ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸೂಕ್ಷ್ಮವಲಯ ಮತ್ತು ಬಫರ್ ವಲಯದಲ್ಲಿರುವ ಅಕ್ರಮ ಕಟ್ಟಡಗಳಿಗೆ ಸಂಬಂಧಿಸಿ ವಸ್ತುಸ್ಥಿತಿ ವರದಿ ನೀಡುವಂತೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಅರಣ್ಯ ಇಲಾಖೆಗೆ ಸೂಚಿಸಿದೆ.
‘ವಲಯದಲ್ಲಿ ವಸತಿ ಉದ್ದೇಶಗಳಿಗೆ ಕಟ್ಟಡ ನಿರ್ಮಿಸಿ ಹೋಂ ಸ್ಟೇ, ರೆಸಾರ್ಟ್‌ನಂತಹ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದ್ದು, ಕ್ರಮ ಕೈಗೊಳ್ಳಬೇಕು’ ಎಂದು ಎಂದು ಪರಿಸರ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ನೀಡಿದ ದೂರಿನ ಮೇರೆಗೆ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್‌ಗೆ ಈ ಕುರಿತು ಪತ್ರ ಬರೆದಿದೆ.
ಸಂರಕ್ಷಿತ ಪ್ರದೇಶದ ಸುತ್ತ 7.7 ಕಿ.ಮೀ ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿ 2012ರ ಅ.4ರಂದು ಅಧಿಸೂಚನೆ ಹೊರಡಿಸಲಾಗಿದೆ. ಗುಂಡ್ಲುಪೇಟೆ, ನಂಜನಗೂಡು ಮತ್ತು ಎಚ್.ಡಿ.ಕೋಟೆ ತಾಲ್ಲೂಕುಗಳ 123 ಗ್ರಾಮಗಳು ಈ ವಲಯದಲ್ಲಿವೆ. ಅಲ್ಲಿ ಕಣಿಯನಪುರ ಆನೆ, ಹುಲಿ ಕಾರಿಡಾರ್ ಕೂಡಾ ಇವೆ. ಅಲ್ಲಿ ಮನೆ, ಕೃಷಿ ಕಾರ್ಯಕ್ಕೆ ಕೊಟ್ಟಿಗೆಗಳ ನಿರ್ಮಾಣಕ್ಕಾಗಿ ಪರಿಸರ ಸೂಕ್ಷ್ಮ ವಲಯ ಮೇಲ್ವಿಚಾರಣಾ ಸಮಿತಿಯ ಅನುಮತಿ ಪಡೆಯಬೇಕು.
ಆದರೆ, ಬಂಡೀಪುರ ಬಳಿಯ ಮೇಲುಕಾಮನಹಳ್ಳಿ, ಮಂಗಲ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮನೆ, ಕೃಷಿ ಉದ್ದೇಶದ ಕಟ್ಟಡಗಳ ನೆಪದಲ್ಲಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದನ್ನು ಅರಣ್ಯಾಧಿಕಾರಿಗಳೇ ಮೂರು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದರು.
ಅಂದಿನ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಅವರು 2020ರಲ್ಲಿ, ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಆಗ ಜಿಲ್ಲಾಧಿಕಾರಿಗಳಾಗಿದ್ದ ಡಾ.ಎಂ.ಆರ್.ರವಿ ಅವರಿಗೆ ಪತ್ರ ಬರೆದಿದ್ದರು. ಮಂಗಲ, ಎಲಚೆಟ್ಟಿ, ಹಂಗಳ ಹೊಸಹಳ್ಳಿ, ಮೇಲುಕಾಮನಹಳ್ಳಿ, ಮಗುವಿನಹಳ್ಳಿ ವ್ಯಾಪ್ತಿಯ ಸರ್ವೆ ನಂಬರ್‌ಗಳಲ್ಲಿ ತಲೆಎತ್ತಿದ್ದ ಕಟ್ಟಡಗಳ ವಿವರಗಳನ್ನು ಉಲ್ಲೇಖಿಸಿದ್ದರು.
ಜಿಲ್ಲಾಧಿಕಾರಿ ಸೂಚನೆ ಅನ್ವಯ ಗುಂಡ್ಲುಪೇಟೆ ತಹಶೀಲ್ದಾರ್ ನೀಡಿದ ವರದಿ ಆಧರಿಸಿ, ಕಟ್ಟಡ ತೆರವುಗೊಳಿಸುವಂತೆ ಎಂಟು ಮಂದಿಗೆ ನೋಟಿಸ್ ನೀಡಲಾಗಿತ್ತು. ಮೂರು ಪ್ರಕರಣಗಳಲ್ಲಿ ಅನ್ಯಕ್ರಾಂತ ಮಾಡಿದ್ದ ಆದೇಶ ರದ್ದುಗೊಳಿಸಲೂ ನಿರ್ಧರಿಸಲಾಗಿತ್ತು.
ಪ್ರವಾಸೋದ್ಯಮ ಇಲಾಖೆ ಪ್ರಕಾರ, ಬಂಡೀಪುರ ವ್ಯಾಪ್ತಿಯಲ್ಲಿ ನಾಲ್ಕು ಹೋಂ ಸ್ಟೇಗಳು, ಏಳು ರೆಸಾರ್ಟ್‌ಗಳಿವೆ. ಮಳೆ ಕೊರತೆ ಹಾಗೂ ವನ್ಯಜೀವಿಗಳ ಹಾವಳಿಯ ಕಾರಣಕ್ಕೆ ರೈತರು ಬೀಳು ಬಿಟ್ಟಿದ್ದ ಜಮೀನುಗಳನ್ನು ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಸಿರಿವಂತರು ಖರೀದಿಸಿ, ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ವಾಣಿಜ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ.
