ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 67 ಮತ್ತು 766ರ ಚೆಕ್‌ಪೋಸ್ಟ್‌ನಲ್ಲಿ ಅರಣ್ಯ ಇಲಾಖೆಯು ವಾಹನಗಳಿಂದ ಪಡೆಯುತ್ತಿರುವ ಹಸಿರು ಶುಲ್ಕ ಉತ್ತಮ ಆದಾಯ ತಂದುಕೊಡುತ್ತಿದೆ.
10 ತಿಂಗಳ ಅವಧಿಯಲ್ಲಿ ₹4.5 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಏಪ್ರಿಲ್ ಮೂರನೇ ವಾರದಲ್ಲಿ ಹಸಿರು ಶುಲ್ಕ ಸಂಗ್ರಹಕ್ಕೆ ಚಾಲನೆ ನೀಡಲಾಗಿತ್ತು. ನಾಲ್ಕು ಚಕ್ರದ ವಾಹನಗಳಿಗೆ ₹20, ಲಾರಿ ಸೇರಿದಂತೆ ಭಾರಿ ವಾಹನಗಳಿಗೆ ₹50 ಶುಲ್ಕ ನಿಗದಿ ಪಡಿಸಲಾಗಿದೆ.
ದ್ವಿಚಕ್ರವಾಹನಗಳಿಂದ ಶುಲ್ಕ ಪಡೆಯಲಾಗುತ್ತಿಲ್ಲ. ಉಳಿದಂತೆ ಮೈಸೂರು (ಕೆಎ 09 ಮತ್ತು ಕೆಎ 55) ಮತ್ತು ಚಾಮರಾಜನಗರ ನೋಂದಣಿ (ಕೆಎ 10) ಹೊಂದಿರುವ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ.
ಊಟಿಗೆ ಹೋಗುವ ಹೆದ್ದಾರಿಯಲ್ಲಿ ಮೇಲುಕಾಮನಹಳ್ಳಿ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್‌ಗಳು, ಕೇರಳದ ಸುಲ್ತಾನ್ ಬತ್ತೇರಿಗೆ ಹೋಗುವ ಹೆದ್ದಾರಿಯಲ್ಲಿ ಮದ್ದೂರು ಮತ್ತು ಮೂಲಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿದೆ.
‘ಪ್ರತಿ ಚೆಕ್‌ಪೋಸ್ಟ್‌ನಲ್ಲಿ ವಾರಾಂತ್ಯ ಬಿಟ್ಟು ಉಳಿದ ದಿನ ₹25 ಸಾವಿರಕ್ಕೂ ಹೆಚ್ಚು ಸಂಗ್ರಹವಾಗುತ್ತದೆ. ವಾರಾಂತ್ಯಗಳಲ್ಲಿ ಮತ್ತು ರಜಾ ದಿನಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುವುದರಿಂದ ಸಂಗ್ರಹ ಜಾಸ್ತಿಯಾಗುತ್ತದೆ. ನಾಲ್ಕು ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿ ತಿಂಗಳು ₹25 ಲಕ್ಷದಿಂದ ₹30 ಲಕ್ಷ ಸಂಗ್ರಹವಾಗುತ್ತದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.
ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಹಿಂದೆಯೇ ಹಸಿರು ಶುಲ್ಕ ವಸೂಲು ಮಾಡಲಾಗುತ್ತಿತ್ತು. ಅಲ್ಲಿ ಹೊರ ರಾಜ್ಯಗಳ ವಾಹನಗಳಿಂದ ಮಾತ್ರ ಪಡೆಯಲಾಗುತ್ತಿದೆ.
ಬಂಡೀಪುರದಲ್ಲೂ 2019ರಲ್ಲೇ ಈ ಶುಲ್ಕ ಪಡೆಯುವ ಪ್ರಸ್ತಾಪ ಇತ್ತು. ಆದರೆ, ಅನುಷ್ಠಾನಕ್ಕೆ ಬಂದಿರಲಿಲ್ಲ.
ಆರಂಭದಲ್ಲಿ ರಾಜ್ಯದ ವಾಹನಗಳಿಂದ ಶುಲ್ಕ ಪಡೆಯಲಾಗುತ್ತಿರಲಿಲ್ಲ. ಆದರೆ, ಕೆಲವು ತಿಂಗಳುಗಳ ಬಳಿಕ ಮೈಸೂರು, ಚಾಮರಾಜನಗರ ಬಿಟ್ಟು ಉಳಿದ ಜಿಲ್ಲೆಗಳ ವಾಹನಗಳಿಗೂ ಶುಲ್ಕ ವಿಧಿಸಲು ಇಲಾಖೆ ಆರಂಭಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.
‘ಅರಣ್ಯ ವನ್ಯಜೀವಿ ಸಂರಕ್ಷಣೆಗೆ ಬಳಕೆ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ‘ಚೆಕ್‌ಪೋಸ್ಟ್‌ಗಳಲ್ಲಿ ಶುಲ್ಕ ವಸೂಲಿ ಮಾಡುವ ಸಂದರ್ಭದಲ್ಲಿ ಸಿಬ್ಬಂದಿ ವಾಹನ ಸವಾರರಿಗೆ ಅರಣ್ಯದಲ್ಲಿ ಸಾಗುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ತಿಳಿಸುತ್ತಾರೆ. ಪ್ಲಾಸ್ಟಿಕ್ ಬಳಸದಂತೆ ಎಚ್ಚರ ವಹಿಸುತ್ತಾರೆ. ಪ್ಲಾಸ್ಟಿಕ್ ವಸ್ತು ನೀರಿನ ಬಾಟಲಿಗಳನ್ನು ವಶ ಪಡಿಸಿಕೊಳ್ಳಲಾಗುತ್ತಿದೆ’ ಎಂದರು. ‘ಸಂಗ್ರಹವಾಗುವ ಹಸಿರು ಶುಲ್ಕವನ್ನು ಅರಣ್ಯ ವನ್ಯಪ್ರಾಣಿಗಳ ಸಂರಕ್ಷಣೆ ಉದ್ದೇಶಕ್ಕೆ ಬಳಸಲಾಗುತ್ತಿದೆ. ಬಂಡೀಪುರದಲ್ಲಿ ಕೆಲಸ ಮಾಡುವ 500ಕ್ಕೂ ಹೆಚ್ಚು ಮುಂಚೂಣಿ ಸಿಬ್ಬಂದಿಯ ವೇತನಕ್ಕೆ ಬಳಸುತ್ತಿದ್ದೇವೆ. ಇದರಿಂದಾಗಿ ಅವರಿಗೆ ವೇತನ ಪಾವತಿಸಲು ಸರ್ಕಾರದ ಅನುದಾನಕ್ಕೆ ಕಾಯಬೇಕಾಗಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.