ಗುಂಡ್ಲುಪೇಟೆ: ಅಂತರರಾಷ್ಟ್ರೀಯ ಹುಲಿ ದಿನವಾದ ಶನಿವಾರ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಬಿಡುಗಡೆ ಮಾಡಿರುವ ಹುಲಿಗಣತಿ ವರದಿ ಪ್ರಕಾರ, ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳು ಬಂಡೀಪುರ ಅರಣ್ಯದಲ್ಲಿವೆ.
ಕೇಂದ್ರದ ವರದಿ ಪ್ರಕಾರ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ 150 ಹುಲಿಗಳು ಆಶ್ರಯ ಪಡೆದಿವೆ. 191 ಹುಲಿಗಳು ಈ ಅರಣ್ಯವನ್ನು ಬಳಸುತ್ತಿವೆ.
ಎರಡನೇ ಸ್ಥಾನದಲ್ಲಿ ಮೈಸೂರು ಜಿಲ್ಲೆಯ ನಾಗರಹೊಳೆ ಅಭಯಾರಣ್ಯ ಇದೆ. ಅಲ್ಲಿ ನಾಗರಹೊಳೆ ಕಾಡಿನಲ್ಲಿ 141 ವ್ಯಾಘ್ರಗಳಿದ್ದರೆ, 185 ಹುಲಿಗಳು ಈ ಕಾಡನ್ನು ಬಳಸುತ್ತಿವೆ.
ಮೂರು ದಿನಗಳ ಹಿಂದೆ ರಾಜ್ಯದ ಅರಣ್ಯ ಇಲಾಖೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ನಾಗರಹೊಳೆಯಲ್ಲಿ ಅತಿ ಹೆಚ್ಚು 149 ಹುಲಿಗಳಿವೆ ಎಂದು ಹೇಳಿತ್ತು. ಬಂಡೀಪುರದಲ್ಲಿ 140 ಹುಲಿಗಳು ಇವೆ ಎಂದು ಹೇಳಿತ್ತು.
ಎರಡೂ ವರದಿಗಳ ಅಂಕಿ ಅಂಶಗಳಲ್ಲಿ ವ್ಯತ್ಯಾಸಗಳಿದ್ದುದರಿಂದ ಗೊಂದಲವೂ ಉಂಟಾಗಿತ್ತು.
‘ರಾಜ್ಯ ಮಟ್ಟದಲ್ಲಿ ನೇರ ಕಣ್ಣಿಗೆ ಕಂಡಿದ್ದು ಮತ್ತು ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಸೆರೆ ಹಿಡಿದ ಚಿತ್ರಗಳನ್ನು ಆಧರಿಸಿ ಹುಲಿಗಳ ಸಂಖ್ಯೆಯನ್ನು ಲೆಕ್ಕ ಹಾಕಲಾಗಿತ್ತು. ಆದರೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (ಎನ್‌ಟಿಸಿಎ) ಕ್ಯಾಮೆರಾ ಟ್ರ್ಯಾಪ್ ಮಾತ್ರವಲ್ಲದೇ, ಹೆಜ್ಜೆ ಗುರುತು, ಹುಲಿಗಳ ಮಲಗಳ ಮಾದರಿ ಸಂಗ್ರಹಿಸಿ ನಿಗದಿತ ಸೂತ್ರದ ಆಧಾರದಲ್ಲಿ ಹುಲಿಗಳ ಸಂಖ್ಯೆಯನ್ನು ಲೆಕ್ಕ ಹಾಕುತ್ತದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದರು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವರದಿಯೇ ಅಂತಿಮ ಹಾಗೂ ಅಧಿಕೃತ ಎಂಬುದು ಅವರ ಹೇಳಿಕೆ.
ಹುಲಿಗಳ ಸಂಖ್ಯೆ ಹೆಚ್ಚಳ: ಬಂಡೀಪುರದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವರದಿಗಳೆರಡೂ ದೃಢಪಡಿಸಿವೆ. 2018ರ ಗಣತಿ ಪ್ರಕಾರ ಬಂಡೀಪುರದಲ್ಲಿ 127 ಹುಲಿಗಳಿದ್ದವು. ಅದೀಗ 150ಕ್ಕೆ ಏರಿದೆ.
ಉತ್ತರಾಖಂಡದ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ (260) ನಂತರ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಅರಣ್ಯ ಎಂಬ ಹೆಗ್ಗಳಿಕೆಗೂ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಬಂಡೀಪುರ ಪಾತ್ರವಾಗಿದೆ.
ಕೇಂದ್ರದ ಗಣತಿ ವಿವರದ ಬಗ್ಗೆ ‘ಪ್ರಜಾವಾಣಿ’ಗೆ ಪ‍್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್, ‘ರಾಜ್ಯ ಹಾಗೂ ಕೇಂದ್ರದ ಅಂಕಿ ಅಂಶಗಳಲ್ಲಿ ವ್ಯತ್ಯಾಸವಿರುವುದು ನಿಜ. ಆದರೆ, ಹುಲಿಗಳ ಸಂಖ್ಯೆ ವಿಚಾರದಲ್ಲಿ ಎನ್‌ಟಿಸಿಎಯ ವರದಿಯೇ ಅಧಿಕೃತವಾಗಿರುತ್ತದೆ. ಇಡೀ ರಾಜ್ಯದಲ್ಲಿ ಬಂಡೀಪುರ ಅರಣ್ಯದಲ್ಲಿ ಅತಿ ಹೆಚ್ಚು ಹುಲಿಗಳಿರುವುದು ನಮಗೆ ಹೆಮ್ಮೆ ಹಾಗೂ ಸಂತಸದ ವಿಚಾರ’ ಎಂದು ಹೇಳಿದರು.
ಬಿಆರ್‌ಟಿಗೆ ಮೂರನೇ ಸ್ಥಾನ
ಕೇಂದ್ರ ಸರ್ಕಾರ ಬಿಡುಗಡೆಮಾಡಿರುವ ವರದಿಯಲ್ಲಿ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಬಿಆರ್‌ಟಿ ಅರಣ್ಯದಲ್ಲಿ 37 ವ್ಯಾಘ್ರಗಳಿವೆ ಎಂದು ವರದಿ ಹೇಳಿದೆ. 60 ಹುಲಿಗಳು ಈ ಕಾಡನ್ನು ಬಳಸುತ್ತಿವೆ. ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಿದ್ದ ವರದಿಯು 39 ಹುಲಿಗಳಿವೆ ಎಂದು ಹೇಳಿತ್ತು. 2018ರ ಗಣತಿಗೆ ಹೋಲಿಸಿದರೆ ಬಿಆರ್‌ಟಿಯಲ್ಲಿ ಹುಲಿಗಳ ಸಂಖ್ಯೆಯಲ್ಲಿ ಕಡಿಮೆಯಾಗಿದೆ. ಈ ಹಿಂದೆ 49 ಹುಲಿಗಳಿವೆ ಎಂದು ಹೇಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.