ADVERTISEMENT

ಚಾಮರಾಜನಗರ: ಬಾಲರಾಜ್‌ ಬಿಜೆಪಿಯ ಹೊಸ ಮುಖ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2024, 0:06 IST
Last Updated 14 ಮಾರ್ಚ್ 2024, 0:06 IST
ಎಸ್‌.ಬಾಲರಾಜ್‌
ಎಸ್‌.ಬಾಲರಾಜ್‌   

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಬಾಲರಾಜ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. 

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಕೈತಪ್ಪಿದ ನಂತರ, ‌ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪ್ರಯತ್ನದಿಂದಾಗಿ ಬಿಜೆಪಿ ಸೇರಿದ್ದರು. ಬಳಿಕ ಬಿಜೆಪಿ ಅಭ್ಯರ್ಥಿ ಎನ್‌.ಮಹೇಶ್‌ ಪರವಾಗಿ ಕೆಲಸ ಮಾಡಿದ್ದರು. 

59 ವರ್ಷ ವಯಸ್ಸಿನ ಅವರು ಕೇಂದ್ರದ ಮಾಜಿ ಸಚಿವ ರಾಜಶೇಖರ ಮೂರ್ತಿಯವರ ಶಿಷ್ಯರು. ರಾಜಕೀಯ ಜೀವನ 1994ರಲ್ಲಿ ಕಾಂಗ್ರೆಸ್‌ನಿಂದ ಆರಂಭವಾಯಿತು. 1999ರಿಂದ ಚುನಾವಣಾ ರಾಜಕೀಯದಲ್ಲಿದ್ದಾರೆ. ಲೋಕಸಭೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು. 

ADVERTISEMENT

ಕೊಳ್ಳೇಗಾಲ ಕ್ಷೇತ್ರದಿಂದ 1999ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರು. 2008ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋತಿದ್ದರು. 2009ರ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದರು. 2013ರಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿಯಿಂದ ಸ್ಪರ್ಧಿಸಿ ಸೋಲುಂಡಿದ್ದರು. ಕೆಜೆಪಿಯು ಬಿಜೆಪಿಯೊಂದಿಗೆ ವಿಲೀನಗೊಂಡ ನಂತರ ಕಾಂಗ್ರೆಸ್‌ ಸೇರಿದ್ದರು. ಮಾಜಿ ಸಂಸದ ದಿವಂಗತ ಆರ್‌.ಧ್ರುವನಾರಾಯಣ ಅವರ ಆಪ್ತರಾಗಿದ್ದ ಬಾಲರಾಜ್‌, 2023ರ ವಿಧಾನಸಭಾ ಚುನಾವಣೆವರೆಗೂ ಕಾಂಗ್ರೆಸ್‌ನಲ್ಲಿದ್ದರು.

ಎಸ್‌.ಸಂಜೀವಯ್ಯ– ಲಕ್ಷ್ಮಮ್ಮ ದಂಪತಿಯ ನಾಲ್ವರು ಮಕ್ಕಳ ಪೈಕಿ ಕೊನೆಯ ಮಗನಾಗಿ 1965ರಲ್ಲಿ ಯಳಂದೂರು ತಾಲ್ಲೂಕಿನ ಮದ್ದೂರಿನಲ್ಲಿ ಜನಿಸಿದ ಅವರು ಎಂಜಿನಿಯರಿಂಗ್‌ ಪದವೀಧರರು. ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.