ADVERTISEMENT

ಸಿದ್ದರಾಮಯ್ಯ ವಚನ ಭ್ರಷ್ಟತೆ ಜನರಿಗೆ ತಿಳಿಸಿ: ಮಹೇಶ್‌

ಬಿಜೆಪಿ ರಾಜ್ಯ ಉಪಾಧ್ಯಕ್ಷರಿಗೆ ಅದ್ದೂರಿ ಸ್ವಾಗತ, ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 7:26 IST
Last Updated 30 ಡಿಸೆಂಬರ್ 2023, 7:26 IST
ಚಾಮರಾಜನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌ ಮಾತನಾಡಿದರು. ಮಾಜಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣಪ್ರಸಾದ್‌ ಇತರ ಮುಖಂಡರು ಪಾಲ್ಗೊಂಡಿದ್ದರು
ಚಾಮರಾಜನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌ ಮಾತನಾಡಿದರು. ಮಾಜಿ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣಪ್ರಸಾದ್‌ ಇತರ ಮುಖಂಡರು ಪಾಲ್ಗೊಂಡಿದ್ದರು   

ಚಾಮರಾಜನಗರ: ‘ರಾಜ್ಯ ಕಾಂಗ್ರೆಸ್‌ ಸರ್ಕಾರದ ಆರು ತಿಂಗಳ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಚನ ಭ್ರಷ್ಟತೆಯನ್ನು ಜನರಿಗೆ ತಿಳಿಸಿ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌ ಶುಕ್ರವಾರ ಹೇಳಿದರು. 

ಉಪಾಧ್ಯಕ್ಷರಾಗಿ ನೇಮಕಗೊಂಡ ನಂತರ ಜಿಲ್ಲೆಗೆ ಮೊದಲ ಭೇಟಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರವನ್ನು ಪಕ್ಷ ಗೆಲ್ಲಲಿದೆ ಎಂದು ರಾಜ್ಯ ಅಧ್ಯಕ್ಷ ವಿಜಯೇಂದ್ರ ಘೋಷಿಸಿದ್ದಾರೆ. ಅವರು ಎಲ್ಲ ಲೆಕ್ಕಾಚಾರ ಹಾಕಿಯೇ ಈ ಹೇಳಿಕೆ ನೀಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು. ಚಾಮರಾಜನಗರ ಮೀಸಲು ಕ್ಷೇತ್ರದಲ್ಲೂ ಗೆಲ್ಲಬೇಕು. ಅದಕ್ಕಾಗಿ ಮುಖಂಡರ ನಡುವೆ ಇರುವ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಎಲ್ಲರೂ ಒಗ್ಗಟ್ಟಾಗಿ ಕೆಲಸಮಾಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು’ ಎಂದು ಕರೆ ನೀಡಿದರು. 

‘ಈ ಬಾರಿಯ ಚುನಾವಣೆಯಲ್ಲಿ  ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಜನರಿಗೆ ಮಂಕು ಬೂದಿ ಎರಚಿ ಕಾಂಗ್ರೆಸ್‌ ಗೆದ್ದಿದೆ. ನಮ್ಮ ಪಕ್ಷದಲ್ಲಿದ್ದ ಗೊಂದಲಗಳೂ ನಮ್ಮ ಸೋಲಿಗೆ ಕಾರಣವಾಗಿದೆ. 135 ಸ್ಥಾನಗಳನ್ನು ಗೆದ್ದಿರುವ ಸರ್ಕಾರದ ಆಡಳಿತ ಹೇಗಿರಬೇಕಿತ್ತು? ಈಗ ಹೇಗಿದೆ? ಎಲ್ಲವೂ ಜನರಿಗೆ ಅರ್ಥವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ‘ನುಡಿದಂತೆ ನಡೆದಿದ್ದೇವೆ’ ಎಂದು ಎಲ್ಲ ಕಡೆ ಹೇಳುತ್ತಿದ್ದಾರೆ. ಆದರೆ, ಐದು ಗ್ಯಾರಂಟಿ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಿಲ್ಲ. ಪ್ರತಿ ಯೋಜನೆಗೂ ಷರತ್ತುಗಳನ್ನು ಒಡ್ಡಿ ಮಾತಿಗೆ ತಪ್ಪಿದ್ದಾರೆ. ವಚನ ಭ್ರಷ್ಟರಾಗಿದ್ದಾರೆ. ಜನರು ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರ ವಚನ ಭ್ರಷ್ಟತೆಯನ್ನು ನಾವು ಜನರಿಗೆ ತಲುಪಿಸಬೇಕು’ ಎಂದರು. 

ADVERTISEMENT

‘ಈ ದೇಶ ಉಳಿಯಬೇಕಾದರೆ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ಗಳು ಒಂದಾಗಿ ಕಾಂಗ್ರೆಸ್‌ ವಿರುದ್ಧ ಹೋರಾಟ ಮಾಡಬೇಕು’ ಎಂದರು. 

ಯುವ ತಂಡಕ್ಕೆ ಬೆಂಬಲಕೊಡಿ: ‘ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಯುವ ತಂಡವನ್ನು ಕಟ್ಟಲಾಗಿದೆ. ನಾನೇ ಅದರಲ್ಲಿ ಹಿರಿಯ. ಸಾಮಾಜಿಕ, ಪ್ರಾದೇಶಿಕ ಸಮಾನತೆ ಕೊಡಬೇಕು ಎಂಬ ಉದ್ದೇಶದಿಂದ ತುಂಬಾ ಲೆಕ್ಕಾಚಾರ ಮಾಡಿ ಈ ತಂಡವನ್ನು ಕಟ್ಟಲಾಗಿದೆ. ಸದಾನಂದಗೌಡರ ಆದಿಯಾಗಿ ಎಲ್ಲರೂ ಇದೊಂದು ಉತ್ತಮ ತಂಡ ಎಂದು ಹೇಳಿದ್ದಾರೆ. ಎಲ್ಲರ ಬೆಂಬಲ ಈ ತಂಡಕ್ಕೆ ಬೇಕು’ ಎಂದು ಎನ್‌.ಮಹೇಶ್‌ ಹೇಳಿದರು. 

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್ ಹೊಸ ಜವಾಬ್ದಾರಿ ವಹಿಸಿಕೊಂಡ ಎನ್‌.ಮಹೇಶ್‌ಗೆ ಶುಭ ಹಾರೈಸಿದರು. 

ಕಾರ್ಯಕ್ರಮದಲ್ಲಿ ಮಹೇಶ್‌ ಅವರನ್ನು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ಮುಖಂಡರು, ಪದಾಧಿಕಾರಿಗಳು ಕೂಡ ವೈಯಕ್ತಿಕವಾಗಿ ಸನ್ಮಾನಿಸಿದರು. 

ಮಾಜಿ ಶಾಸಕರಾದ  ನಿರಂಜನ್‌ಕುಮಾರ್, ಎಸ್.ಬಾಲರಾಜ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಬಿಜೆಪಿ ಒಬಿಸಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.