ADVERTISEMENT

ಜಾತಿ ಗಣತಿ: ಸರ್ಕಾರದಿಂದ ಸುಳ್ಳು ಲೆಕ್ಕ: ಬಂಗಾರು ಹನುಮಂತು

ಬಿಜೆಪಿ ಎಸ್‌ಟಿ ಮೋರ್ಚಾ ಮುನ್ನಡೆ ಸಮಾವೇಶ; ಮೋದಿ ಗೆಲ್ಲಿಸಲು ಪಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2024, 8:32 IST
Last Updated 17 ಮಾರ್ಚ್ 2024, 8:32 IST
ಚಾಮರಾಜನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಎಸ್‌ಟಿ ಮೋರ್ಚಾ ಮುನ್ನಡೆ ಸಮಾವೇಶವನ್ನು ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉದ್ಘಾಟಿಸಿದರು. ಎ.ರಾಮದಾಸ್, ಎನ್‌.ಮಹೇಶ್‌, ನಿರಂಜನ್‌ಕುಮಾರ್‌ ಪಾಲ್ಗೊಂಡಿದ್ದರು
ಚಾಮರಾಜನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ನಡೆದ ಬಿಜೆಪಿ ಎಸ್‌ಟಿ ಮೋರ್ಚಾ ಮುನ್ನಡೆ ಸಮಾವೇಶವನ್ನು ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಉದ್ಘಾಟಿಸಿದರು. ಎ.ರಾಮದಾಸ್, ಎನ್‌.ಮಹೇಶ್‌, ನಿರಂಜನ್‌ಕುಮಾರ್‌ ಪಾಲ್ಗೊಂಡಿದ್ದರು   

ಚಾಮರಾಜನಗರ: ‘ಗ್ಯಾರಂಟಿ ಯೋಜನೆಗಳ ಸುಳ್ಳು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ‘ಪಾಕಿಸ್ತಾನ ಜಿಂದಾಬಾದ್‌’ ಎಂದು ಘೋಷಣೆ ಕೂಗಿದವರ ರಕ್ಷಣೆಗೆ ನಿಂತಿದೆ’ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು ಶನಿವಾರ ದೂರಿದರು.

ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾ ಹಮ್ಮಿಕೊಂಡಿದ್ದ ಎಸ್‌ಟಿ ಮೋರ್ಚಾ ಮುನ್ನಡೆ ಸಮಾವೇಶದಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡದ ರಾಜ್ಯ ಕಾಂಗ್ರೆಸ್‌ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಮದ್ಯದ ಧಾರಣೆ ಹೆಚ್ಚಿಸಿ, ನಮ್ಮ ಕೈಯಿಂದ ಹೆಚ್ಚು ಹಣ ಖರ್ಚಾಗುವಂತೆ ಮಾಡಿದೆ. ಅದನ್ನೇ ಗ್ಯಾರಂಟಿ ಹೆಸರಿನಲ್ಲಿ ನೀಡುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ವರ್ಗದವರು 40 ಲಕ್ಷ ಜನರಿದ್ದಾರೆ. ಈಗ 60 ಲಕ್ಷದಿಂದ 70 ಲಕ್ಷದಷ್ಟು ಜನಸಂಖ್ಯೆ ಇದೆ. ಆದರೆ, ಜಾತಿ ಗಣತಿ ವರದಿಯಲ್ಲಿ 38 ಲಕ್ಷ ಮಂದಿ ಇದ್ದಾರೆ ಎಂದು ಸುಳ್ಳು ಹೇಳಲಾಗಿದೆ. ಮುಸ್ಲಿಮರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, 80 ಲಕ್ಷ ಲೆಕ್ಕ ತೋರಿಸಲಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಲೋಕಸಭಾ ಚುನಾವಣೆಗೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಎಸ್‌.ಬಾಲರಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ. ಅವರನ್ನು ಗೆಲ್ಲಿಸುವ ಮೂಲಕ ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ ಬರುವಂತೆ ಮಾಡಬೇಕು’ ಎಂದು ಹೇಳಿದರು. 

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ‘ಮುಸ್ಲಿಂ ಸಮುದಾಯವನ್ನು ಓಲೈಸುವುದಕ್ಕಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಇತರ ಸಮುದಾಯಗಳನ್ನು ಕಡೆಗಣಿಸುತ್ತಿದೆ. ಇದನ್ನು ನಾವು ವಿರೋಧಿಸಬೇಕು. ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವಂತೆ ನಾವೆಲ್ಲರೂ ಶ್ರಮಿಸಬೇಕು’ ಎಂದು ಕರೆ ನೀಡಿದರು. 

‘ರಾಜ್ಯ ಸರ್ಕಾರವು ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿದೆ. ಅದಕ್ಕೆ ವಿಧಾನಸಭೆಯಲ್ಲಿ ಅನುಮೋದನೆಯನ್ನೂ ಪಡೆದಿದೆ. ಈ ಬಗ್ಗೆ ಸಮುದಾಯದ ಶಾಸಕರಾಗಿರುವ ಎ.ಆರ್‌.ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರು ಇದನ್ನು ಪ್ರಶ್ನಿಸದಿರುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಧೈರ್ಯ ಇವರಿಗಿಲ್ಲ’ ಎಂದು ಟೀಕಿಸಿದರು.

‘ಸರ್ಕಾರ ಜನರಿಗೆ ಶಾಶ್ವತವಾದ ಯೋಜನೆಯನ್ನು ನೀಡುತ್ತಿಲ್ಲ. ಜನರು ದುಡಿಯುವಂತೆ ಮಾಡುತ್ತಿಲ್ಲ. ಕೇವಲ ಸುಳ್ಳು ಭರವಸೆಯ ಯೋಜನೆಗಳನ್ನು ನೀಡಿದ್ದು, ಇದರಿಂದಾಗಿ ಜನರು ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು  ಕಿಡಿ ಕಾರಿದರು. 

‘ಶಾಶ್ವತವಾದ ಯೋಜನೆಗಳನ್ನು ನೀಡದೇ, ಜನರು ಕಾಲ ಮೇಲೆ ನಿಲ್ಲುವಂತೆ ಸರ್ಕಾರ ಮಾಡುತ್ತಿಲ್ಲ. ಕೇವಲ ಸುಳ್ಳು ಭರವಸೆಯ ಯೋಜನೆಗಳನ್ನು ನೀಡಿದ್ದು, ಇದರಿಂದಾಗಿ ಜನರು ಬೇಡುವ ಪರಿಸ್ಥಿತಿ ಬಂದಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ ಕುಮಾರ್‌, ಲೋಕಸಭಾ ಚುನಾವಣಾ ಮೈಸೂರು ವಿಭಾಗದ ಪ್ರಭಾರಿ ಎ.ರಾಮದಾಸ್‌, ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜ್‌, ಎಸ್‌.ಟಿ.ಮೋರ್ಚಾ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ್, ಮಾಜಿ ವಿಧಾನ ಪರಿಷತ್ ಸದಸ್ಯ ಸಿದ್ದರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಮೇಯರ್ ಶಿವಕುಮಾರ್, ಮುಖಂಡರಾದ ದತ್ತೇಶ್, ಆರ್.ಸುಂದರ್, ನಾಗಶ್ರೀ ಪ್ರತಾಪ್, ನಟರಾಜು, ನೂರೊಂದು ಶೆಟ್ಟಿ, ಮಲ್ಲಿಕಾರ್ಜುನ್ ನಾಗೇಂದ್ರ, ಕಪನಿ ನಾಯಕ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.