ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ಪ್ರಸಕ್ತ ಸಾಲಿನ ಆಸ್ಕರ್ ಪ್ರಶಸ್ತಿ ವಿಜೇತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರದ ಭಾಗವಾಗಿರುವ, ನೆರೆಯ ತಮಿಳುನಾಡಿನ ಮಧುಮಲೆ ಹುಲಿ ಸಂರಕ್ಷಿತ ಪ್ರದೇಶದ ಕಾವಾಡಿ ದಂಪತಿ ಬೊಮ್ಮ ಮತ್ತು ಬೆಳ್ಳಿ ಮತ್ತೆ ಖುಷಿಯಲ್ಲಿದ್ದಾರೆ.
ತಮ್ಮನ್ನು ಭೇಟಿಯಾಗಲು ಏ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧುಮಲೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಬರುತ್ತಿರುವುದು ಅವರ ಖುಷಿಗೆ ಕಾರಣ.
ಮಾರ್ಚ್ 2ನೇ ವಾರದಲ್ಲಿ ಆಸ್ಕರ್ ಪ್ರಶಸ್ತಿ ಘೋಷಣೆಯಾದ ಬಳಿಕ ಜಗತ್ತಿನಾದ್ಯಂತ ಸುದ್ದಿಯಾದ ಈ ದಂಪತಿ ಸರ್ಕಾರ, ಸಂಘ ಸಂಸ್ಥೆಗಳ ಸನ್ಮಾನ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದರು. ಪ್ರಧಾನಿ ಭೇಟಿ ಖಚಿತವಾಗುತ್ತಿದ್ದಂತೆಯೇ ಮತ್ತೆ ಮಧುಮಲೆಯ ತೆಪ್ಪಕಾಡು ಆನೆ ಶಿಬಿರಕ್ಕೆ ಬಂದಿದ್ದಾರೆ.
ಕಾಡು ಕುರುಬ ಸಮುದಾಯಕ್ಕೆ ಸೇರಿರುವ ಈ ದಂಪತಿ ಕನ್ನಡವನ್ನೇ ಮಾತನಾಡುತ್ತಾರೆ. ಆನೆಗಳೊಂದಿಗೆ ಮಾತನಾಡುವಾಗಲೂ ಕನ್ನಡ ಬಳಸುತ್ತಾರೆ.
ತಾಯಿಯಿಂದ ಬೇರ್ಪಟ್ಟ ಕಾಡಾನೆಗಳ ಮರಿಗಳನ್ನು ಈ ದಂಪತಿ ಮನೆ ಮಕ್ಕಳಂತೆ ಸಲಹುದನ್ನು ಸಾಕ್ಷ್ಯಚಿತ್ರದಲ್ಲಿ ನೋಡಿದ ಮಂದಿ ಈಗ ಬೊಮ್ಮ-ಬೆಳ್ಳಿ ಅವರ ಭೇಟಿಗೆ ಹಾತೊರೆಯುತ್ತಿದ್ದಾರೆ. ಅವರೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ.
ಈಚೆಗೆ ಚೆನ್ನೈನಲ್ಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿ ಸನ್ಮಾನ ಸ್ವೀಕರಿಸಿ ಬಂದಿರುವ ಬೊಮ್ಮ ದಂಪತಿ, ಈಗ ಪ್ರಧಾನಿ ಮೋದಿಯವರ ಭೇಟಿ ನಿರೀಕ್ಷೆಯಲ್ಲಿದ್ದಾರೆ. ಪ್ರಧಾನಿಯವರ ಭೇಟಿಗೆ ಸಿದ್ಧರಾಗಿ ಎಂದು ಅರಣ್ಯ ಇಲಾಖೆಯವರು ದಂಪತಿಗೆ ತಿಳಿಸಿದ್ದಾರೆ.
‘ಪ್ರಜಾವಾಣಿ’ಯೊಂದಿಗೆ ಗುರುವಾರ ದೂರವಾಣಿಯಲ್ಲಿ ಮಾತನಾಡಿದ ಬೊಮ್ಮ ಖುಷಿ ಹಂಚಿಕೊಂಡರು.
45 ವರ್ಷಗಳ ಕಾಯಕ: ‘ನನ್ನ ಅಜ್ಜ, ಅಪ್ಪನ ಕಾಲದಿಂದಲೂ ಆನೆ ಸಾಕುತ್ತಾ ಬಂದಿದ್ದೇವೆ. 1984ರಲ್ಲಿ ತಂದೆಯ ನಿಧನದ ನಂತರ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. 45 ವರ್ಷಗಳ ಅವಧಿಯಲ್ಲಿ ಅನೇಕ ಆನೆಗಳನ್ನು ಸಾಕಿದ್ದೇನೆ. ಮಧುಮಲೆ, ಇಂದ್ರ, ಜಾನ್, ಸುಮಂಗಲ, ರಘು (ಸಾಕ್ಷ್ಯ ಚಿತ್ರದಲ್ಲಿರುವ ಆನೆ) ಸಾಕಿ ಇಲಾಖೆಗೆ ಒಪ್ಪಿಸಿದ್ದೇನೆ’ ಎಂದು ಬೊಮ್ಮ ವಿವರಿಸಿದರು.
