ADVERTISEMENT

ಗುಂಡ್ಲುಪೇಟೆ: ಹೆಣೆದುಕೊಂಡಿದ್ದ ಆನೆಯ ದಂತಕ್ಕೆ ಕತ್ತರಿ

ಬಂಡೀಪುರದ ಅಧಿಕಾರಿಗಳು, ಸಿಬ್ಬಂದಿಯಿಂದ ಅಪರೂಪದ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 21 ಮೇ 2024, 6:43 IST
Last Updated 21 ಮೇ 2024, 6:43 IST
ಗಂಡಾನೆಯ ದಂತಗಳು ಪರಸ್ಪರ ಹೆಣೆದುಕೊಂಡಿದ್ದ ಚಿತ್ರ
ಗಂಡಾನೆಯ ದಂತಗಳು ಪರಸ್ಪರ ಹೆಣೆದುಕೊಂಡಿದ್ದ ಚಿತ್ರ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವ್ಯಾಪ್ತಿಯಲ್ಲಿ ಇದೇ 8ರಂದು ಸೆರೆಹಿಡಿದಿದ್ದ 40 ವರ್ಷದ ಗಂಡಾನೆಯನ್ನು ಕಾಡಿಗೆ ಬಿಡುವುದಕ್ಕೂ ಮೊದಲು, ಅರಣ್ಯ ಇಲಾಖೆ ಸಿಬ್ಬಂದಿ ಅದರ ಎರಡೂ ದಂತಗಳನ್ನು ಕತ್ತರಿಸಿದ್ದರು! 

ಆನೆಯ ಎರಡೂ ದಂತಗಳು ಉದ್ದ ಬೆಳೆದು ಇಂಗ್ಲಿಷ್‌ನ ‘ಎಕ್ಸ್‌’ ಅಕ್ಷರದ ರೀತಿ ಕೂಡಿಕೊಂಡಿದ್ದವು. ಸೊಂಡಿಲು ಹೆಣೆದುಕೊಂಡಿದ್ದ ದಂತಗಳ ಒಳಭಾಗಕ್ಕೆ ಇದ್ದುದರಿಂದ, ಆನೆಗೆ ಸೊಂಡಿಲನ್ನು ಹೊರ ಚಾಚಲು ಆಗುತ್ತಿರಲಿಲ್ಲ. ಮೇವನ್ನು ತಿನ್ನುವಾಗ ತೊಂದರೆಯಾಗುತ್ತಿತ್ತು. 

ಈ ಆನೆಯು ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ರೈತರ ಜಮೀನುಗಳಿಗೆ ನುಗ್ಗಿ ಉಪಟಳ ನೀಡುತ್ತಿತ್ತು. ಆರು ತಿಂಗಳುಗಳ ಕಾಲ ಹಾವಳಿ ಸಹಿಸಿದ ರೈತರು, ಬಂಡೀಪುರಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾರ್ಚ್‌ 10ಕ್ಕೆ  ಭೇಟಿ ನೀಡಿದ್ದ ಸಂದರ್ಭದಲ್ಲಿ ಆನೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು. ಅವರ ಸೂಚನೆಯ ನಂತರ ಅಧಿಕಾರಿಗಳು ಏಪ್ರಿಲ್‌ ತಿಂಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. 

ADVERTISEMENT

ಏಪ್ರಿಲ್‌ 28ರಂದು ಆನೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಗಿತ್ತು. ಕಾರ್ಯಾಚರಣೆ ವೇಳೆ ಆನೆಯ ಚಲನವಲನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ, ಅದರ ದಂತಗಳು ಪರಸ್ಪರ ಹೆಣೆದುಕೊಂಡಿದ್ದನ್ನು ಗಮನಿಸಿದ್ದರು. ಇದರಿಂದಾಗಿ ಅದಕ್ಕೆ ಆಗುವ ತೊಂದರೆಗಳನ್ನು ಅವಲೋಕಿಸಿ, ಅನ್ವಯ ಎರಡೂ ದಂತಗಳನ್ನು ಕತ್ತರಿಸಲು ತೀರ್ಮಾನಿಸಿದರು. 

ಮೇ 8ರಂದು ಆನೆ ಸೆರೆ ಸಿಕ್ಕ ನಂತರ, ಅದರ ದಂತಗಳನ್ನು ಕತ್ತರಿಸಿ ನಂತರ ಬಂಡೀಪುರದ ಗುಂಡ್ರೆ  ವಲಯದಲ್ಲಿ ಬಿಡಲಾಗಿತ್ತು. ಸಿಬ್ಬಂದಿ ಈಗಲೂ ಆನೆಯ ಮೇಲೆ ನಿಗಾ ಇಟ್ಟಿದ್ದು, ಕಬಿನಿ ಹಿನ್ನೀರು ಪ್ರದೇಶದಲ್ಲಿ ಓಡಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.  

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್‌, ‘ಸೆರೆ ಹಿಡಿದ ಆನೆಗೆ ಮೇವು ತಿನ್ನಲು ಕಷ್ಟವಾಗುತ್ತಿತ್ತು. ಸೊಂಡಿಲಿನ ಚಲನೆಗೆ ಅನುಕೂಲವಾಗುವಂತೆ ಎರಡೂ ದಂತಗಳನ್ನು ಕತ್ತರಿಸಿ, ಅರಣ್ಯಕ್ಕೆ ಬಿಡಲಾಗಿದೆ. ಅದರ ಮೇಲೆ ನಿಗಾ ಇಟ್ಟಿದ್ದೇವೆ. ಈಗ ಯಾವುದೇ ತೊಂದರೆ ಇಲ್ಲ’ ಎಂದು ಹೇಳಿದರು. 

ಕಾಡಿಗೆ ಬಿಡುವುದಕ್ಕೂ ಮುನ್ನ ಎರಡೂ ದಂತಗಳನ್ನು ಕತ್ತರಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.