ಚಾಮರಾಜನಗರ: ಕೋಮುಸಾಮರಸ್ಯ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ, ರೈತ– ಕಾರ್ಮಿಕರ ಸಂಕಷ್ಟವನ್ನು ಮುನ್ನೆಲೆಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ‘ಭಾರತ್ ಜೋಡೊ ಯಾತ್ರೆ’ ಶುಕ್ರವಾರ (ಸೆ. 30) ರಾಜ್ಯ ಪ್ರವೇಶಿಸಲಿದೆ. ಯಾತ್ರೆ ಕೇರಳದಿಂದ ರಾಜ್ಯದ ಗಡಿಭಾಗವಾದ ಗುಂಡ್ಲುಪೇಟೆಗೆ ಬೆಳಿಗ್ಗೆ 9 ಗಂಟೆಗೆ ಪ್ರವೇಶಿಸಲಿದ್ದು, ಅದ್ದೂರಿ ಸ್ವಾಗತ ನೀಡಲು ರಾಜ್ಯದ ‘ಕೈ’ ನಾಯಕರು ಸಜ್ಜಾಗಿದ್ದಾರೆ.
ರಾಜ್ಯದಲ್ಲಿ ಈ ಯಾತ್ರೆಯ ಯಶಸ್ಸಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಲವು ತಿಂಗಳುಗಳಿಂದ ಓಡಾಟ ನಡೆಸಿದ್ದಾರೆ. ಅವರ ಬೆನ್ನಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ನಿಂತಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮಾರ್ಗದರ್ಶನ ನೀಡುತ್ತಿದ್ದಾರೆ.
ರಾಜ್ಯದಲ್ಲಿನ ಪಕ್ಷ ಸಂಘಟನೆ ಮತ್ತು ತನ್ನ ‘ಶಕ್ತಿ’ಯನ್ನು ಪ್ರದರ್ಶಿಸಬೇಕಾದ ಸವಾಲು– ಪ್ರತಿಷ್ಠೆ ಶಿವಕುಮಾರ್ ಅವರಿಗೆ ಎದುರಾಗಿದೆ. ಹೀಗಾಗಿ, ಯಾತ್ರೆ ಸಾಗಲಿರುವ ಹಾದಿಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಜನರನ್ನು ಸೇರಿಸಲು ನಾಯಕರಿಗೆ ಅವರು ಗುರಿಯನ್ನೂ ನಿಗದಿಪಡಿಸಿದ್ದಾರೆ. ಯಾವ ವಿಧಾನಸಭಾ ಕ್ಷೇತ್ರದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಯಾವ ದಿನ ಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು ಎಂಬ ವೇಳಾಪಟ್ಟಿಯನ್ನೂ ನೀಡಿದ್ದಾರೆ. ಯಾತ್ರೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮತ್ತು ಜನರನ್ನು ಸೇರಿಸುವುದನ್ನು ಆಧರಿಸಿಯೇ ಚುನಾವಣೆಯಲ್ಲಿ ಟಿಕೆಟ್ ಮತ್ತು ಪಕ್ಷದಲ್ಲಿ ಸ್ಥಾನಮಾನ ನಿರ್ಧಾರವಾಗಲಿದೆ ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ನಿತ್ಯ 20 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ರಾಹುಲ್ ಅವರೊಂದಿಗೆ ಹೆಜ್ಜೆ ಹಾಕುವ ನಿರೀಕ್ಷೆ ಕಾಂಗ್ರೆಸ್ ನಾಯಕರದ್ದು.
ಕೇರಳದ ವಯನಾಡು (ರಾಹುಲ್ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ) ಮೂಲಕ ಗುಂಡ್ಲುಪೇಟೆ ತಲುಪಲಿರುವ ‘ಭಾರತ್ ಜೋಡೊ’ ಯಾತ್ರೆ ಚಾಮರಾಜ ನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ 21 ದಿನ, 511 ಕಿ.ಮೀ ಕ್ರಮಿಸಲಿದೆ.
