ADVERTISEMENT

ಪರಿಸರ ಸೂಕ್ಷ್ಮ ವಲಯದಲ್ಲಿ ಕಟ್ಟಡ ನಿರ್ಮಾಣ ಆರೋಪ

ಸ್ಥಳೀಯರ ಹಾಗೂ ಪರಿಸರ ವಾದಿಗಳ ಆಕ್ಷೇಪ

ಮಲ್ಲೇಶ ಎಂ.
Published 15 ಆಗಸ್ಟ್ 2024, 8:03 IST
Last Updated 15 ಆಗಸ್ಟ್ 2024, 8:03 IST
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿ ನಿರ್ಮಾಣ ವಾಗುತ್ತಿರುವ ಕಟ್ಟಡ   

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯದಲ್ಲಿ ನಿಯಮ ಮೀರಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ. ಗೋಪಾಲಸ್ವಾಮಿ ವಲಯದ ಕಚೇರಿಯಿಂದ ಕೇವಲ ಒಂದು ಕಿ.ಮೀ ಅಂತರದಲ್ಲಿ ಕಟ್ಟಡ ಕಾಮಗಾರಿ  ನಡೆಯುತ್ತಿದ್ದು ಹಸಿರು ಪರದೆ ಹೊದ್ದಿಸಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಾರ್ವನಿಕರು ದೂರಿದ್ದಾರೆ.

ಮಗುವಿನಹಳ್ಳಿ ಗ್ರಾಮದ ಸರ್ವೆ ನಂಬರ್ 6/3 ಜಮೀನಿನಲ್ಲಿ ಬೃಹತ್ ಕಟ್ಟಡ ನಿರ್ಮಾಣ ಹಂತದಲ್ಲಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕಂದಾಯ ಇಲಾಖೆಯ ಅಧಿಕಾರಿಗಳು ಕಾಮಗಾರಿ ಪರಿಶೀಲಿಸಿಲ್ಲ, ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ವರ್ಷದ ಹಿಂದೆ ಇದೇ ಜಾಗದಲ್ಲಿ ಕಾಮಗಾರಿ ನಡೆಯುತ್ತಿರುವ ಬಗ್ಗೆ ‘ಪ್ರಜಾವಾಣಿ’ ಸುದ್ದಿ ಪ್ರಕಟಿಸಿತ್ತು. ಬಳಿಕ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದ್ದರು. ಬಳಿಕ ಇದೀಗ ಮತ್ತೆ ಕಾಮಗಾರಿ ಆರಂಭವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ನಿಯಮಗಳು ಸಾರ್ವನಿಕರಿಗೆ ಮಾತ್ರ ಅನ್ವಯವಾಗುತ್ತವೆಯೇ ಉಳ್ಳವರಿಗೆ ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಪರಿಸರ ಸೂಕ್ಷ್ಮ ವಲಯದಲ್ಲಿ ತಾತ್ಕಾಲಿಕ ಉದ್ದೇಶಕ್ಕೆ ಮನೆ ಕಟ್ಟಿಕೊಳ್ಳಲು ಅನುಮತಿ ಪಡೆಯುವ ಮಾಲೀಕರು ಶಾಶ್ವತ ಕಟ್ಟಡಗಳನ್ನು ಕಟ್ಟಿ ವಾಣಿಜ್ಯ ಉದ್ದೇಶಗಳಿಗೆ ಬಳಕೆ ಮಾಡುತ್ತಾರೆ. ರೆಸಾರ್ಟ್‌, ಹೋಂಸ್ಟೇಗಳು ತಲೆ ಎತ್ತಿ ಪರಿಸರಕ್ಕೆ ಹಾನಿಯಾಗುತ್ತವೆ ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ದೂರುತ್ತಾರೆ.

‘ಸೂಕ್ಷ್ಮ ವಲಯದಲ್ಲಿ ಕಾರ್ಯಾಚರಿಸುತ್ತಿರುವ ವಾಣಿಜ್ಯ ಉದ್ದೇಶದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ (ಎನ್‌ಟಿಸಿಎ) ಪತ್ರ ಬರೆದಿದ್ದರು. ಈ ಪತ್ರದ ಆಧಾರದಲ್ಲಿ ಪ್ರಾಧಿಕಾರವು ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗೆ ಕಟ್ಟಡಗಳ ಬಗ್ಗೆ ವಸ್ತುಸ್ಥಿತಿ ವರದಿ ನೀಡುವಂತೆ ಸೂಚಿಸಿದೆ. ಆದರೆ, ಈ ವಿಚಾರದಲ್ಲಿ ಹೊಸ ಬೆಳವಣಿಗೆ ಏನೂ ಆಗಿಲ್ಲ. 

