ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ: ಕೋಟೆ‌ ಎಂ.ಶಿವಣ್ಣ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 14:13 IST
Last Updated 20 ಆಗಸ್ಟ್ 2023, 14:13 IST
ಕೋಟೆ‌ ಎಂ.ಶಿವಣ್ಣ
ಕೋಟೆ‌ ಎಂ.ಶಿವಣ್ಣ   

ಗುಂಡ್ಲುಪೇಟೆ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಕೂಡ ಬಿಜೆಪಿ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದು, ವರಿಷ್ಠರು ಟಿಕೆಟ್ ನೀಡುವ ವಿಶ್ವಾಸವಿದೆ’ ಎಂದು ಮುಖಂಡ ಕೋಟೆ‌ ಎಂ.ಶಿವಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಹಿರಿತನ, ಅನುಭವ, ರಾಜಕೀಯ ಹಾದಿಯನ್ನು ಪರಿಗಣಿಸಿ ಬಿಜೆಪಿ ಹೈಕಮಾಂಡ್ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನನಗೆ ಟಿಕೆಟ್ ನೀಡುವ ವಿಶ್ವಾಸವಿದೆ’ ಎಂದರು.

‘ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪೂರ್ವ ಸಿದ್ಧತೆಗಳಿಲ್ಲದ ಕಾರಣ ಹೈಕಮಾಂಡ್ ಸೂಚಿಸಿದರೂ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಅವಕಾಶ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗಾಗಿ ಲೋಕಸಭೆಗೆ ಅವಕಾಶ ಮಾಡಿಕೊಡುವಂತೆ ವರಿಷ್ಟರಲ್ಲಿ ಮನವಿ ಮಾಡಿದ್ದೆ. ವಿಧಾನಸಭಾ ಚುನಾವಣೆಯಲ್ಲಿ ನಾನು ಚುನಾವಣಾ ಉಸ್ತುವಾರಿಯಾಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದೇನೆ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಹಾಗೂ ರಾಜ್ಯಾಧ್ಯಕ್ಷ ನಳೀನ್‍ಕುಮಾರ್‍ ಕಟೀಲ್ ಮುಂಬರುವ ಚುನಾವಣೆಗೆ 8 ವಿಧಾನಸಭೆ ಕ್ಷೇತ್ರಗಳಲ್ಲಿ ಸಕ್ರಿಯವಾಗುವಂತೆ ಹೇಳಿದ್ದಾರೆಟ ಎಂದು ತಿಳಿಸಿದರು.

ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವಿದೆ. ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೂ, ಸಧೃಡ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ವಹಿಸಿದ ಶ್ರಮವನ್ನು ಜನರು ಮೆಚ್ಚಿದ್ದಾರೆ. ಇವರು ಪ್ರಧಾನಿಯಾದ ನಂತರ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಗಿದೆ. ಉಗ್ರಗಾಮಿ ಚಟುವಟಿಕೆ ಕ್ಷೀಣಿಸಿದೆ, ವಿಪಕ್ಷಗಳು ಎಂಬ ಘಟಬಂಧನವಾದರೂ ನರೇಂದ್ರ ಮೋದಿಯವರು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಎಸ್‍ಸಿಪಿ, ಟಿಎಸ್‍ಪಿ ಹಣ ದುರುಪಯೋಗ ಇಲ್ಲವೆಂದು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ.ಮಹದೇವಪ್ಪ ಹಂಗಳ ಗ್ರಾಮದಲ್ಲಿ ನೀಡಿರುವ ಹೇಳಿಕೆ ಸುಳ್ಳು. ಪ್ರಚಾರದ ಸಲುವಾಗಿ ಹೇಳಿಕೆ ನೀಡುವುದಲ್ಲ. ನನ್ನ ವಿರುದ್ಧ ಎಚ್.ಸಿ.ಮಹದೇವಪ್ಪ ನಿಂತರೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾನೇ ಗೆಲ್ಲುತ್ತೇನೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಬಸವನಪುರ ರಾಜಶೇಖರ್, ಪುರಸಭೆ ಮಾಜಿ ಸದಸ್ಯ ಹಸಗೂಲಿ ಸಿದ್ದಯ್ಯ, ವಕೀಲರಾದ ಹಂಗಳ ಸಿದ್ದೇಶ, ಸಿದ್ದಯ್ಯ, ಮುಖಂಡರಾದ ಗುರುಲಿಂಗಯ್ಯ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.