ಗುಂಡ್ಲುಪೇಟೆ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಶನೇಶ್ವರ ದೇವಾಲಯದ ಬಳಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಭೋಜನದ ಬಳಿಕ ರಾಹುಲ್ ಗಾಂಧಿ ಸೋಲಿಗರು, ಜೇನುಕುರುಬರು ಸೇರಿದಂತೆ ಬುಡಕಟ್ಟು ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಅಲ್ಲದೆ, ಚಾಮರಾಜನಗರದಲ್ಲಿ ಆಮ್ಲಜನಕ ದುರಂತದಲ್ಲಿ ಮೃತಪಟ್ಟವರ ಕುಟುಂಬದವರ ಜೊತೆಗೂ ಮಾತುಕತೆ ನಡೆಸಲಿದ್ದಾರೆ. ಯಾತ್ರೆ ರಾತ್ರಿ 7.30ಕ್ಕೆ ಬೇಗೂರು ತಲುಪಲಿದೆ. ಅಲ್ಲೇ ಮೊದಲ ದಿನ ರಾಹುಲ್ ಮತ್ತು ಇತರರು ವಾಸ್ತವ್ಯ ಹೂಡಲಿದ್ದಾರೆ.
ಭಾನುವಾರ (ಅಕ್ಟೋಬರ್ 2) ಬೆಳಿಗ್ಗೆ 6.30ಕ್ಕೆ ಪಾದಯಾತ್ರೆ ಆರಂಭವಾಗಲಿದೆ. ತೊಂಡವಾಡಿ ಗೇಟ್ ನಂತರ ಮೈಸೂರು ಜಿಲ್ಲೆ ಪ್ರವೇಶಿಸಲಿದೆ. ಕಳಲೆಗೇಟ್ ಬಳಿ ಊಟದ ವ್ಯವಸ್ಥೆ ಮಾಡಲಾಗಿದೆ. ಸಂಜೆ ಮೈಸೂರು ತಲುಪ
ಲಿದೆ. ಅ. 2 ರಂದು ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ ಪಕ್ಷದ ವತಿಯಿಂದ ನಡೆಯಲಿರುವ ಗಾಂಧಿ ಜಯಂತಿ ಆಚರಣೆಯಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.
1947ರಲ್ಲಿ ಸ್ವಾತಂತ್ರ್ಯಕ್ಕಾಗಿ ಭಾರತವನ್ನು ಕಾಂಗ್ರೆಸ್ ಒಗ್ಗೂಡಿಸಿತು. 75 ವರ್ಷಗಳ ನಂತರ, ಇಂದು ನಾವು ಬದಲಾವಣೆಗಾಗಿ ಏಕತೆಯ ಪ್ರತಿಜ್ಞೆಯನ್ನು ಮಾಡಿದ್ದೇವೆ
- ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ರಸ್ತೆಯುದ್ದಕ್ಕೂ ಫ್ಲೆಕ್ಸ್, ಕಟೌಟ್
ರಾಹುಲ್ ಮತ್ತು ತಂಡವನ್ನು ಸ್ವಾಗತಿಸಲು ಗುಂಡ್ಲುಪೇಟೆಯಲ್ಲಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಪಟ್ಟಣದ ಡಾ. ಬಿ.ಆರ್ ಅಂಬೇಡರ್ ಭವನದ ಮುಂಭಾಗದಲ್ಲಿ ಹೆಬ್ಬಾಗಿಲಿನಂತೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಭಾವಚಿತ್ರ ಅಳವಡಿಸಲಾಗಿದೆ. ಭವನದ ಮುಂಭಾಗ ಸಭೆಯ ಕಾರ್ಯಕ್ರಮಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸಿ ಸುಮಾರು 3 ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ರಾಹುಲ್ ಗಾಂಧಿ ಸೇರಿದಂತೆ ಯಾತ್ರೆಯಲ್ಲಿ ಪಾಲ್ಗೊಂಡವರು ಗುಡಲೂರಿನಿಂದ ಹೊರಟು ಗುಂಡ್ಲುಪೇಟೆಗೆ ಬೆಳಿಗ್ಗೆ 9ಕ್ಕೆ ಬರಲಿದ್ದು, ವೇದಿಕೆ ಕಾರ್ಯಕ್ರಮದ ಬಳಿಕ ಪಾದಯಾತ್ರೆ ಆರಂಭವಾಗಲಿದೆ.
