ಹನೂರು: ನಿರಂತರ ಮಳೆಯಿಂದಾಗಿ ಕಾವೇರಿ ನದಿಯ ನೀರಿನ ಹರಿವು ಹೆಚ್ಚಿರುವುದರಿಂದ ತಾಲ್ಲೂಕಿನ ಹೊಗೆನಕಲ್ ಜಲಪಾತ ಪ್ರದೇಶದಲ್ಲಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತೆಪ್ಪ ವಿಹಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್, ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ಕಾವೇರಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಹೊಗೆನಕಲ್‌ನ ಕೊರಕಲು ಕಲ್ಲುಗಳ ನಡುವೆ ನದಿ ನೀರು ಕವಲು ಕವಲಾಗಿ ರಭಸದಿಂದ ಧುಮ್ಮಿಕ್ಕುತ್ತಿದೆ.
ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆಯು, ಹೊಗೆನಕಲ್ ಜಲಪಾತದ ಬಳಿ ತೆಪ್ಪಗಳನ್ನು ಬಿಡದಿರುವುದರಿಂದ, ತೆಪ್ಪ ನಡೆಸುವವರಿಗೆ ಸೂಚನೆ ನೀಡಿದೆ. ಹೀಗಾಗಿ, ಸದಾ ಪ್ರವಾಸಿಗರನ್ನು ತುಂಬಿಕೊಂಡು ನೀರಿನಲ್ಲಿ ಅಡ್ಡಾಡುತ್ತಿದ್ದ ತೆಪ್ಪಗಳು ಈಗ ದಡ ಸೇರಿವೆ. ನೀರಿನ ಪ್ರಮಾಣ ಕಮ್ಮಿಯಾಗುವವರೆಗೂ ತೆಪ್ಪ ವಿಹಾರಕ್ಕೆ ಅನುಮತಿ ಇಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮುಂಜಾಗ್ರತಾ ದೃಷ್ಟಿಯಿಂದ ತೆಪ್ಪ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. ತೆಪ್ಪ ನಡೆಸುವವರಿಗೂಸೂಚನೆ ನೀಡಲಾಗಿದೆ. ಈ ಹಿಂದೆ ನೀರಿನ ಪ್ರಮಾಣ ಜಾಸ್ತಿಯಾಗಿದ್ದಾಗ ತೆಪ್ಪ ನಡೆಸುವ ದುಸ್ಸಾಹಸ ಮಾಡಿ ಒಂದು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರುಜಲಸಮಾಧಿಯಾಗಿದ್ದರು. ಆ ಬಳಿಕ ಜಲಾಶಯದಿಂದ ಹೆಚ್ಚುವರಿ ನೀರು ಬಿಡುವುದಾಗಿ ಮಾಹಿತಿ ತಿಳಿಯುತ್ತಿದ್ದಂತೆ ಜಲಪಾತದಲ್ಲಿ ತೆಪ್ಪವಿಹಾರವನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.
ಪ್ರವಾಸಿಗರಿಗೆ ನಿರಾಸೆ:ಸದ್ಯ ಹೊಗೆನಕಲ್ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬಂದರೆ ಅವರಿಗೆ ನಿರಾಸೆ ಕಾಡಲಿದೆ.
‘ಮಹದೇಶ್ವರ ಬೆಟ್ಟಕ್ಕೆ ಬಂದು ದರ್ಶನ ಮುಗಿಸಿ ಹೊಗೆನಕಲ್ ಜಲಪಾತ ನೋಡಲು ಇಲ್ಲಿಗೆ ಬಂದೆವು. ಆದರೆ ನೀರಿನ ಪ್ರಮಾಣ ಜಾಸ್ತಿಯಗಿದೆ. ಎಂದು ತೆಪ್ಪ ವಿಹಾರ ಮಾಡಲು ಅವಕಾಶ ನೀಡುತ್ತಿಲ್ಲ. ದಡದಲ್ಲೇ ನಿಂತು ಹರಿಯುವ ನೀರನ್ನು ನೋಡಿ ಜಲಪಾತ ನೋಡದೇ ನಿರಾಶೆಯಿಂದ ಹಿಂದಿರುಗುವಂತಾಗಿದೆ. ಕಳೆದ ಬಾರಿಯೂ ಇದೇ ರೀತಿ ಆಗಿ ವಾಪಸ್ ಹೋಗಿದ್ದೆವು. ಈಗಲೂ ಇದೇ ಆಗಿದೆ’ ಎಂದು ನಿರಾಶೆ ವ್ಯಕ್ತಪಡಿಸಿದರು ನರಸೀಪುರದ ರಕ್ಷಿತ್ ಹೇಳಿದರು.
ಸೇತುವೆ ನಿರ್ಮಿಸಲು ಆಗ್ರಹ
ಮಳೆಗಾಲದಲ್ಲಿ ಮೈದುಂಬಿ ಹರಿಯುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರಿಗಾಗಿ ಪಾಲಪಡು ಸೇತುವೆಯನ್ನು ನಿರ್ಮಿಸಲಾಗಿತ್ತು. ಮೂರು ವರ್ಷಗಳ ಹಿಂದೆನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಆ ಬಳಿಕ ಕರ್ನಾಟಕದ ಕಡೆಯಿಂದ ಜಲಪಾತದ ವೀಕ್ಷಣೆ ಸಾಧ್ಯವಾಗುತ್ತಿಲ್ಲ. ತೆಪ್ಪದಲ್ಲಿ ಜಲಪಾತದ ಬಳಿಗೆ ಹೋಗಿ ಇಲ್ಲವೇ, ನದಿಯನ್ನು ದಾಟಿ ತಮಿಳುನಾಡು ಕಡೆಯಿಂದ ವೀಕ್ಷಿಸಬೇಕಾಗಿದೆ.ನೀರಿನ ಹರಿವು ಜಾಸ್ತಿ ಇದ್ದರೆ ಅದೂ ಸಾಧ್ಯವಾಗುವುದಿಲ್ಲ.
‘ವಿಶೇಷ ರಜೆ ಹಾಗೂ ವಾರಾಂತ್ಯದಲ್ಲಿ ರಾಜ್ಯದ ನಾನಾ ಕಡೆಗಳಿಂದ ಹಾಗೂ ನೆರೆಯ ತಮಿಳುನಾಡಿನಿಂದಲೂ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಇಲ್ಲುಗೆ ಆಗಮಿಸುತ್ತಾರೆ. ಆದರೆ ನೀರಿನ ಪ್ರಮಾಣ ಜಾಸ್ತಿಯಾದರೆ ನಿರಾಶೆಯಿಂದ ಹಿಂದಿರುಗುತ್ತಾರೆ. ಪ್ರವಾಸೋದ್ಯಮ ಇಲಾಖೆ ಸೇತುವೆ ದುರಸ್ತಿಪಡಿಸಿದರೆ ಜನರು ಜಲಪಾತವನ್ನು ವೀಕ್ಷಿಸಬಹುದಾಗಿದೆ. ಈ ಬಗ್ಗೆ ಇಲಾಖೆ ಗಮನಹರಿಸಬೇಕು’ ಎಂದು ಪ್ರವಾಸಿಗರುಒತ್ತಾಯಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.