ADVERTISEMENT

ಕೊಳ್ಳೇಗಾಲ| ಸೀಗಮಾರಮ್ಮನಿಗೆ ನರಬಲಿ: ಸತ್ತ ವ್ಯಕ್ತಿ ಬದುಕಿ ಬಂದರು!

​ಪ್ರಜಾವಾಣಿ ವಾರ್ತೆ
Published 10 ಮೇ 2022, 7:00 IST
Last Updated 10 ಮೇ 2022, 7:00 IST
ಬಲಿ ಆಚರಣೆ
ಬಲಿ ಆಚರಣೆ    

ಕೊಳ್ಳೇಗಾಲ: ತಾಲ್ಲೂಕಿನ ಪಾಳ್ಯಗ್ರಾಮದ ಸೀಗಮಾರಮ್ಮನ ನರಬಲಿ ಹಬ್ಬ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ತಡರಾತ್ರಿಯಿಂದ‌ ಮಂಗಳವಾರ ಬೆಳಿಗ್ಗೆಯವರೆಗೆ ನಡೆಯಿತು.

ಗ್ರಾಮದ ಎಲ್ಲ ಜನಾಂಗದವರು ಒಟ್ಟಾಗಿ ಆಚರಿಸುವ ಈ ಹಬ್ಬ 19 ವರ್ಷಗಳ ಬಳಿಕ ನಡೆಯಿತು.

ಸೀಗಮಾರಮ್ಮನಿಗೆ ರಾತ್ರಿ ನರ ಬಲಿ ಕೊಟ್ಟು, ಗ್ರಾಮದ ಮಾರಮ್ಮನ ಗುಡಿಯ ಮುಂದೆ ಬಲಿ ಕೊಟ್ಟ ವ್ಯಕ್ತಿಯನ್ನು ಭಕ್ತರ ದರ್ಶನಕ್ಕೆ ಇರಿಸಿ, ಬೆಳಿಗ್ಗೆ ಸಮೀಪದ ಗುಂಡೇಗಾಲ ಗ್ರಾಮದ ಒಳಗೆರೆ ಹುಚ್ಚಮ್ಮ ದೇವಿಯ ತೀರ್ಥವನ್ನು ಪ್ರೋಕ್ಷಣೆ ಮಾಡಿದ ನಂತರ ಮೃತಪಟ್ಟ ವ್ಯಕ್ತಿಗೆ ಮತ್ತೆ ಜೀವ ಬರುತ್ತದೆ ಎಂಬ ನಂಬಿಕೆ ಭಕ್ತರದ್ದು.

ADVERTISEMENT

ಏಪ್ರಿಲ್ 24ರಂದು ಹಬ್ಬಕ್ಕೆ ಚಾಲನೆ ನೀಡಲಾಗಿದ್ದು, ಮೇ 18ರವವರೆಗೂ ನಡೆಯುತ್ತದೆ. ನರಬಲಿ ಆಚರಣೆ ಈ ಹಬ್ಬದ ಪ್ರಧಾನ ಆಚರಣೆ. ಈ ಹಬ್ಬದಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಲಿಂಗಾಯತರು ಮಡಿವಾಳ,, ಕುಂಬಾರರು ಸೇರಿದಂತೆ ಗ್ರಾಮದಲ್ಲಿರುವ ಎಲ್ಲ 15 ಜಾತಿಗಳ ಜನರು ಈ ಹಬ್ಬದಲ್ಲಿ ಒಂದಿಲ್ಲೊಂದು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ಸತ್ತವರು ಬದುಕಿ ಬಂದರು: ದೇವರಿಗೆ ಬಲಿಯಾಗುವ ವ್ಯಕ್ತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಗ್ರಾಮದ ವಿವಿಧ ದೇವಾಲಯಗಳಿಂದ ಹೊರಟ ಐದು‌ ಮೆರವಣಿಗೆಗಳು (ಹೆಬ್ಬರದವರು (ಪರಿಶಿಷ್ಟ ಜಾತಿ), ಕೇಲಿನವರು, ಬಲಿಯವರು (ಪರಿಶಿಷ್ಟ ಪಂಗಡ) ಸೀಗಮಾರಮ್ಮನ ಮುಖವಾಡ (ಮಡಿವಾಳರು), ಹಾಗೂ ಸೀಗಮಾರಮ್ಮನ ಉತ್ಸವ ಮೂರ್ತಿ (ಲಿಂಗಾಯತರು) ಮೆರವಣಿಗೆ) ಗ್ರಾಮದ ಮಧ್ಯದ ಕೂಡು ರಸ್ತೆಯಲ್ಲಿ ಸೇರುತ್ತವೆ. ಈ ಸಂದರ್ಭದಲ್ಲಿ ಕೇಲಿನವರು ತೀರ್ಥವನ್ನು ಬಲಿಯಾಗುವ ವ್ಯಕ್ತಿಗೆ ಪ್ರೋಕ್ಷಣೆ ಮಾಡಿದಾಗ, ಆತ ಪ್ರಜ್ಞೆ ಕಳೆದುಕೊಳ್ಳುತ್ತಾರೆ. ನಂತರ ಅವರನ್ನು ಗ್ರಾಮದ ಬಲಿ ದೇವರ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಗೆ ಸೀಗಮಾರಮ್ಮ ದೇವಾಲಯದ ಅರ್ಚಕ ಬಂದು ಪ್ರಜ್ಞೆ ಕಳೆದುಕೊಂಡ ವ್ಯಕ್ತಿಯ ಎದೆ ಮೇಲೆ ಕಾಲಿಟ್ಟಾಗ ಪ್ರಾಣ ಹೋಗುತ್ತದೆ ಎಂಬ ನಂಬಿಕೆ.