ಗುಡಲೂರು (ತಮಿಳುನಾಡು) ವರದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಯು ಕರ್ನಾಟಕವನ್ನು ಪ್ರವೇಶಿಸುವುದಕ್ಕೂ ಮುನ್ನ ಗುರುವಾರ ಕೇರಳದಿಂದ ತಮಿಳುನಾಡಿನ ಗುಡಲೂರು ತಲುಪಿದೆ. ಸೆಪ್ಟೆಂಬರ್ 30ರಂದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಮೂಲಕ ಯಾತ್ರೆಯು ಕರ್ನಾಟಕವನ್ನು ಪ್ರವೇಶಿಸಲಿದೆ.
ಪಾದಯಾತ್ರೆಗೆ ಸೋನಿಯಾ, ಪ್ರಿಯಾಂಕಾ?
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಹಿಂಭಾಗದಲ್ಲಿರುವ ಪಕ್ಷದ ನೂತನ ಕಟ್ಟಡ ಉದ್ಘಾಟನೆ ಅ. 17 ರಂದು ನಡೆಯಲಿದ್ದು, ಕಾರ್ಯಕ್ರಮದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ. ಅದೇ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬರುವ ನಿರೀಕ್ಷೆಯಿದೆ. ಪಾದಯಾತ್ರೆಯ ಭಾಗವಾಗಿ ಬಳ್ಳಾರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಸೋನಿಯಾ ಗಾಂಧಿ, ಮಂಡ್ಯದಲ್ಲಿ ಯಾತ್ರೆ ಸಾಗುವ ವೇಳೆ ಪ್ರಿಯಾಂಕಾ ಗಾಂಧಿ ಭಾಗವಹಿಸುವ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಫ್ಲೆಕ್ಸ್ ಹರಿದ ಘಟನೆ: ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಗುಂಡ್ಲುಪೇಟೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ವತಿಯಿಂದ ಅಳವಡಿಸಿದ್ದ ‘ಕೈ’ ನಾಯಕರ ಫ್ಲೆಕ್ಸ್‌ಗಳನ್ನು ಬುಧವಾರ ಮಧ್ಯರಾತ್ರಿ ಕಿಡಿಗೇಡಿಗಳು ಹರಿದು ಹಾಕಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು, ‘ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಪೊಲೀಸರನ್ನು ಆಗ್ರಹಿಸಿದರು. ‘ಈ ಕಾರ್ಯಕ್ರಮವನ್ನು ಕದ್ದು ಮುಚ್ಚಿ ಮಾಡುತ್ತಿಲ್ಲ, ಅವರ ರಾಜಕಾರಣ ಏನಿದೆ ಅದನ್ನು ಮಾಡಲಿ, ಈ ಹೇಡಿತನ ನಾವು ಮಾಡಿಲ್ಲ. ಪೊಲೀಸರು ಕ್ರಮಕೈಗೊಂಡಿಲ್ಲ ಎಂದರೆ ನಮ್ಮ ರಾಜಕಾರಣ ನಾವೂ ಮಾಡ್ತೀವಿ’ ಎಂದರು.
ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ನಾನು ಮನಸ್ಸು ಮಾಡಿದರೆ ರಾಜ್ಯದ ಎಲ್ಲಿಯೂ ಬಿಜೆಪಿಯವರು ಕಾರ್ಯಕ್ರಮ ನಡೆಸಲು ಮತ್ತು ಫ್ಲೆಕ್ಸ್ ಹಾಕಲು ಬಿಡುವುದಿಲ್ಲ’ ಎಂದು ಗುಡುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.