ADVERTISEMENT

ಬಿಳಿಗಿರಿರಂಗನಬೆಟ್ಟ | ರಂಗಧಾಮನ ಆಭರಣ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 4:20 IST
Last Updated 16 ಜನವರಿ 2024, 4:20 IST
ಬಿಳಿಗಿರಿರಂಗನಾಥ ಸ್ವಾಮಿಯ ಆಭರಣಗಳನ್ನು ಸೋಮವಾರ ಯಳಂದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬಿಳಿಗಿರಿರಂಗನಬೆಟ್ಟಕ್ಕೆ ಕೊಂಡೊಯ್ಯಲಾಯಿತು
ಬಿಳಿಗಿರಿರಂಗನಾಥ ಸ್ವಾಮಿಯ ಆಭರಣಗಳನ್ನು ಸೋಮವಾರ ಯಳಂದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬಿಳಿಗಿರಿರಂಗನಬೆಟ್ಟಕ್ಕೆ ಕೊಂಡೊಯ್ಯಲಾಯಿತು   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಮಂಗಳವಾರ ರಂಗನಾಥಸ್ವಾಮಿ ಸಂಕ್ರಾಂತಿ ಚಿಕ್ಕತೇರು ನಡೆಯಲಿದ್ದು, ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ಚಿನ್ನದ ಆಭರಣಗಳನ್ನು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಕೊಂಡೊಯ್ಯಲಾಯಿತು.

ದೇವಾಲಯದಲ್ಲಿ ರಾತ್ರಿ ಸ್ವರ್ಗದ ಬಾಗಿಲು ತೆಗೆಯುವ ಕಾರ್ಯಕ್ಕೂ ಚಾಲನೆ ನೀಡಲಾಯಿತು.

ಸಂಕ್ರಾಂತಿ ಉತ್ಸವಕ್ಕೂ ಮೊದಲು ರಂಗನಾಥ ಹಾಗೂ ಅಮ್ಮನವರಿಗೆ ಚಿನ್ನದ ಆಭರಣಗಳ ಅಲಂಕಾರ ಸೇವೆ ನಡೆಯಲಿದೆ. ಮೂಲಮೂರ್ತಿಗೆ ಕಿರೀಟ, ಶಂಖ ಚಕ್ರ, ಹಸ್ತ, ಪಾದ, ಸೊಂಟಿಕೆ (ಒಡ್ಯಾಣ), ನಾಮ, ಕವಚಗಳನ್ನು ಧರಿಸಲಾಗುತ್ತದೆ.

ADVERTISEMENT

ತೆರೆದ ಸ್ವರ್ಗದ ಬಾಗಿಲು ಉತ್ತರಾಯಣ ಪುಣ್ಯಕಾಲದಲ್ಲಿ ಸ್ವರ್ಗದ ಬಾಗಿಲು ತೆಗೆಯುವ ಪೂಜಾ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ನಸುಕಿನಲ್ಲಿ ಕಲ್ಯಾಣೋತ್ಸವ ಪೂರೈಸಿ ಮಹಾ ಮಂಗಳಾರತಿ, ನಿತ್ಯಪೂಜೆ ನಂತರ ದೇವರನ್ನು ಮಂಟಪೋತ್ಸವಕ್ಕೆ ಅಣಿಗೊಳಿಸಲಾಗುತ್ತದೆ. ನಂತರ ರಥೋತ್ಸವ ಸಿದ್ಧತೆ ಆರಂಭ ಆಗಲಿದೆ.

ರಥಕ್ಕೆ ಅಲಂಕಾರ: ‘ಮಂಗಳವಾರ ನಡೆಯುವ ರಥೋತ್ಸವಕ್ಕೆ ಚಿಕ್ಕತೇರು ಸಜ್ಜುಗೊಂಡಿದೆ. ರಥವು ಬಾಳೆ, ಕಬ್ಬಿನ ಸಿಂಗಾರದೊಂದಿಗೆ ಶೋಭಿಸುತ್ತಿದ್ದು, ಭಕ್ತರು ಹಣ್ಣು, ದವಸ ಧಾನ್ಯ ತೂರಲು ಸಜ್ಜಾಗಿದ್ದಾರೆ. ತೇರು ಎಳೆಯುವ ಮೊದಲು ಗರುಡ ಪಕ್ಷಿ ಆಗಮಿಸುವ ನಿರೀಕ್ಷೆ ಇದೆ: ಎಂದು ಪಾರುಪತ್ತೆಗಾರ ರಾಜು ಹೇಳಿದರು.

ಮಧ್ಯಾಹ್ನ 11.54ರಿಂದ 12.05ರೊಳಗೆ ಸಲ್ಲುವ ಶುಭ ಮೀನ ಗುರು ನವಾಂಶ ಶುಭ ಮುಹೂರ್ತದಲ್ಲಿ ಉತ್ಸವ ಮೂರ್ತಿಯ ರಥೋಹರಣ ಜರುಗಲಿದೆ. ಆ ಬಳಿಕ ಪೂಜೆ ನೆರವೇರಿ, ರಥೋತ್ಸವಕ್ಕೆ ಚಾಲನೆ ಸಿಗಲಿದೆ. 

ಪ್ರಾಣಿ ಬಲಿ ಮತ್ತು ಮಾರಕಾಸ್ತ್ರ ನಿಷೇಧ: ಪಟ್ಟಣ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಂದ ಬಸ್ ಹೊರಡಲಿವೆ. ಗುಂಬಳ್ಳಿ ತಪಾಸಣಾ ಕೇಂದ್ರದಲ್ಲಿ ದ್ವಿಚಕ್ರ ವಾಹನಗಳ ಪ್ರವೇಶ ನಿಷೇಧಿಸಲಾಗಿದೆ. ಬೆಟ್ಟದ ಮಾರಮ್ಮ ದೇವಳದ ಬಳಿ ಕಾರು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಾಣಿ ಬಲಿ ಹಾಗೂ ಮಾರಕಾಸ್ತ್ರಗಳನ್ನು ನಿಷೇಧಿಸಿದ್ದು, ಪಟ್ಟಣ ಠಾಣಾ ಪೊಲೀಸರು ಗಸ್ತು ಹೆಚ್ಚಿಸಿ, ಸುಗಮ ಸಂಚಾರಕ್ಕೆ ಆದ್ಯತೆ ನೀಡಿದ್ದಾರೆ.

ತಹಶೀಲ್ದಾರ್ ಆರ್.ಜಯಪ್ರಕಾಶ್. ಸಬ್ ಇನ್ಸ್ಪೆಕಟ್ಟರ್ ಚಂದ್ರಹಾಸನಾಯಕ್, ದೇವಾಲಯ ಆಡಳಿತಾಧಿಕಾರಿ ವೈ,ಎನ್.ಮೋಹ‌ನ್‌ಕುಮಾರ್, ಪಾರುಪತ್ತೆಗಾರ ರಾಜು, ಶೇಷಾದ್ರಿ ಇತರರು ಇದ್ದರು.

ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗಪ್ಪನ ಚಿಕ್ಕಜಾತ್ರೆಗೆ ಸಿದ್ಧಗೊಂಡ ರಥವನ್ನು ಭಕ್ತರು ವೀಕ್ಷಿಸಿದರು..

ಜಾತ್ರೆಯ ಅಂಗವಾಗಿ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.