ಗುಂಡ್ಲುಪೇಟೆ: ನಾಡಹಬ್ಬ ದಸರಾಗೆ ದೇಶ ವಿದೇಶಗಳಲ್ಲಿಂದ ಬರುವ ಪ್ರವಾಸಿಗರು ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಸಫಾರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ (ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್) ಸೂಕ್ತ ಮಾಹಿತಿಯ ಕೊರತೆ ಕಾಡುತ್ತಿದೆ.
ಹೆದ್ದಾರಿಯಲ್ಲಿ ಹಾಕಲಾಗಿರುವ ಸ್ವಾಗತ ಕಾಮಾನು ಕಳೆಗಿಡಗಳಿಂದ ತುಂಬಿದ್ದು ಫಲಕ ಅಸ್ಪಷ್ಟವಾಗಿ ಕಾಣುತ್ತಿದ. ಪ್ರವಾಸಿಗರಿಂದ ಸಫಾರಿ, ರಸ್ತೆ ಸುಂಕ ಸೇರಿದಂತೆ ಹಲವು ಮೂಲಗಳಿಂದ ಶುಲ್ಕ ಪಡೆಯುವ ಅರಣ್ಯ ಇಲಾಖೆ ಸ್ವಾಗತ ಕಾಮಾನು ಸರಿಪಡಿಸದಿರುವುದು ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಮೇಲುಕಾಮನಹಳ್ಳಿ ಚೆಕ್‌ಪೋಸ್ಟ್‌ನಿಂದ ಕೆಕ್ಕನಗಳ್ಳ ಹಾಗೂ ಮದ್ದೂರು ಚೆಕ್‌ಪೋಸ್ಟ್‌ನಿಂದ ಮೂಲೆಹೊಳೆವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಿಡಂಗಟಿಗಳು ಸೇರಿ ಅಪಾರ ಪ್ರಮಾಣದ ಕಳೆಗಿಡಗಳು ಬೆಳೆದು ನಿಂತಿದೆ. ಪ್ರತಿನಿತ್ಯ ಕೇರಳ ಮತ್ತು ತಮಿಳುನಾಡಿನಿಂದ ಸಫಾರಿ ಮಾಡಲು ಹಾಗೂ ದಸರಾ ಕಾರ್ಯಕ್ರಮಕ್ಕೆ ತೆರಳಲು ಈ ಮಾರ್ಗವಾಗಿ ಹೋಗುವ ಪ್ರವಾಸಿಗರು ಆಳೆತ್ತರಕ್ಕೆ ಬೆಳೆದಿರುವ ಕಳೆಗಿಡಗಳನ್ನು ಕಂಡು ಮುಖ ಸಿಂಡರಿಸಿಕೊಂಡು ಹೋಗುವಂತಾಗಿದೆ.
ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಈಗಾಗಲೇ ಕಳೆ ಗಿಡಗಳನ್ನು ಬೇರುಸಹಿತ ತೆಗೆದು ಸ್ವಚ್ಛಗೊಳಿಸಲಾಗಿದೆ. ಇದರಿಂದ ರಸ್ತೆಯ ಬದಿಯಲ್ಲಿ ಓಡಾಡುವ ಪ್ರಾಣಿಗಳನ್ನು ನೋಡಲು ಹಾಗೂ ಕಾಡಿನಿಂದ ಏಕಾಏಕಿ ರಸ್ತೆಗೆ ಪ್ರಾಣಿಗಳು ಬಂದರೆ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಅನುಕೂಲವಾಗಿದೆ ಎಂದು ಪ್ರವಾಸಿಗ ನವೀನ್ ಪೌಲ್ ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೆಳೆದಿರುವ ಕಳೆಗಿಡಗಳನ್ನು ಕತ್ತಿಯಿಂದ ಕೊಚ್ಚಲಾಗಿದ್ದು ಒಂದೆರಡು ವಾರದಲ್ಲಿ ಮತ್ತೆ ಚಿಗುರಿ ಕಳೆ ಗಿಡಗಳು ರಸ್ತೆಯ ಬದಿಯನ್ನು ಆವರಿಸಿಕೊಳ್ಳುತ್ತದೆ. ಬೇರುಸಹಿತ ಕಿತ್ತರೆ ಸಮಸ್ಯೆ ಹೆಚ್ಚು ಕಾಡದು ಎನ್ನುತ್ತಾರೆ ಪರಿಸರ ಪ್ರೇಮಿ ಶ್ರೀಕಂಠ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರು ಪ್ರಾಣಿಗಳನ್ನು ಕಂಡರೆ ರಸ್ತೆಯಲ್ಲಿ ವಾಹನ ನಿಲ್ಲಿಸಿ ಪೋಟೋ ತೆಗೆಯುವುದನ್ನು ಮಾಡುತ್ತಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಂತರವಾಗಿ ಗಸ್ತು ತಿರುಗಿದರೆ ಇಂತಹ ಘಟನೆಗಳನ್ನು ತಡೆಯಬಹುದು ಎಂಬುದು ಪರಿಸರ ಪ್ರೇಮಿಗಳ ಆಶಯ.
ಹೆದ್ದಾರಿಯ ಬದಿ ಬೆಳೆದಿರುವ ಕಳೆಗಿಡಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರೆವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.–ಪ್ರಭಾಕರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.