ADVERTISEMENT

ಗುಂಡ್ಲುಪೇಟೆ| ನೀತಿ ಸಂಹಿತೆ: ಮೋದಿ ಭೇಟಿ ವೇಳೆ ದೂರ ಉಳಿದ ಬಿಜೆಪಿ ಮುಖಂಡರು

ಮೋದಿ ಬಂಡೀಪುರ ಭೇಟಿ: ಸಾಗುವ ಮಾರ್ಗದಲ್ಲಿ ಬಿಗಿ ಭದ್ರತೆ, ಕಾಣಿಸದ ಜನರು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2023, 6:15 IST
Last Updated 10 ಏಪ್ರಿಲ್ 2023, 6:15 IST
ಮೇಲುಕಾಮನಹಳ್ಳಿಯ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಅರಣ್ಯ ಇಲಾಖೆಯ ಡಿಡಿಜಿ ಸುಬ್ರಹ್ಮಣ್ಯಂ, ಎನ್‌ಟಿಸಿಎ ಐಜಿಪಿ (ಅರಣ್ಯ) ಮುರಳಿ ಸ್ವಾಗತಿಸಿದರು
ಮೇಲುಕಾಮನಹಳ್ಳಿಯ ಹೆಲಿಪ್ಯಾಡ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಅರಣ್ಯ ಇಲಾಖೆಯ ಡಿಡಿಜಿ ಸುಬ್ರಹ್ಮಣ್ಯಂ, ಎನ್‌ಟಿಸಿಎ ಐಜಿಪಿ (ಅರಣ್ಯ) ಮುರಳಿ ಸ್ವಾಗತಿಸಿದರು   

ಚಾಮರಾಜನಗರ/ಗುಂಡ್ಲುಪೇಟೆ: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಭೇಟಿ ಕಾರ್ಯಕ್ರಮದಲ್ಲಿ ಬಿಜೆಪಿಯ ಸಚಿವರು, ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ಭಾಗವಹಿಸಲು ಸಾಧ್ಯವಾಗಲಿಲ್ಲ. ಎಲ್ಲ ಕಡೆ ಅಧಿಕಾರಿಗಳೇ ಇದ್ದರು.

ಸಾಮಾನ್ಯವಾಗಿ ಮೋದಿ ಭೇಟಿ ನೀಡುವ ಸ್ಥಳಗಳಲ್ಲಿ ಮತ್ತು ಅವರು ಸಾಗುವ ಮಾರ್ಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುತ್ತಾರೆ. ಆದರೆ ಭಾನುವಾರ ಮೇಲುಕಾಮನಹಳ್ಳಿಯ ಹೆಲಿಪ್ಯಾಡ್‌ನಿಂದ ಬಂಡೀಪುರ ಅರಣ್ಯ ಪ್ರವೇಶಿಸುವ ಮಾರ್ಗ ಮಧ್ಯೆ ಜನರು ಕಂಡು ಬರಲಿಲ್ಲ. ರಸ್ತೆ ಬದಿಯಲ್ಲಿ ತಡೆಗೋಡೆ ಅಳವಡಿಸಲಾಗಿತ್ತು. ರಸ್ತೆಯುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಜನರನ್ನು ರಸ್ತೆಯ ಬದಿಗೆ ಬರುವುದಕ್ಕೆ ಬರಲು ಅವರು ಬಿಡಲಿಲ್ಲ. ಬಂಡೀಪುರ ಗೇಟಿನ ಬಳಿಯಷ್ಟೇ ಬೆರಳೆಣಿಕೆಯಷ್ಟು ಕಾರ್ಯಕರ್ತರು ನಿಂತು ಪಕ್ಷ, ದೇಶ ಮತ್ತು ಮೋದಿ ಪರವಾಗಿ ಘೋಷಣೆ ಕೂಗಿದರು.

