ADVERTISEMENT

ಜನರ ಸಹಕಾರದಿಂದ ಅರಣ್ಯ ಸಂಪತ್ತಿನ ರಕ್ಷಣೆ: ರಮೇಶ್‌ಕುಮಾರ್‌

‘ಪ್ರಜಾವಾಣಿ’ಯೊಂದಿಗೆ ಬಂಡೀಪುರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾತು

ಮಲ್ಲೇಶ ಎಂ.
Published 25 ಫೆಬ್ರುವರಿ 2022, 6:08 IST
Last Updated 25 ಫೆಬ್ರುವರಿ 2022, 6:08 IST
ಪಿ.ರಮೇಶ್‌ಕುಮಾರ್‌
ಪಿ.ರಮೇಶ್‌ಕುಮಾರ್‌   

ಗುಂಡ್ಲುಪೇಟೆ: ‘ಬೇಸಿಗೆಯಲ್ಲಿ ಬಂಡೀ ಪುರದ ‌ಯೋಜನಾ ನಿರ್ದೇಶಕನಾಗಿ ಅಧಿಕಾರ ಸ್ವೀಕರಿಸಿರುವುದು ದೊಡ್ಡ ಸವಾಲು. ಅರಣ್ಯ ರಕ್ಷಣೆಗೆ ಕಾಡಂಚಿನ ಜನರ ಸಹಕಾರ ಅಗತ್ಯ. ಜನರ ಸಹಕಾರ ಪಡೆದು ಕರ್ತವ್ಯ ನಿಭಾಯಿಸುವೆ...’

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನೂತನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನೆ ನಿರ್ದೇಶಕ ಡಾ.ಪಿ.ರಮೇಶ್‌ ಕುಮಾರ್‌ ವಿಶ್ವಾಸದ ನುಡಿಗಳಿವು.

ಬಂಡೀಪುರ ಅರಣ್ಯ ರಕ್ಷಣೆ, ತಮ್ಮ ಮುಂದಿರುವ ಸವಾಲುಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಅವರು ಮಾತನಾಡಿದ್ದಾರೆ.

ADVERTISEMENT

ವಲಯವಾರು ಭೇಟಿ: ‘ಎರಡುದಿನದ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಬುಧವಾರ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಇಲ್ಲಿನ ಸವಾಲುಗಳ ಬಗ್ಗೆ ಚರ್ಚಿಸಿದ್ದೇನೆ. ವಲಯವಾರು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ ಕೆಲಸ ಮಾಡಲು ಆರಂಭಿಸಿದ್ದೇನೆ’ ಎಂದು ಹೇಳಿದರು.

‘ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲಿ ಕೆಲಸ ಮಾಡಿದ ಅನುಭವವಿದೆ. ಬಂಡೀಪುರಕ್ಕೆ ಹಲವು ಸಲ ಭೇಟಿ ನೀಡಿದ್ದರೂ, ಅಧಿಕಾರಿಯಾಗಿ ಈಗ ಬಂದಿದ್ದೇನೆ. ಎಲ್ಲ 13 ವಲಯಗಳಿಗೂ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ರಮೇಶ್‌ ಕುಮಾರ್‌ ಹೇಳಿದರು.

‘ಅರಣ್ಯ ರಕ್ಷಣೆಗೆ ಹಾಗೂ ಮಾನವ ವನ್ಯಜೀವಿ ಸಂಘರ್ಷ ತಡೆಯಲು ಸಮಾಜ, ಕಾಡಂಚಿನ ಜನರ ಸಹ ಕಾರವೂ ಮುಖ್ಯ. ಅವರನ್ನು ಖುದ್ದಾಗಿ ಭೇಟಿ ಮಾಡುತ್ತೇನೆ. ಅವರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅವರನ್ನೂ ಜೊತೆಗೆ ಸೇರಿಸಿಕೊಂಡು ಅರಣ್ಯ ಸಂಪತ್ತು ಉಳಿಸಲು ಶ್ರಮಿಸಲಾಗುವುದು’ ಎಂದು ವಿವರಿಸಿದರು.

‘ಬಂಡೀಪುರ ಅರಣ್ಯ ಪ್ರದೇಶವು ತಮಿಳುನಾಡು, ಕೇರಳದ ಅರಣ್ಯದೊಂದಿಗೆ ಹೊಂದಿಕೊಂಡಿದೆ. ಹಾಗಾಗಿ, ಅಲ್ಲಿನ ಇಲಾಖೆಗಳ ಸಹಕಾರ ಪಡೆದು ಕೆಲಸ ಮಾಡಬೇಕಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಳ್ಗಿಚ್ಚು ತಡೆಯಲು ಆದ್ಯತೆ
ಸುಡು ಬೇಸಿಗೆ ಆರಂಭವಾಗಿರುವುದರಿಂದ ಬಂಡೀಪುರದಲ್ಲಿ ಕಾಳ್ಗಿಚ್ಚು ಉಂಟಾಗದಂತೆ ಮಾಡಲು ಆದ್ಯತೆ ನೀಡಲಾಗುವುದು ಎಂದು ರಮೇಶ್‌ ಕುಮಾರ್‌ ಹೇಳಿದರು.

‘ಸದ್ಯ ಅರಣ್ಯ ಪ್ರದೇಶದಲ್ಲಿ ಬೆಂಕಿ ರೇಖೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಕಾಳ್ಗಿಚ್ಚಿನ ಬಗ್ಗೆ ಅರಿವು ಮೂಡಿಸಬೇಕಿದೆ. ಜೊತೆಗೆ ಹೆದ್ದಾರಿಯಲ್ಲಿ ಸಿಬ್ಬಂದಿ ಗಸ್ತು ಹೆಚ್ಚು ಮಾಡಲಾಗುವುದು’ ಎಂದು ಅವರು ವಿವರಿಸಿದರು.

ಮುಂಜಾಗ್ರತಾ ಕ್ರಮ: ಅರಣ್ಯದಲ್ಲಿ 2,600 ಕಿ.ಮೀ. ಉದ್ದದ ಬೆಂಕಿ ರೇಖೆ ನಿರ್ಮಿಸಲಾಗಿದೆ. 435 ಫೈರ್‌ ವಾಚರ್‌ಗಳನ್ನು ನೇಮಿಸಲಾಗಿದೆ. ಬಂಡೀಪುರ, ಮದ್ದೂರು, ಗೋಪಾಲ ಸ್ವಾಮಿ ವಲಯಗಳು ಸೇರಿದಂತೆ ವಲಯ ಕೇಂದ್ರದಲ್ಲಿ ಅಗ್ನಿಶಾಮಕದಳದ ದೊಡ್ಡ ವಾಹನ ಹಾಗೂ ಚಿಕ್ಕ ವಾಹನ ನಿಯೋಜಿಸಲಾಗಿದೆ.

ಬಂಡೀ‍ಪುರ ಅರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಿಗೆ ನೀರು ಹಾಕುವುದು, ಗಸ್ತು ತಿರುಗುವುದು ಸೇರಿದಂತೆ ಇತರೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.