ಚಾಮರಾಜನಗರ/ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಡ್ರೋನ್ ಕ್ಯಾಮರಾದಲ್ಲಿ ವಿಡಿಯೋ ಚಿತ್ರೀಕರಣ ಮಾಡಿರುವ ಪ್ರಕರಣ ಸಂಬಂಧ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ನೀಡಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ.
ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್ ಕುಮಾರ್ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದು, ‘ಬೆಟ್ಟದಲ್ಲಿ ಡ್ರೋನ್ ಬಳಕೆ ಮಾಡಲು ಅನುಮತಿ ಪಡೆದಿಲ್ಲ. ಸಂಜೆ ಅಲ್ಲಿಗೆ ಅನುಮತಿ ನೀಡಿದ್ದು ಯಾರು ಎಂಬುದೂ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ, ಅರಣ್ಯ ಇಲಾಖೆಯ ಹುಲಿ ಯೋಜನೆ ವಿಭಾಗದ ಎಪಿಸಿಸಿಎಫ್ ಅವರ ಕಚೇರಿಗೆ ದೂರು ಕೂಡ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಒಂದು ದಿನ, ಬೆಟ್ಟಕ್ಕೆ ಸಂಜೆ 4.40ರ ಬಳಿಕ ಭೇಟಿ ನೀಡಿದ್ದ ವಿಶ್ವೇಶ್ವರ ಭಟ್, ಡ್ರೋನ್ ಕ್ಯಾಮೆರಾದ ಮೂಲಕ ದೇವಾಲಯದ ಆವರಣದಲ್ಲಿ ಚಿತ್ರೀಕರಣ ನಡೆಸಿದ್ದರು. ಅದನ್ನು ಫೇಸ್‌ಬುಕ್ ಹಾಗೂ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ವಿಡಿಯೊ ಚಿತ್ರೀಕರಣ ಮಾಡುವಂತಿಲ್ಲ. ಜೊತೆಗೆ ಸಂಜೆ 4.30ರ ನಂತರ ಸಾರ್ವಜನಿಕರು ಅಲ್ಲಿಗೆ ಭೇಟಿ ನೀಡುವಂತಿಲ್ಲ. ಈ ಬಗ್ಗೆ ವಾಟ್ಸ್‌ಆ್ಯಪ್ ಗ್ರೂಪುಗಳಲ್ಲಿ ತೀವ್ರ ಚರ್ಚೆ ನಡೆದಿದೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವೇಶ್ವರ ಭಟ್, ‘ನಾನೊಬ್ಬ ಡ್ರೋನ್ ಛಾಯಾಗ್ರಾಹಕ. ಅದಕ್ಕೆ ಸಂಬಂಧಿಸಿದ ಅನುಮತಿ ನನ್ನ ಬಳಿ ಇದೆ’ ಎಂದರು.
ಸಂಜೆ 4.30ರ ನಂತರ ಭೇಟಿ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂಜೆ 4.30ರ ನಂತರ ಪ್ರವಾಸಿಗರ ಭೇಟಿಗೆ ಅವಕಾಶ ಇಲ್ಲ. ವಿಶ್ವೇಶ್ವರ ಭಟ್ ಅವರು ಆ ಬಳಿಕ ಬೆಟ್ಟಕ್ಕೆ ಹೋಗಿದ್ದಾರೆ. ಅವರೇ ಫೇಸ್‌ಬುಕ್‌ನಲ್ಲಿ ಸಂಜೆ 6 ಗಂಟೆಗೆ ಅಲ್ಲಿದ್ದುದಾಗಿ ಬರೆದುಕೊಂಡಿದ್ದಾರೆ.
‘ಭಟ್ಟರ ವಿಡಿಯೊ ಫೋಟೊಗಳನ್ನು ನೋಡಿದ್ದೇನೆ. ನಿಯಮಗಳನ್ನು ಉಲ್ಲಂಘಿಸಿ ಬೆಟ್ಟಕ್ಕೆ ಸಂಜೆ ಭೇಟಿ ನೀಡಿರುವುದು ಡ್ರೋನ್ ಕ್ಯಾಮೆರಾದಲ್ಲಿ ವಿಡಿಯೊ ತೆಗೆದಿರುವುದು ಸರಿಯಲ್ಲ. ಅರಣ್ಯ ಇಲಾಖೆಯವರು ಇದಕ್ಕೆ ಅವಕಾಶ ನೀಡಬಾರದಿತ್ತು’ ಎಂದು ಚಾಮರಾಜನಗರದ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಹೇಳಿದರು.
ಎಸಿಎಫ್‌ಗೆ ನೋಟಿಸ್: ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ಕುಮಾರ್ ಪ್ರತಿಕ್ರಿಯಿಸಿ ‘ ಈ ಬಗ್ಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನೋಟಿಸ್ ನೀಡಲಾಗಿದ್ದು ತನಿಖೆ ನಡೆಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.