ಅಕ್ರಮ –ಸಕ್ರಮ: ‘ಸೂಕ್ಷ್ಮ ವಲಯ ಮೇಲ್ವಿಚರಣಾ ಸಮಿತಿ ಅನುಮತಿ ಇಲ್ಲದೆ ಕಟ್ಟಡಗಳನ್ನು ಕಟ್ಟಿರುವವರ ವಿರುದ್ಧ 1986ರ ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್–19ರ ಅನ್ವಯ ದೂರು ದಾಖಲಿಸುವ ಕೆಲಸವಾಗುತ್ತಿಲ್ಲ’ ಎಂದು ಗಿರಿಧರ ಕುಲಕರ್ಣಿ ಹೇಳಿದರು.
ಬಂಡೀಪುರ ವ್ಯಾಪ್ತಿಯಲ್ಲಿ ಅಕ್ರಮ ನಿರ್ಮಾಣಗಳನ್ನು ನೆಲಸಮಗೊಳಿಸಬೇಕೆಂದು 2020ರಲ್ಲಿ ಜಿಲ್ಲಾಧಿಕಾರಿ ನೀಡಿದ್ದ ನೋಟಿಸ್ ಜಾರಿಗೊಳಿಸುವ ಬದಲು, ಕಟ್ಟಡವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದಿಲ್ಲವೆಂಬ ಮುಚ್ಚಳಿಕೆ ಬರೆಸಿಕೊಂಡು ಸಕ್ರಮಗೊಳಿಸಲಾಗಿದೆ. ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಗೆ ಆ ಅಧಿಕಾರವಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನಿಯಮ ಉಲ್ಲಂಘನೆ: ಗಮನ ಸೆಳೆದಿದ್ದ ಅಧಿಕಾರಿ
2016ರ ಜುಲೈ 18ರಂದು ನಡೆದ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿಯ ಮೊದಲ ಸಭೆಯಲ್ಲಿ ಅಂದಿನ ಹುಲಿ ಯೋಜನೆ ನಿರ್ದೇಶಕ, ಸಮಿತಿಯ ಸದಸ್ಯ ಕಾರ್ಯದರ್ಶಿ ಹೀರಾಲಾಲ್, ‘ಕಣಿಯನಪುರ ಆನೆ ಕಾರಿಡಾರ್ ಪ್ರದೇಶದಲ್ಲಿ ರೈತರು ಬೀಳು ಬಿಟ್ಟಿದ್ದ ಜಮೀನುಗಳನ್ನು ಖರೀದಿಸಿ, ವನ್ಯಜೀವಿ ಕಾರಿಡಾರ್ ಅಭಿವೃದ್ಧಿ ಪಡಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಆದರೆ, ದೂರದೂರಿನವರು ಖರೀದಿಸಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ’ ಎಂದಿದ್ದರು.
‘ಅವರಿಗೆ ಪ್ರತಿಕ್ರಿಯಿಸಿದ್ದ ಸಮಿತಿ ಅಧ್ಯಕ್ಷ, ಮೈಸೂರು ಪ್ರಾದೇಶಿಕ ಆಯುಕ್ತರು, ಇಂತಹ ಚಟುವಟಿಕೆ ಕಂಡುಬಂದಲ್ಲಿ ಭೂ ಪರಿವರ್ತನಾ ಆದೇಶ ರದ್ದುಪಡಿಸಲು ಕಂದಾಯ ಇಲಾಖೆಗೆ ಪತ್ರ ಬರೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ನೀಡಿದ್ದ ಭರವಸೆ ಜಾರಿಗೆ ಬಂದಿಲ್ಲ’ ಎಂದು ಗಿರಿಧರ ಕುಲಕರ್ಣಿ ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್‌ಕುಮಾರ್, ‘ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಇದೆ. ನಾವು ಸದಸ್ಯ ಕಾರ್ಯದರ್ಶಿ ಅಷ್ಟೇ. ಕಟ್ಟಡಗಳಿರುವ ಜಮೀನು ಕಂದಾಯ ಭೂಮಿಯಾಗಿರುವುದರಿಂದ ಕಂದಾಯ ಇಲಾಖೆಯವರ ಪಾತ್ರ ಹೆಚ್ಚಿರುತ್ತದೆ. ನಾವು ಅವರಿಗೆ ಸಹಕಾರ ನೀಡುತ್ತೇವೆ. ಬೇರೆ ಬೇರೆ ಇಲಾಖೆಗಳೂ ಇದಕ್ಕೆ ಸಹಕಾರ ನೀಡಬೇಕಾಗುತ್ತದೆ’ ಎಂದರು.
ಸೂಕ್ಷ್ಮ ಪರಿಸರ ವಲಯದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕೊಡಲೇಬಾರದು. ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ವಹಿಸಬೇಕು
ಗಿರಿಧರ ಕುಲಕರ್ಣಿ, ಪರಿಸರ ಸಂರಕ್ಷಣಾವಾದಿ
2012ರಲ್ಲಿ ಸೂಕ್ಷ್ಮ ವಲಯ ಅಧಿಸೂಚನೆ ಹೊರಡಿಸುವ ಮುನ್ನ ಇಲ್ಲಿ ಏನೇನು ಇದ್ದವೋ, ಅಷ್ಟನ್ನು ಉಳಿಸಿಕೊಂಡು, ಉಳಿದೆಲ್ಲ ಕಟ್ಟಡಗಳನ್ನೂ ನೆಲಸಮಗೊಳಿಸಬೇಕು
ಜಿ.ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ, ಬಿಳಿಗಿರಿರಂಗನಬೆಟ್ಟ
ಆ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ನಿರ್ದಿಷ್ಟ ಪ್ರಕರಣಗಳ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು
ಡಿ.ಎಸ್.ರಮೇಶ್, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.