ಮೇಲುಕಾಮನಹಳ್ಳಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಬಂದಿಳಿದ ಪ್ರಧಾನಿ ಅವರನ್ನು ಭಾರತೀಯ ಅರಣ್ಯ ಸೇವೆಯ ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಬಂಡೀಪುರ ಕ್ಯಾಂಪಸ್‌ನಲ್ಲೂ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಇದ್ದರು. ಕರ್ತವ್ಯದಲ್ಲಿದ್ದ ಹೆಚ್ಚುವರಿ ಸಿಬ್ಬಂದಿಯನ್ನೂ ದೂರ ಇರುವಂತೆ ಸೂಚಿಸಲಾಗಿತ್ತು. ಎಲ್ಲರೂ ಎಸ್‌ಪಿಜಿ ಅಧಿಕಾರಿಗಳು, ಸಿಬ್ಬಂದಿಯ ಸೂಚನೆಯನ್ನು ಪಾಲಿಸಬೇಕಿತ್ತು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡ ಕಡಿಮೆ ಸಂಖ್ಯೆಯಲ್ಲಿದ್ದರು.

ADVERTISEMENT

ಕಾರ್ಯಕ್ರಮಗಳಿಲ್ಲ: ಬಂಡೀಪುರದ ಸುವರ್ಣ ಮಹೋತ್ಸವದ ಅಂಗವಾಗಿ ಪ್ರಧಾನಿ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುತ್ತಾರೆ. ವಿದ್ಯುತ್‌ ಸ್ಪರ್ಶಿಸಿ ಅಸ್ವಸ್ಥಗೊಂಡಿದ್ದ ಆನೆಯನ್ನು ಬದುಕುಳಿಸಿದ ಸಿಬ್ಬಂದಿಯನ್ನು ಸನ್ಮಾನಿಸುತ್ತಾರೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ, ಬಂಡೀಪುರದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿಲ್ಲ. ಅಧಿಕಾರಿಗಳು, ಸಿಬ್ಬಂದಿಯೊಂದಿಗೂ ಪ್ರಧಾನಿ ಹೆಚ್ಚು ಮಾತನಾಡಲಿಲ್ಲ.

ಬಂಡೀಪುರಕ್ಕೆ ಬಂದವರೇ, ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಸಫಾರಿ ವಾಹನ ಏರಿದರು. ವಾಹನದಲ್ಲಿ ಚಾಲಕ ಮಧುಸೂದನ್‌ ಅವರೊಂದಿಗೂ ಹೆಚ್ಚು ಮಾತನಾಡಲಿಲ್ಲ. ಹಿಂದೆ ಇದ್ದ ಎಸ್‌ಪಿಜಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಬಂಡೀಪುರಕ್ಕೆ ಹೋಲಿಸಿದರೆ, ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರದಲ್ಲಿ ಮೋದಿ ಸಿಬ್ಬಂದಿಯೊಂದಿಗೆ ಹೆಚ್ಚು ಬೆರೆತರು. ಕಾವಾಡಿಗಳೊಂದಿಗೆ ಮಾತನಾಡಿದರು. ಅವರು ಮಾಡುತ್ತಿರುವ ಕೆಲಸಕ್ಕೆ ಬೆನ್ನುತಟ್ಟಿದರು. ಆನೆಗಳೊಂದಿಗೂ ಸ್ವಲ್ಪ ಹೊತ್ತು ಕಾಲ ಕಳೆದರು.

