ADVERTISEMENT

ಮಳೆ: ಮೈತುಂಬಿದ ಭರಚುಕ್ಕಿ ಜಲಪಾತ

ಕಾವೇರಿ ನದಿ ನೀರಿನಮಟ್ಟ ಹೆಚ್ಚಳ, ಮೇ ತಿಂಗಳಲ್ಲೇ ಭೋರ್ಗರೆಯಲು ಆರಂಭಿಸಿದ ಜಲಧಾರೆ

ಅವಿನ್ ಪ್ರಕಾಶ್
Published 21 ಮೇ 2022, 19:31 IST
Last Updated 21 ಮೇ 2022, 19:31 IST
ನಿರಂತರ ಮಳೆಯಿಂದಾಗಿ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದಲ್ಲಿರುವ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ
ನಿರಂತರ ಮಳೆಯಿಂದಾಗಿ ಕೊಳ್ಳೇಗಾಲ ತಾಲ್ಲೂಕಿನ ಶಿವನಸಮುದ್ರದಲ್ಲಿರುವ ಭರಚುಕ್ಕಿ ಜಲಪಾತಕ್ಕೆ ಜೀವಕಳೆ ಬಂದಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ   

ಕೊಳ್ಳೇಗಾಲ: ಕೊಡಗು ಸೇರಿದಂತೆ ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾವೇರಿ ನದಿಯಲ್ಲಿ ನೀರಿನಮಟ್ಟ ಹೆಚ್ಚಾಗಿದ್ದು, ತಾಲ್ಲೂಕಿನ ಪ್ರಸಿದ್ಧ ಭರಚುಕ್ಕಿ ಜಲಪಾತ ಭೋರ್ಗರೆಯಲು ಆರಂಭಿಸಿದೆ.

ಮೂರು ದಿನಗಳಿಂದ ಜಲಪಾತದಲ್ಲಿ ಹೆಚ್ಚು ನೀರು ಕಂಡು ಬಂದಿದ್ದು, ಪ್ರವಾಸಿಗರು ಕೂಡ ಕೊರಕಲು ಕಲ್ಲಿನ ಮೂಲಕ ಧುಮ್ಮಿಕ್ಕುವ ಜಲಧಾರೆಯ ವೀಕ್ಷಣೆಗೆ ಬರುತ್ತಿದ್ದಾರೆ.

ಸಾಮಾನ್ಯವಾಗಿ ಮಳೆಗಾಲ ಆರಂಭಗೊಂಡ ಒಂದು ತಿಂಗಳ ನಂತರ, ಅಂದರೆ ಜುಲೈನಲ್ಲಿ ಜಲಪಾತಕ್ಕೆ ಜೀವಕಳೆ ಬರುತ್ತಿತ್ತು. ಆಗಸ್ಟ್‌ನಲ್ಲಿ ಭೋರ್ಗರೆಯಲು ಆರಂಭಿಸುತ್ತದೆ. ಈ ಬಾರಿ ಮೇ ಮಧ್ಯಭಾಗದಲ್ಲೇ ಜಲಧಾರೆ ಮೈತುಂಬಿದೆ.

ADVERTISEMENT

ನದಿಯಲ್ಲೂ ನೀರು: ವಾರದಿಂದೀಚೆಗೆ ಕಾವೇರಿ ನದಿಯಲ್ಲೂ ನೀರಿನ ಹರಿವು ಹೆಚ್ಚಾಗಿದೆ. ಮಳೆಯಿಂದಾಗಿ ಮಣ್ಣು ಮಿಶ್ರಿತ ಕೆಂಬಣ್ಣದ ನೀರು ಹರಿಯುತ್ತಿದೆ. ನದಿ ನೀರಿನ ರಭಸಕ್ಕೆ ಹಳೆ ಬಟ್ಟೆ, ಮಡಕೆ, ಮರದ ಚೆಕ್ಕೆ, ಕಸ ಹಾಗೂ ಪಾಸ್ಟಿಕ್ ತ್ಯಾಜ್ಯಗಳು ಕೊಚ್ಚಿಕೊಂಡು ಹೋಗುತ್ತಿವೆ.ತಾಲ್ಲೂಕಿನ ಶಿವನಸಮುದ್ರದ ಬಳಿಯ ವೆಸ್ಲಿ ಸೇತುವೆ ಬಳಿ ತ್ಯಾಜ್ಯಗಳು ನಿಂತಿವೆ.

