ADVERTISEMENT

ಗುಂಡ್ಲುಪೇಟೆ: ಕೋಳಿಗಳ ಸಾವು, ಹಕ್ಕಿಜ್ವರದ ಆತಂಕ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 16:15 IST
Last Updated 13 ಜನವರಿ 2023, 16:15 IST
ಸತ್ತ ಕೋಳಿಯನ್ನು ಗುಂಡ್ಲುಪೇಟೆ ಪಶುವೈದ್ಯಾಧಿಕಾರಿ ಪರಿಶೀಲಿಸಿದರು
ಸತ್ತ ಕೋಳಿಯನ್ನು ಗುಂಡ್ಲುಪೇಟೆ ಪಶುವೈದ್ಯಾಧಿಕಾರಿ ಪರಿಶೀಲಿಸಿದರು   

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಬೆನ್ನಲ್ಲೇ, ತಾಲ್ಲೂಕಿನ ಗಡಿಭಾಗದ ಕೆಲವೆಡೆ ಸಾಕು ಕೋಳಿಗಳು ಮೃತಪಡುತ್ತಿದ್ದು ಜನರು ಆತಂಕಗೊಂಡಿದ್ದಾರೆ.

ಕಾಡಂಚಿನ ಗ್ರಾಮ ಮೇಲುಕಾಮನಹಳ್ಳಿ, ಅಲ್ಲಿನ ಗಿರಿಜನ ಕಾಲೊನಿ, ಸವಕನಹಳ್ಳಿ ಪಾಳ್ಯ ಸುತ್ತಮುತ್ತ ಆರೋಗ್ಯವಂತ ಕೋಳಿಗಳು ಮೃತಪಡುತ್ತಿವೆ. ಹತ್ತು ದಿನಗಳಿಂದ ಕೋಳಿಗಳು ಅಲ್ಲಲ್ಲಿ ಸಾಯುತ್ತಿರುವುದು ವರದಿಯಾಗುತ್ತಿವೆ.

ಕೇರಳದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ನಂತರ ಕೇರಳದಿಂದ ರಾಜ್ಯವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766ರ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಪಶುಪಾಲನಾ ಇಲಾಖೆ ಕಟ್ಟೆಚ್ಚರ ವಹಿಸಿದೆ. ಗೂಡ್ಸ್‌ ವಾಹನಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುತ್ತಿದೆ. ಆದರೆ, ರಾಷ್ಟ್ರೀಯ 212ನಲ್ಲಿ ತಮಿಳುನಾಡಿನ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಕಡೆಯಿಂದ ಬರುವ ಕೇರಳದ ವಾಹನಗಳಿಗೆ ತಪಾಸಣೆ ಮಾಡುತ್ತಿಲ್ಲ. ತಾಲ್ಲೂಕಿನ ಅನೇಕ ವಾಹನಗಳು ಕೇರಳದ ವಿವಿಧ ಭಾಗಗಳಿಗೆ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಹೋಗಿ ಬರುವಾಗ ರಾಷ್ಟ್ರೀಯ ಹೆದ್ದಾರಿ 212ರ ತಮಿಳುನಾಡಿನ ಗುಡಲೂರು ಮಾರ್ಗವಾಗಿ ಬರುತ್ತದೆ. ಇದರಿಂದಾಗಿ ಸೋಂಕು ಹರಡಿರಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೇಲುಕಾಮನಹಳ್ಳಿ ಗ್ರಾಮಸ್ಥರು ಮೃತಪಟ್ಟ ಕೋಳಿಯೊಂದನ್ನು ಗುಂಡ್ಲುಪೇಟೆಯ ಪಶುವೈದ್ಯಾಧಿಕಾರಿಗಳ ಬಳಿಗೆ ಕೊಂಡು ಹೋಗಿದ್ದಾರೆ. ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗಗಳನ್ನು ಮೈಸೂರಿನ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ.

‘50ಕ್ಕೂ ಹೆಚ್ಚು ಸಾಕುಕೋಳಿಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಸತ್ತ ಕೋಳಿಯೊಂದರ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ವರದಿ ಬಂದ ನಂತರವೇ ಸಾವಿನ ಕಾರಣ ತಿಳಿಯಲಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ.ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.