ಚಾಮರಾಜನಗರ: ರಾಜಕಾರಣದಲ್ಲಿ ಅನುಭವ ಕಡಿಮೆ ಇರುವ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಬದಲು ಭಾರತ್ ನೋಡೊ ಯಾತ್ರೆ ಮಾಡಲಿ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಗುರುವಾರ ಹೇಳಿದರು.
ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನಕುಮಾರ್ ಸೇರಿದಂತೆ ಬಿಜೆಪಿ ಮುಖಂಡರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ರಾಹುಲ್ ಗಾಂಧಿಯವರಿಗೆ ರಾಜಕೀಯದಲ್ಲಿ ಅನುಭವ ಕಡಿಮೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಗುಲಾಂ ನಬಿ ಆಜಾದ್ ಹೇಳಿದ್ದರು. ರಾಹುಲ್ ಅವರಿಗೆ ದೇಶದ ರೈತರ ಬಗ್ಗೆ ಗೊತ್ತಿಲ್ಲ. ಹಳ್ಳಿಗಳ ಬಗ್ಗೆ ತಿಳಿದಿಲ್ಲ. ರಾಜ್ಯಗಳು, ಜಿಲ್ಲೆಯ ಬಗ್ಗೆ ತಿಳಿದಿಲ್ಲ. ಅವರು ಭಾರತವನ್ನು ನೋಡುವ ಯಾತ್ರೆಯನ್ನು ಕೈಗೊಳ್ಳಬೇಕು’ ಎಂದರು.
‘ರಾಷ್ಟ್ರೀಯ ಹೆದ್ದಾರಿಯಲ್ಲಿ 20 ಸಾವಿರ, 30 ಸಾವಿರ ಜನರನ್ನು ಸೇರಿಸಿಕೊಂಡು ಯಾತ್ರೆ ಮಾಡಿದರೆ ಏನು ಗೊತ್ತಾಗುತ್ತದೆ? ಕೆಲವೇ ಕೆಲವು ತಜ್ಞರು, ಅಧ್ಯಯನಕಾರರೊಂದಿಗೆ ಬೈಕ್‌ನಲ್ಲಿ ಕುಳಿತು ಎರಡು ವರ್ಷಗಳ ಕಾಲ ಹಳ್ಳಿಗಳಲ್ಲಿ ಸುತ್ತಾಡಿದರೆ ಅವರಿಗೆ ಎಲ್ಲವೂ ತಿಳಿಯುತ್ತದೆ’ ಎಂದು ಹೇಳಿದರು.
‘ಭಾರತ ಒಗಟಿನ ಭೂಮಿ. ಅಷ್ಟು ಸುಲಭದಲ್ಲಿ ಅದು ಅರ್ಥವಾಗುವುದಿಲ್ಲ. ಇಡೀ ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಂಡ ವ್ಯಕ್ತಿ ಎಂದರೆ ಅದು ಪ್ರಧಾನಿ ನರೇಂದ್ರಮೋದಿ. ಅವರಿಗೆ ಇಡೀ ಭಾರತದ ದರ್ಶನ ಆಗಿದೆ. ರಾಹುಲ್ ಗಾಂಧಿ ಅವರಿಗೆ ಆಗಿಲ್ಲ’ ಎಂದರು.
ಮೋದಿ ಒಗ್ಗೂಡಿಸುತ್ತಿದ್ದಾರೆ: ‘ಕಾಂಗ್ರೆಸ್ 1947ರಲ್ಲಿ ದೇಶವನ್ನು ವಿಭಜಿಸಿದೆ. 1971ರಲ್ಲಿ ಪಾಕಿಸ್ತಾನವನ್ನು ವಿಭಜಿಸಿದೆ. ಹೈದರಾಬಾದ್‌ನ ನಿಜಾಮರ ಆಡಳಿತದ ಪ್ರದೇಶವನ್ನು ಪ್ರತ್ಯೇಕ ದೇಶವನ್ನಾಗಿ ಮಾಡುವ ಪ್ರಯತ್ನವೂ ನಡೆದಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಂದಾಗಿ ಅದು ವಿಫಲವಾಯಿತು’ ಎಂದರು.
