ADVERTISEMENT

ಕೊಳ್ಳೇಗಾಲ | ನಾಟ್ಯ ಮಯೂರಿ ವಂದನಾ ರಾವ್‌

ನೂರಾರು ಮಕ್ಕಳಿಗೆ ಭರತನಾಟ್ಯ ತರಬೇತಿ ನೀಡುತ್ತಿರುವ ಕಲಾ ಸಾಧಕಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 6:22 IST
Last Updated 3 ಜುಲೈ 2024, 6:22 IST
ವಂದನಾ ರಾವ್‌ ಭರತನಾಟ್ಯ ಕಲಾವಿದೆ
ವಂದನಾ ರಾವ್‌ ಭರತನಾಟ್ಯ ಕಲಾವಿದೆ   

ಕೊಳ್ಳೇಗಾಲ: ಭವ್ಯ ಕಲಾ ಪರಂಪರೆ ಹೊಂದಿರುವ ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ಕಲಾ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗುರುತು ಮೂಡಿಸಿರುವ ಭರತನಾಟ್ಯ ಶಿಕ್ಷಕಿ ವಂದನಾ ರಾವ್‌ ನಾಟ್ಯವನ್ನೇ ಜೀವನವನ್ನಾಗಿಸಿಕೊಂಡಿದ್ದಾರೆ.

ಭರತನಾಟ್ಯ ಕಲಾವಿದೆಯಾಗಿ, ನಾಟ್ಯ ಶಿಕ್ಷಕಿಯಾಗಿ ಹಾಗೂ ನೃತ್ಯ ಸಂಯೋಜಕಿಯಾಗಿ ನಾಟ್ಯ ಕ್ಷೇತ್ರದಲ್ಲಿ ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಅವರು, ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳ ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಅವರ ನಾಟ್ಯಕ್ಕೆ ಹಲವರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲ್ಯದ ಕನಸು ನನಸು: ಬಾಲ್ಯದಿಂದಲೂ ಭರತನಾಟ್ಯ ಕಲಿಯಬೇಕು, ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಗುರಿ ಹೊಂದಿದ್ದ ವಂದನಾ ರಾವ್‌ ಹಂತ ಹಂತವಾಗಿ ಗುರಿಯನ್ನು ಸಾಕಾರ ಮಾಡಿಕೊಂಡಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಮುಗಿಸಿರುವ ಅವರು ಭರತ ನಾಟ್ಯ ಕಲೆಯನ್ನು ಕರಗತಮಾಡಿಕೊಂಡು ನಗರದ ವಾಸವಿ ವಿದ್ಯಾಕೇಂದ್ರದ ಶಾಲೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿದ್ದು, ಮಕ್ಕಳಿಗೆ ನಾಟ್ಯಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ವಿದ್ಯಾರ್ಥಿ ದಿಸೆಯಲ್ಲಿ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ನಾಟ್ಯ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ADVERTISEMENT

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನವರಾದ ವಂದನಾ ರಾವ್‌ ಪ್ರಸಿದ್ಧ ಭರತನಾಟ್ಯ ಕಲಾವಿದೆ ಗುರು ವಿದ್ಯಾ ಶಶಿಧರ್ ಅವರ ಭರತನಾಟ್ಯ ಅಕಾಡೆಮಿಯಲ್ಲಿ ನಾಟ್ಯದ ಹೆಜ್ಜೆಗಳನ್ನು ಕಲಿತಿದ್ದು, ಕೊಳ್ಳೇಗಾಲದಲ್ಲಿ ಏಳು ವರ್ಷಗಳಿಂದ ಭರತನಾಟ್ಯ ಶಿಕ್ಷಕಿಯಾಗಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಾಸಕ್ತಿ ಇರುವ ನೂರಾರು ಮಂದಿಗೆ ಕಲೆಯನ್ನು ಧಾರೆ ಎರೆಯುವ ಮೂಲಕ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ.

