ಗುಂಡ್ಲುಪೇಟೆ: ದಟ್ಟ ಕಾನನದಲ್ಲಿ ಒಣಗಿದ ದೊಡ್ಡ ಮರಗಳ ಪೊಟರೆಯೊಳಗೆ ಪಕ್ಷಿಗಳ ಹಿಕ್ಕೆಯಿಂದ ಬಿದ್ದ ಬೀಜಗಳಿಂದ ಹಸಿರು ಚಿಗುರೊಡೆಯುವುದು ಸಹಜ ಪ್ರಕ್ರಿಯೆ. ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೃತಕವಾಗಿ ಈ ವಿಧಾನವನ್ನು ಅಳವಡಿಸುವ ಸಾಹಸವನ್ನು ಅರಣ್ಯ ಇಲಾಖೆ ಕೈ ಹಾಕಿದೆ.
ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿಗೆ ಕೊರತೆಯಾಗಬಾರದು ಮತ್ತು ಸಾಯುವ ಹಂತದಲ್ಲಿರುವ ಮರಗಳು ಇರುವ ಸ್ಥಳದಲ್ಲೇ ಇನ್ನೊಂದು ಗಿಡವನ್ನು ಬೆಳೆಸಬೇಕು ಎಂಬದು ಈ ವಿನೂತನ ಯೋಜನೆಯ ಹಿಂದಿನ ಉದ್ದೇಶ.
ಒಣಗಿದ ಮರದ ಪೊಟರೆಗಳಲ್ಲಿ ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿ ಸೇರಿದಂತೆ ಪ್ರಾಣಿಗಳ ಮೇವಿಗೆ ಆಗುವ ಗಿಡಗಳನ್ನು ನೆಡುವ ಕಾರ್ಯ ಸಂರಕ್ಷಿತ ಪ್ರದೇಶದಾದ್ಯಂತ ಚಾಲ್ತಿಯಲ್ಲಿದೆ. ಬಂಡೀಪುರ ವ್ಯಾಪ್ತಿಯಲ್ಲಿ 13 ವಲಯಗಳಿದ್ದು ಕನಿಷ್ಠ 10 ಸಾವಿರ ಗಿಡಗಳನ್ನು ನೆಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ಒಂದು ವಲಯದಲ್ಲಿ ಗರಿಷ್ಠ 1000 ಗಿಡಗಳನ್ನು ಈ ವಿಧಾನದ ಮೂಲಕ ಬೆಳೆಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ.
ಕಾಡಿನಲ್ಲಿರುವ ಒಣಗಿದ ಮರಗಳು ಇರುವಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಗಿಡಗಳನ್ನು ನಿರಂತರವಾಗಿ ನೆಡಲಾಗುತ್ತದೆ. ನೆಟ್ಟ ಎಲ್ಲ ಸಸಿಗಳು ಬದುಕುವುದಿಲ್ಲ. ಪ್ರಾಣಿಗಳು ಹಾಳು ಮಾಡುತ್ತವೆ. ಸಣ್ಣ ಚಿಗುರುಗಳನ್ನು ತಿನ್ನುತ್ತವೆ. ಇದನ್ನು ತಪ್ಪಿಸುವ ಪ್ರಯತ್ನವಾಗಿ ಹೊಸ ಪ್ರಯೋಗ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.
ಬುಡಕಟ್ಟು ಸಮುದಾಯದ ಸಿಬ್ಬಂದಿ ನೆರವು
ಈ ಕೆಲಸಕ್ಕೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಸಿಬ್ಬಂದಿಯ ನೆರವು ಪಡೆಯಲಾಗುತ್ತಿದೆ.
‘ಈ ರೀತಿಯಲ್ಲಿ ಗಿಡಗಳನ್ನು ಬೆಳೆಸುವುದರಿಂದ ಬೇಸಿಗೆ ಕಾಲದಲ್ಲಿ ಪ್ರಾಣಿಗಳಿಗೆ ಮೇವಿನ ಅಭಾವ ಎದುರಾಗದು. ಕಾಳ್ಗಿಚ್ಚಿನ ಸಮಯದಲ್ಲಿ ಬೆಂಕಿ ಹರಡಿ ಕಾಡು ನಾಶವಾಗುವುದು ತಪ್ಪುತ್ತದೆ ಎಂಬ ದೃಷ್ಟಿಯಿಂದ ಎಲ್ಲ ವಲಯಗಳಲ್ಲಿ ಇರುವ ಒಣಗಿದ ಮರಗಳನ್ನು ಗುರುತಿಸಿ ಸಸಿ ನೆಡುವ ಮತ್ತು, ಬೀಜ ಬಿತ್ತನೆ ಮಾಡುವ ಪ್ರಯೋಗ ಮಾಡುತ್ತಿದ್ದೇವೆ’ ಎಂದು ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಮರದ ಪೊಟರೆಗಳಲ್ಲಿ ಸಸಿ ನೆಟ್ಟು, ಅದನ್ನು ಬೆಳೆಸುವ ಕಲೆ ಬುಡಕಟ್ಟು ಜನರಿಗೆ ಕರಗತವಾಗಿದೆ. ಹಾಗಾಗಿ, ಆ ಸಮುದಾಯದ ಸಿಬ್ಬಂದಿಗೇ ಇದರ ನೇತೃತ್ವದ ವಹಿಸಲಾಗಿದೆ. ಹೆಚ್ಚಿನ ನೀರಿನ ಅಂಶ ಇದ್ದರೆ ಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಪೊಟರೆಗಳಲ್ಲಿ ಸಿಗುವ ಪೋಷಕಾಂಶಗಳ ಬಳಸಿಕೊಂಡೇ ಗಿಡಗಳು ಮರವಾಗುತ್ತವೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.