ಕಾಮಗಾರಿ ನಡೆಯುವ ಸಂದರ್ಭ ಇಲಾಖೆಯ ಸಿಬ್ಬಂದಿ ಭೇಟಿನೀಡಿದರೆ ತಾತ್ಕಾಲಿಕವಾಗಿ ಕಾಮಗಾರಿ ಸ್ಥಗಿತಗೊಳಿಸಿ ಕೆಲ ದಿನಗಳ ಬಳಿಕ ಕಾಮಗಾರಿ ಆರಂಭಿಸುತ್ತಾರೆ ಎಂದು ಪರಿಸರವಾದಿಗಳು ದೂರುತ್ತಾರೆ.

ಬಂಡೀಪುರ 1,282 ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು ಈ ಪೈಕಿ 872 ಚದರ ಕಿ.ಮೀ. ಕೋರ್‌ ಝೋನ್‌, 410 ಚದರ ಕಿ.ಮೀ. ಬಫರ್‌ ಝೋನ್‌, 82 ಚದರ ಕಿ.ಮೀ. ಟೂರಿಸಂ ಝೋನ್‌, 1 ಚದರ ಕಿ.ಮೀ. ಮಿನಿ ಸ್ಪ್ರೇಟಿವ್‌ ಝೋನ್‌ ಎಂದು ವಿಂಗಡಿಸಲ್ಪಟ್ಟಿದೆ.

ವ್ಯವಸಾಯದ ನೆಪ: ಬಂಡೀಪುರ ರಾಷ್ಟ್ರೀಯ ಉದ್ಯಾನದಂಚಿನಲ್ಲಿ ಪ್ರಾಣಿಗಳ ಹಾವಳಿಯಿಂದ ಪುನರ್ವಸತಿ ಹೊಂದಿರುವ ಗಿರಿಜನರು ಮತ್ತು ಕಾಡಂಚಿನ ಇತರೆ ರೈತರು ಕೃಷಿ ಮಾಡಲಾಗದೆ ಕೈಚೆಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರಣ್ಯದ ಚಹರೆ ಇರುವ ಬೆಟ್ಟಗುಡ್ಡಗಳನ್ನು ಒಳಗೊಂಡ ಭೂಮಿಯನ್ನು ಉದ್ಯಮಿಗಳು  ಖರೀದಿಸುತ್ತಿದ್ದು ವಾಸ್ತವ್ಯದ ಹೆಸರಿನಲ್ಲಿ ವಿಶಾಲವಾದ ಮತ್ತು ಅತ್ಯಾಧುನಿಕ ಸೌಲಭ್ಯವಿರುವ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಜಾನುವಾರು, ನಾಯಿ ಕಟ್ಟಲು, ವಸ್ತುಗಳ ದಾಸ್ತಾನಿಗೆಂದು ನಿರ್ಮಿಸುವ ಶೆಡ್‌ಗಳು ನಂತರದಲ್ಲಿ ಗೋಡೆ, ಹೆಂಚು ಮತ್ತು ಶೀಟ್‌ನ ಚಾವಣಿಯ ಕಟ್ಟಡಗಳಾಗಿ ಬದಲಾಗುತ್ತವೆ. ಹೀಗೆ ನಿಯಮ ಮೀರಿ ಕಟ್ಟಡಗಳ ನಿರ್ಮಾಣಕ್ಕೆ  ಗ್ರಾಮ ಪಂಚಾಯಿತಿ ನಿರಾಕ್ಷೇಪನ ಪತ್ರ ಕೂಡ ನೀಡುತ್ತಿರುವುದು ಬೇಸರದ ಸಂಗತಿ. ಸರ್ಕಾರದ ಇಲಾಖೆಗಳೇ ನಿಯಮ ಮೀರಿ ಅನುಮತಿ ನೀಡುವುದರಿಂದ ಸ್ಥಳೀಯರು ಏನೂ ಮಾಡಾಗದೆ ಕೂರುವಂತಾಗಿದೆ ಎನ್ನುತ್ತಾರೆ ಎಂದು ಪರಿಸರ ವಾದಿಗಳು.

ಕಾಮಗಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಶೀಘ್ರ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಅಕ್ರಮ ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು.
–ಪ್ರಭಾಕರನ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.