ಎಲೆಮರೆ ಕಾಯಿಯಂತೆ ನೃತ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿರುವ ವಂದನಾ ರಾವ್ ಅವಕಾಶ ಸಿಕ್ಕಾಗಲೆಲ್ಲ ವೇದಿಕೆಯ ಮೇಲೆ ಮಿಂಚಿದ್ದಾರೆ. ಪ್ರಚಾರ ಬಯಸದೆ ಹಲವು ಕಡೆಗಳಲ್ಲಿ ಪ್ರತಿಭಾ ಪ್ರದರ್ಶನ ತೋರುತ್ತಿದ್ದಾರೆ.

‘ಹಲವು ವರ್ಷಗಳಿಂದ ಭರತನಾಟ್ಯ ಕಲೆ ಜೀವನಕ್ಕೆ ಆಧಾರವಾಗಿದೆ. ಏಳು ವರ್ಷದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಿದ ತೃಪ್ತಿ ಇದೆ. ಇಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲೂ ಪ್ರತಿಭಾ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಭರತನಾಟ್ಯ ಶಿಕ್ಷಕಿ ಆಗಿರುವುದು ಹೆಮ್ಮೆಯ ವಿಷಯ. ಇತ್ತೀಚಿನ ದಿನಗಳಲ್ಲಿ ಭರತನಾಟ್ಯ ಸೇರಿದಂತೆ ದೇಶಿಯ ಕಲೆಗಳು ನಶಿಸಿಹೋಗುತ್ತಿದ್ದು, ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು’ ಎನ್ನುತ್ತಾರೆ ವಂದನಾ ರಾವ್‌.

ವಂದನಾ ರಾವ್‌ ಭರತನಾಟ್ಯ ಕಲಾವಿದೆ

ಯುವಜನೋತ್ಸವದಲ್ಲಿ ಭಾಗವಹಿಸಿ ನಾಟ್ಯ ಪ್ರದರ್ಶನ ನಾಟ್ಯಕ್ಕೆ ಹಲವರು ತಲೆದೂಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

‘ಪರಿಶ್ರಮ ಶ್ರದ್ಧೆಯಿಂದ ಗುರಿ ಸಾಧನೆ’ ಭರತನಾಟ್ಯ ಕಲೆಯು ಮನರಂಜನೆಗೆ ಸೀಮಿತವಾಗಿರದೆ ಮನೋವಿಕಾಸಕ್ಕೂ ಕಾರಣವಾಗಿದೆ. ಜನಪದ ನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಸದಾ ಜನರ ಮನಸ್ಸಿಗೆ ಮುದ ನೀಡುತ್ತವೆ. ಕಲೆಯನ್ನು ಆಧರಿಸಬೇಕು ಪರಿಶ್ರಮ ಶ್ರದ್ಧೆ ಭಕ್ತಿಯಿಂದ ನೃತ್ಯ ಅಭ್ಯಾಸ ಮಾಡಿದರೆ ಸುಲಭವಾಗಿ ಗುರಿ ಸಾಧಿಸಬಹುದು ಎಂದು ಭರತನಾಟ್ಯ ಶಿಕ್ಷಕಿ ವಂದನಾ ರಾವ್ ಹೇಳಿದರು.

800ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ಶಾಲೆಯಲ್ಲಿ ಮಕ್ಕಳಿಗೆ ಭರತನಾಟ್ಯ ಹೇಳಿ ಕೊಡುವುದರ ಜೊತೆಗೆ ಮನೆಯಲ್ಲೂ ಭರತನಾಟ್ಯ ತರಗತಿ ನಡೆಸುತ್ತಿರುವ ವಂದನಾ ರಾವ್‌ ಕೈಗೆಟಕುವ ದರದಲ್ಲಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಬಡತನವಿದ್ದು ಭರತನಾಟ್ಯ ಕಲಿಕಾ ಆಸಕ್ತಿ ಹೊಂದಿರುವ ಮಕ್ಕಳಿಗೆ ಉಚಿತವಾಗಿ ನಾಟ್ಯ ಹೇಳಿಕೊಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.