ADVERTISEMENT

ಇಂದು ಹಾಲರವಿ ಉತ್ಸವ

ಮಾದೇಶ್ವರನ ಸನ್ನಿಧಿಯಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 19:49 IST
Last Updated 31 ಅಕ್ಟೋಬರ್ 2024, 19:49 IST
ಮಾದೇಶ್ವರ ಸನ್ನಿಧಿಯಲ್ಲಿ ಗುರುವಾರ ವಿವಿಧ ಸೇವೆಯಲ್ಲಿ ಪಾಲ್ಗೊಂಡಿದ್ದ ಭಕ್ತರು
ಮಾದೇಶ್ವರ ಸನ್ನಿಧಿಯಲ್ಲಿ ಗುರುವಾರ ವಿವಿಧ ಸೇವೆಯಲ್ಲಿ ಪಾಲ್ಗೊಂಡಿದ್ದ ಭಕ್ತರು   

ಮಹದೇಶ್ವರ ಬೆಟ್ಟ: ದೀಪಾವಳಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಗುರುವಾರ ಮಾದೇಶ್ವರ ಸ್ವಾಮಿಗೆ ವಿಶೇಷ ಅಮಾವಾಸ್ಯೆ ಪೂಜೆ ಹಾಗೂ ವಿವಿಧ ಉತ್ಸವಾದಿಗಳು ನೆರವೇರಿದವು. ನೆರೆಯ ತಮಿಳುನಾಡು ಸೇರಿದಂತೆ ವಿವಿಧೆಡೆಯ ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದು, ಜಾತ್ರೆ ಅದ್ದೂರಿಯಾಗಿ ನಡೆಯುತ್ತಿವೆ.

ಬೇಡಗಂಪಣ ಸಮುದಾಯದ ಸರದಿ ಅರ್ಚಕರು ಮಾದೇಶ್ವರ ಸ್ವಾಮಿಯನ್ನು ಫಲಪುಷ್ಪಗಳಿಂದ ಶೃಂಗರಿಸಿ ಬಿಲ್ವಾರ್ಚನೆ, ಮಹಾಮಂಗಳಾರತಿ, ರುದ್ರಾಭಿಷೇಕ ಮಾಡಿದ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಹಾಲರುವೆ ಉತ್ಸವ ಇಂದು: ದೀಪಾವಳಿಗೆ ಮೆರುಗು ತರುವುದು ಹಾಲರುವೆ ಉತ್ಸವ. ಇದು ಬೇಡಗಂಪಣ ಸಮುದಾಯದ ಪುಟ್ಟ ಬಾಲೆಯರಿಂದ ನಡೆಯುತ್ತದೆ. ಈ ಸಮುದಾಯಕ್ಕೆ ಸೇರಿದ 101 ಬಾಲೆಯರು ಉಪವಾಸವಿದ್ದು, ಬೆಳಿಗ್ಗೆ ಮಹದೇಶ್ವರ ಬೆಟ್ಟದಿಂದ 7 ಕಿಲೋ ಮೀಟರ್ ದೂರವಿರುವ ಹಳ್ಳಕ್ಕೆ ತಲುಪಿ, ಅಲ್ಲಿ ಮಡಿ ಮಾಡಿ ತಮ್ಮ ಪೋಷಕರೊಡನೆ ಪ್ರತ್ಯೇಕವಾಗಿ ಹಾಲು ಹಳ್ಳದ ಗಂಗೆಯನ್ನು ಪುಟ್ಟ ತಾಮ್ರದ ಬಿಂದಿಗೆಯಲ್ಲಿ ತುಂಬಿಕೊಳ್ಳುತ್ತಾರೆ. ಅವುಗಳನ್ನು ಒಂದೆಡೆ ಇಟ್ಟು ಪೂಜೆ ನೆರವೇರಿಸಿದ ಬಳಿಕ ಅಲ್ಲಿಂದ ಕಾಲ್ನಡಿಗೆಯಲ್ಲಿ ಮಹದೇಶ್ವರ ಬೆಟ್ಟ ತಂಬಡಿಗೇರಿ ಮುಖ್ಯದ್ವಾರ ತಲುಪಿ  ವಿಶೇಷ ಪೂಜೆ ನೆರವೇರಿಸುತ್ತಾರೆ. ಬಳಿಕ ಮಂಗಳ ವಾದ್ಯಗಳ ಸಹಿತ ದೇವಾಲಯ ತಲುಪುತ್ತಾರೆ. ದೇವಾಲಯದ ಹೊರ ಹಾಗೂ ಒಳ ಆವರಣದಲ್ಲಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾರೆ. ಬಳಿಕ ಭಕ್ತರಿಗೆ ತೀರ್ಥ ವಿತರಿಸಲಾಗುವುದು.

ADVERTISEMENT

ವಿಶೇಷವಾಗಿ ಅಮಾವಾಸ್ಯೆ ಉತ್ಸವದಲ್ಲಿ ಪಾಲ್ಗೊಳ್ಳುವುದಕ್ಕಿಂತ ಹಾಲರವಿ ಉತ್ಸವದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳುತ್ತಾರೆ.  ಹಾಲುಹಳ್ಳದ ತೀರ್ಥವನ್ನು ಮನೆಗೆ ಕೊಂಡೊಯ್ದರೆ ಯಾವುದೇ ದೃಷ್ಠಿಯಾಗಿದ್ದರೂ ನಿವಾರಣೆಯಾಗುವುದು ಎಂಬುದು ವಾಡಿಕೆ.

ಕತ್ತಿ ಪವಾಡ

ಸುಮಾರು 7 ಕಿಲೋ ಮೀಟರ್ ದೂರದಿಂದ ಹಾಲರುವೆ ತಂದ ಬಾಲೆಯರು ಹಾಗೂ ಗಂಗೆಗೆ ದೃಷ್ಠಿ ತಾಗದಿರಲಿ ಎಂದು ತಂಬಡಿಗೇರಿಯ ಪ್ರವೇಶ ದ್ವಾರದಲ್ಲಿ ಗಂಗೆಯನ್ನು ಒಂದೆಡೆ ಇರಿಸಲಾಗುತ್ತದೆ. ಅದರ ಮುಂದೆ ಕತ್ತಿಯಿಂದ ದೃಷ್ಟಿ ತೆಗೆಯಲಾಗುತ್ತದೆ. ಈ ಕಾರ್ಯಕ್ರಮದ ನಂತರವೇ ಹಾಲರುವೆ ಉತ್ಸವ ಮುಂದುವರೆಯುವುದು ವಾಡಿಕೆ.

ಮಾದೇಶ್ವರನ ದೇವಾಲಯದಲ್ಲಿ ಆಹಾರದ ಗುಣ ಮಟ್ಟ ಪರಿಶೀಲಿಸಿದ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.