‘ಮೋದಿ ಸಫಾರಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಎದುರಿನ ಆಸನದಲ್ಲೇ ಕುಳಿತಿದ್ದ ಅವರು, ವಾಹನ ಸಾಗುವಾಗ ನಿಂತುಕೊಂಡು ಬಂಡೀಪುರ ಕಾಡಿನ ಸೌಂದರ್ಯವನ್ನು ಕಣ್ತುಂಬಿಕೊಂಡರು. ಪ್ರಾಣಿಗಳನ್ನು ಕಂಡಾಗ ಖುಷಿ ಪಟ್ಟರು. ವಾಹನದ ಹಿಂಬದಿಯಲ್ಲಿದ್ದ ಛಾಯಾಗ್ರಾಹಕರಿಂದ ಕ್ಯಾಮೆರಾ ಪಡೆದು ಫೋಟೊ ಕ್ಲಿಕ್ಕಿಸಿದರು. ಬೋಳುಗುಡ್ಡದಲ್ಲಿ ಕ್ಯಾಮೆರಾ ಹಿಡಿದು ಅರಣ್ಯದ ಪಕ್ಷಿನೋಟವನ್ನು ಸೆರೆ ಹಿಡಿದರು. ಜೊತೆಗಿದ್ದ ಛಾಯಾಗ್ರಾಹಕರಿಗೆ ಫೋಟೊ ತೆಗೆಯುವುದಕ್ಕಾಗಿ ವಿವಿಧ ಪೋಸ್‌ಗಳನ್ನು ನೀಡಿದರು’ ಎಂದು ಮೂಲಗಳು ತಿಳಿಸಿವೆ.

ಬಿಗಿ ಭದ್ರತೆ, ಸಂಚಾರ ನಿರ್ಬಂಧ

ಪ್ರಧಾನಿ ಭೇಟಿ ಕಾರಣಕ್ಕೆ ಬಂಡೀಪುರದಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಶನಿವಾರ ಸಂಜೆ 4 ಗಂಟೆಯಿಂದಲೇ ಎಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆಯವರೆಗೂ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಗುಂಡ್ಲುಪೇಟೆಯಲ್ಲೇ ವಾಹನಗಳನ್ನು ತಡೆಯಲಾಗುತ್ತಿತ್ತು.

ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ಇರಲಿಲ್ಲ. ಮೇಲುಕಾಮನಹಳ್ಳಿಯ ಹೆಲಿಪ್ಯಾಡ್‌ ಬಳಿಗೆ ತೆರಳಲೂ ಅವಕಾಶ ಕೊಟ್ಟಿರಲಿಲ್ಲ. ಮೋದಿ ಸಫಾರಿ ಮುಗಿಸಿ ತೆಪ್ಪಕಾಡಿಗೆ ತೆರಳಿದ ನಂತರ ಮಾಧ್ಯಮದವರಿಗೆ ಬಂಡೀಪುರಕ್ಕೆ ತೆರಳಲು ಅವಕಾಶ ನೀಡಲಾಯಿತು.

ವೇಳಾಪಟ್ಟಿ ಪ್ರಕಾರ, ಪ್ರಧಾನಿ 9.45ಕ್ಕೆ ತೆಪ್ಪಕಾಡಿನಿಂದ ಮೈಸೂರಿಗೆ ತೆರಳಬೇಕಿತ್ತು. ಆದರೆ, ಅಲ್ಲಿಗೆ ತಲುಪುವಾಗಲೇ 10.30 ಆಗಿತ್ತು. ಒಂದು ಗಂಟೆ ತೆಪ್ಪಕಾಡಿನಲ್ಲಿದ್ದ ಅವರು 11.27ಕ್ಕೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿನತ್ತ ಹೊರಟರು. ಮಧ್ಯಾಹ್ನ 12 ಗಂಟೆಯ ನಂತರ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಹೆಲಿಪ್ಯಾಡ್‌, ಮೋದಿ ಸಾಗುವ ಮಾರ್ಗ, ಸಫಾರಿ ಮಾರ್ಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಎಸ್‌ಪಿಜಿ, ಪೊಲೀಸರು, ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿಯನ್ನೂ ನಿಯೋಜಿಸಲಾಗಿತ್ತು. ಪ್ರಧಾನಿಯವರು ಸಫಾರಿ ಮಾಡುತ್ತಿದ್ದ ಮಾರ್ಗದಲ್ಲಿ ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿ ಇದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.