‘ರಾಹುಲ್ ಅವರು ಈ ದೇಶದಲ್ಲಿ ಏನನ್ನು ಜೋಡಿಸುವುದಕ್ಕೆ ಹೊರಟಿದ್ದಾರೆ? ಪ್ರಧಾನಿ ಮೋದಿ ಅವರು ಆ ಕೆಲಸವನ್ನು ಮಾಡುತ್ತಿದ್ದಾರೆ. ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ ಪರಿಕಲ್ಪನೆ, ಕೋವಿಡ್ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ 86 ಕೋಟಿ ಜನರಿಗೆ 2 ವರ್ಷ ಕಾಲ ಆಹಾರ ಭದ್ರತೆ ನೀಡಿದ ವಿಶೇಷ ಯೋಜನೆ, ಉಜ್ವಲ ಯೋಜನೆ ಮೂಲಕ9 ಕೋಟಿ ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ, ಮುದ್ರಾ ಯೋಜನೆ, ಜನಧನ್ ಯೋಜನೆ, 370ನೇ ಕಲಂ ರದ್ದುಪಡಿಸಿರುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಇಡೀ ದೇಶವನ್ನು ಮೋದಿ ಅವರು ಜೋಡಿಸಿದ್ದಾರೆ’ ಎಂದರು.
‘ರಾಹುಲ್ ಅವರು ಬೈಕ್‌ನಲ್ಲಿ ಹಳ್ಳಿಗಳಲ್ಲಿ ಸುತ್ತಾಡಿದರೆ ಅವರಿಗೆ ಇದೆಲ್ಲವೂ ತಿಳಿಯಲಿದೆ. ಹಾಗಾಗಿ, ಗುಂಡ್ಲುಪೇಟೆಯಲ್ಲೇ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳಿಸಿ, ಭಾರತ್ ನೋಡೊ ಯಾತ್ರೆ ಆರಂಭಿಸಲಿ’ ಎಂದು ಸಲಹೆ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಂದರ್, ಮುಖಂಡರಾದ ಎಂ.ರಾಮಚಂದ್ರ, ಹನೂಮಂತ ಶೆಟ್ಟಿ ಜಿಲ್ಲಾ ವಕ್ತಾರ ಅಯ್ಯನಪುರ ಶಿವಕುಮಾರ್ ಇದ್ದರು.
‘ಕಾಂಗ್ರೆಸ್ ಜೋಡೋ ಮಾಡಲಿ’
ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ‘ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ಜೋಡೋ ಯಾತ್ರೆ ಎಂಬುದಾಗಿ ಹೆಸರು ಬದಲಾಯಿಸಿಕೊಂಡರೆ ಉತ್ತಮ’ ಎಂದು ವ್ಯಂಗ್ಯವಾಡಿದರು.
‘ಯಾತ್ರೆಯ ಹೆಸರಲ್ಲಿ ಲೋಪ ಇದೆ. ಭಾರತವನ್ನು ಜೋಡಿಸಲು ಹೊರಟಿರುವ ಕಾಂಗ್ರೆಸ್, ಭಾರತ ಇಬ್ಭಾಗವಾಗಿಲ್ಲ ಎಂಬುದನ್ನು ಅರಿಯಬೇಕು. ಆ ಪಕ್ಷದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಬೇಕು’ ಎಂದರು.
‘ಕಾಂಗ್ರೆಸ್‌ಗೆ ದೇಶದ ಬಗ್ಗೆ ಚಿಂತನೆ ಇಲ್ಲ. ಪಾದಯಾತ್ರೆಯಿಂದ ದೇಶ ಉದ್ಧಾರ ಆಗಲ್ಲ. ಅವಕಾಶ ಸಿಕ್ಕಾಗ ಕಾಂಗ್ರೆಸ್ ಲೂಟಿ ಮಾಡಿತು. ಕಾಂಗ್ರೆಸ್ ಸರ್ಕಾರ ಇದ್ದಾಗ ಹಗರಣಗಳೇ ಹೆಚ್ಚಾಗಿತ್ತು’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.