ADVERTISEMENT

ಭರಚುಕ್ಕಿ ಜಲಪಾತ ಕಣ್ತುಂಬಿಕೊಂಡ ಪ್ರವಾಸಿಗರು

ಶುಕ್ರವಾರದಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ, ಮುನ್ನೆಚ್ಚರಿಕಾ ಕ್ರಮ ಪಾಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 14:20 IST
Last Updated 14 ಆಗಸ್ಟ್ 2020, 14:20 IST
ಹಲವು ಪ್ರವಾಸಿಗರು ಶುಕ್ರವಾರ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿದರು
ಹಲವು ಪ್ರವಾಸಿಗರು ಶುಕ್ರವಾರ ಭರಚುಕ್ಕಿ ಜಲಪಾತವನ್ನು ವೀಕ್ಷಿಸಿದರು   

ಕೊಳ್ಳೇಗಾಲ: ನಾಲ್ಕೂವರೆ ತಿಂಗಳ ಬಳಿಕ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತವು ಶುಕ್ರವಾರದಿಂದ ಪ್ರವಾಸಿಗರ ವೀಕ್ಷಣೆಗೆ ಮುಕ್ತವಾಗಿದ್ದು, ಮೊದಲ ದಿನ ನೂರಾರು ಪ್ರವಾಸಿಗರು ಭೇಟಿ ನೀಡಿ, ನೀರಿನ ಝರಿಯ ದೃಶ್ಯ ವೈಭವವನ್ನು ಕಣ್ತುಂಬಿಕೊಂಡರು.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಜಲಪಾತ ಮೈದುಂಬಿಕೊಂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಕೋವಿಡ್‌–19 ಕಾರಣದಿಂದ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಈಗ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಭೇಟಿಗೆ ಅವಕಾಶ ನೀಡಲಾಗಿದೆ. ಮೊದಲನೆಯ ದಿನವಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಹಾಗಿದ್ದರೂ, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ದೂರದ ಊರುಗಳಿಂದ ಪ್ರವಾಸಿಗರು ಬಂದಿದ್ದರು. ಜಿಲ್ಲೆಯವರು ಕೂಡ ಜಲಪಾತವನ್ನು ವೀಕ್ಷಿಸಿದರು.

ADVERTISEMENT

‘ಮೊದಲನೆಯ ದಿನವಾಗಿರುವುದರಿಂದ ಕಡಿಮೆ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿದ್ದಾರೆ. ಶನಿವಾರ ಮತ್ತು ಭಾನುವಾರ ಹೆಚ್ಚು ಮಂದಿ ಬರುವ ನಿರೀಕ್ಷೆ ಇದೆ’ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ: ಕೋವಿಡ್–19 ತಡೆಗಾಗಿ ಪ್ರವಾಸಿ ತಾಣದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಲಪಾತ ವೀಕ್ಷಣೆಗೆ ಬರುವ ಸಾರ್ವಜನಿಕರನ್ನು ಪ್ರಮುಖ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಸ್ಯಾನಿಟೈಸರ್‌ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.