ಮುಂಜಾವು ನಾಲ್ಕು ಗಂಟೆ ಸಮಯದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಬಲಿ ದೇವರ ಮನೆಯಿಂದ ಮಾರಮ್ಮನ ದೇವಾಲಯಕ್ಕೆ ಮೆರವಣಿಗೆಯಲ್ಲಿ ‌ಕರೆ ತರಲಾಗುತ್ತದೆ. ಈ ಸಂದರ್ಭದಲ್ಲಿ ಬಲಿ ಬಿದ್ದ ವ್ಯಕ್ತಿಯನ್ನು ಮೇಲಕ್ಕೆ ಎಸೆಯಲಾಗುತ್ತದೆ.

ಮಾರಮ್ಮನ ಗುಡಿ ಎದುರು ಒಣ ಹುಲ್ಲಿನ ಮೇಲೆ ವ್ಯಕ್ತಿಯನ್ನು ಮಲಗಿಸಿ ಪೂಜೆ ಮಾಡಲಾಗುತ್ತದೆ. ಕಣ್ಣು ಬಾಯಿ, ಮುಖಕ್ಕೆ ಅರಿಸಿನ, ಕುಂಕುಮ ಹಾಕಲಾಗುತ್ತದೆ. ಬೆಳಿಗ್ಗೆ 8.45ರವರೆಗೂ ಭಕ್ತರಿಗೆ ದರ್ಶ‌ನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.

ನಂತರ ಸಮೀಪದ ಗುಂಡೇಗಾಲದ ಒಳಗೆರೆ ಹುಚ್ಚಮ್ಮ (ಸೀಗಮಾರಮ್ಮದೇವಿಯ ತಂಗಿ) ದೇವಸ್ಥಾನದ ತೀರ್ಥವನ್ನು‌ ಮೆರವಣಿಗೆಯ ಮೂಲಕ ತರಲಾಗುತ್ತದೆ. ಹೆಬ್ಬರದವರು, ಸೀಗಮಾರಮ್ಮನ ಮುಖವಾಡ, ಉತ್ಸವ ಮೂರ್ತಿ ಉಪಸ್ಥಿತಿಯಲ್ಲಿ ಬಲಿ ವ್ಯಕ್ತಿಗೆ ಪೂಜೆ ಮಾಡಿ‌ ಮುಖಕ್ಕೆ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಅವರು ಕಣ್ಣು ಬಿಡುತ್ತಾರೆ. ನಂತರ ಅವರನ್ನು ಹೊತ್ತುಕೊಂಡು ಸೀಗಮಾರಮ್ಮನ ದೇವಾಲಯಕ್ಕೆ ಕರೆ ತಂದು ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ.

'ಸೀಗಮಾರಮ್ಮದೇವಿ ಪ್ರಾಣ ತೆಗೆದರೆ, ಒಳಗೆರೆ ಹುಚ್ಚಮ್ಮ ಪ್ರಾಣ ನೀಡುತ್ತಾಳೆ' ಎಂಬ ನಂಬಿಕೆ ಭಕ್ತರಲ್ಲಿದೆ.

ಜನಸಾಗರ: ಈ ಹಿಂದೆ 2003ರಲ್ಲಿ ಈ ಹಬ್ಬ ನಡೆದಿತ್ತು. 19 ವರ್ಷಗಳ ನಂತರ ನಡೆಯುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಜನ ಸೇರಿದ್ದರು.

ಸಮೀಪದ ಗುಂಡೇಗಾಲ ಗ್ರಾಮದಲ್ಲೂ ಈ ಹಬ್ಬ ನಡೆಯುತ್ತದೆ. ಮುಂದಿನ ವರ್ಷ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.