲಿ ನಮಾಜ್ ಮಾಡಿ ಕುರ್ ಆನ್ ಪಠಿಸಿದರು.
ಮಸೀದಿಗಳಲ್ಲಿ ಮೌಲ್ವಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಬ್ಬದ ಅಂಗವಾಗಿ ಮನೆಗಳಲ್ಲಿ ತರಹೇವಾರಿ ಮಾಂಸದ ಭಕ್ಷ್ಯಗಳನ್ನು ತಯಾರಿಸಲಾಗಿತ್ತು. ಗಾಳಿಪುರ ಸೇರಿದಂತೆ ಮುಸ್ಲಿಮರು ಹೆಚ್ಚಾಗಿರುವ ಮೊಹಲ್ಲಾಗಳಲ್ಲಿ ಬಿರಿಯಾನಿ ಘಮಲು ಮೂಗಿಗೆ ಬಡಿಯುತ್ತಿತ್ತು. ಸಂಬಂಧಿಗಳು ಹಾಗೂ ಕುಟುಂಬದ ಸದಸ್ಯರು ಒಟ್ಟಾಗಿ ಸಹ ಭೋಜನ ಮಾಡುವ ಮೂಲಕ ಹಬ್ಬ ಆಚರಿಸಿದರು. ನೆರೆಹೊರೆಯವರು, ಸ್ನೇಹಿತರನ್ನು ಆಮಂತ್ರಿಸಿ ಹಬ್ಬದ ಊಟ ಸವಿಯಲಾಯಿತು.
ಈದ್ಗಾ ಮೈದಾನಕ್ಕೆ ಭೇಟಿ ನೀಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮುಸ್ಲಿಮರಿಗೆ ಬಕ್ರೀದ್ ಹಬ್ಬದ ಶುಭ ಕೋರಿದರು. ಬಳಿಕ ಮಾತನಾಡಿ, ತ್ಯಾಗದ ಸಂಕೇತವಾದ ಬಕ್ರೀದ್ ಹಬ್ಬ ಎಲ್ಲರಿಗೂ ಒಳಿತು ಉಂಟು ಮಾಡಲಿ ಎಂದು ಶುಭಕೋರಿದರು.
=ಚಾಮರಾಜನಗರ ಬೈಪಾಸ್‌ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುಸಲ್ಮಾನರಿಗೆ ಶುಭಾಶಯ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.