ನಿರ್ಬಂಧ: ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಸಾರ್ವಜನಿಕರು ನದಿ ನೀರಿಗೆ ಇಳಿಯುವುದಕ್ಕೆ ತಾಲ್ಲೂಕು ಆಡಳಿತ ನಿರ್ಬಂಧ ವಿಧಿಸಿದೆ. ವೆಸ್ಲಿ ಸೇತುವೆಯ ಕೆಳಗೆ ಇಳಿಯಬಾರದು ಎಂದು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸ್ಥಳದಲ್ಲಿ ಪೊಲೀಸರನ್ನೂ ನಿಯೋಜಿಸಲಾಗಿದೆ.

‘ತಾಲ್ಲೂಕಿನ ಮುಳ್ಳೂರು, ದಾಸನಪುರ, ಹಳೆ ಹಂಪಾಪುರ, ಹರಳೆ, ಸರಗೂರು, ಧನಗೆರೆ, ಸತ್ತೇಗಾಲ, ಯಡಕುರಿಯಾ, ಶಿವನಸಮುದ್ರ, ದರ್ಗಾ ಸೇರಿದಂತೆ ನದಿ ಪಾತ್ರದ ಗ್ರಾಮಗಳಲ್ಲಿ ನೀರಿನ ರಭಸ ಹೆಚ್ಚಾದ ಕಾರಣ ನೀರಿಗೆ ಯಾರೂ ಇಳಿಯಬಾರದು. ದನಕರು, ಬಟ್ಟೆ ತೊಳೆಯುವುದು, ಸ್ನಾನ ಮಾಡುವಂತಿಲ್ಲ ಎಂದು ಈಗಾಗಲೇ ಸ್ಥಳೀಯರಿಗೆ ತಿಳಿಸಲಾಗಿದೆ’ ಎಂದು ಗ್ರಾಮಾಂತರ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಅಗತ್ಯ ಸೌಕರ್ಯಕ್ಕೆ ಆದ್ಯತೆ: ಡಿಸಿಎಫ್‌

‘ನದಿಯಲ್ಲಿ ನೀರು ಹೆಚ್ಚಾಗಿರುವ ಕಾರಣ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸಲು ಅಗತ್ಯ ಸಿದ್ಧತೆ ಮಾಡಿದ್ದೇವೆ.ಕುಡಿಯುವ ನೀರು, ಶೌಚಾಲಯ, ತ್ಯಾಜ್ಯ ಎಸೆಯಲು ಕಸದ ಬುಟ್ಟಿ, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುತ್ತಿದ್ದೇವೆ’ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಅಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭರಚುಕ್ಕಿ ಜಲಪಾತ ಪ್ರದೇಶವು ಪ್ಲಾಸ್ಟಿಕ್‌ ನಿಷೇಧಿತ ವಲಯವಾಗಿದ್ದು, ಜನರು ಪ್ಲಾಸ್ಟಿಕ್‌ ಬಳಸುವಂತಿಲ್ಲ. ಬರುವ ಪ್ರವಾಸಿಗರುಪ್ರವಾಸಿ ತಾಣಗಳನ್ನು ಸ್ವಚ್ಛವಾಗಿ ಇಡಬೇಕು’ ಎಂದು ಮನವಿ ಮಾಡಿದರು.

--

ಪ್ರತಿ ವರ್ಷ ನೀರು ಹೆಚ್ಚಾದಾಗ ನಾವು ಜಲಪಾತ ವೀಕ್ಷಣೆಗೆ ಕುಟುಂಬ ಸಮೇತವಾಗಿ ಬರುತ್ತೇವೆ. ಇಲ್ಲಿನ ಪರಿಸರದ ಸೌಂದರ್ಯವನ್ನೂ ಸವಿಯುತ್ತೇವೆ
ವಿಶ್ವೇಶ್ವರ ಭಟ್‌, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.