‘ನಾವು ಬೆಳೆಸುವ ಪ್ರಾಣಿಗಳ ಮೇಲೆ ಅತೀವ ಪ್ರೀತಿ ಇರುತ್ತದೆ. ದೊಡ್ಡದಾದ ಮೇಲೆ ಅವುಗಳನ್ನು ಬೇರೆಡೆಗೆ ಕಳುಹಿಸುವಾಗ ಕರುಳು ಕಿತ್ತು ಬರುತ್ತದೆ’ ಎಂದು ಸಾಕಿದ ಆನೆಗಳಿಂದ ದೂರವಾಗುವಾಗಿನ ನೋವನ್ನು ತೋಡಿಕೊಂಡರು.
‘ಗಿರಿಜನರಿಂದ ಕರಾಳ ದಿನಾಚರಣೆ’
ಹುಣಸೂರು (ಮೈಸೂರು ಜಿಲ್ಲೆ): ‘ಬಂಡೀಪುರ ಹುಲಿ ರಕ್ಷಿತಾರಣ್ಯ ಯೋಜನೆಯ ಸುವರ್ಣ ಮಹೋತ್ಸವವನ್ನು ಸರ್ಕಾರವು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ, ಗಿರಿಜನರ ಹಕ್ಕು ಕಸಿದುಕೊಂಡು 50 ವರ್ಷಗಳಾಗಿವೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿಸಲು ಬಯಸುತ್ತೇವೆ’ ಎಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಹುಲಿ ಯೋಜನೆಗೆ, ಗಿರಿಜನರನ್ನು ಒಕ್ಕಲೆಬ್ಬಿಸಿ ಅರಣ್ಯದಿಂದ ಹೊರ ಹಾಕಲಾಯಿತು. ಈವರೆಗೂ ಪುನರ್ವಸತಿ ಕಲ್ಪಿಸಿಲ್ಲ. ಇದನ್ನು ಖಂಡಿಸಿ ಏ.9ರಂದು ಅತಂತ್ರ ಸ್ಥಿತಿಯಲ್ಲೇ ಜೀವ ಕಳೆದು ಕೊಂಡ ನಮ್ಮ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ ಹಾಗೂ ಕರಾಳ ದಿನವನ್ನಾಗಿ ಆಚರಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.
‘ಗಿರಿಜನರಿಂದ ಶ್ರದ್ಧಾಂಜಲಿ, ಕರಾಳ ದಿನಾಚರಣೆ’
ಹುಣಸೂರು (ಮೈಸೂರು ಜಿಲ್ಲೆ): ‘ಬಂಡೀಪುರ ಹುಲಿ ರಕ್ಷಿತಾರಣ್ಯ ಯೋಜನೆಯ ಸುವರ್ಣ ಮಹೋತ್ಸವವನ್ನು ಸರ್ಕಾರವು ಸಂಭ್ರಮದಿಂದ ಆಚರಿಸುತ್ತಿದೆ. ಆದರೆ, ಗಿರಿಜನರ ಹಕ್ಕು ಕಸಿದುಕೊಂಡು 50 ವರ್ಷಗಳಾಗಿವೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆನಪಿಸಲು ಬಯಸುತ್ತೇವೆ’ ಎಂದು ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಹುಲಿ ಯೋಜನೆಗೆ, ಗಿರಿಜನರನ್ನು ಒಕ್ಕಲೆಬ್ಬಿಸಿ ಅರಣ್ಯದಿಂದ ಹೊರ ಹಾಕಲಾಯಿತು. ಈವರೆಗೂ ಪುನರ್ವಸತಿ ಕಲ್ಪಿಸಿಲ್ಲ. ಅರಣ್ಯದಿಂದ ಹೊರ ಬಂದ 3,418 ಕುಟುಂಬಗಳು ಇಂದಿಗೂ ಅತಂತ್ರ ಸ್ಥಿತಿಯಲ್ಲಿವೆ’ ಎಂದು ಆರೋಪಿಸಿದ್ದಾರೆ.
‘ಅರಣ್ಯ ಇಲಾಖೆಯು ಸಾಮೂಹಿಕವಾಗಿ ಮಾನವ ಹಕ್ಕು ಉಲ್ಲಂಘಿಸಿದ್ದು, ಗಿರಿಜನರು ಅನೇಕ ಹೋರಾಟಗಳನ್ನು ನಡೆಸಿದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇದನ್ನು ಖಂಡಿಸಿ ಏ.9ರಂದು ಅತಂತ್ರ ಸ್ಥಿತಿಯಲ್ಲೇ ಜೀವ ಕಳೆದುಕೊಂಡ ನಮ್ಮ ಹಿರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದೇವೆ ಹಾಗೂ ಕರಾಳ ದಿನವನ್ನಾಗಿ ಆಚರಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.
*
ಪ್ರಧಾನಿ ಅವರನ್ನು ಟಿವಿಯಲ್ಲಿ ನೋಡುತ್ತಿದ್ದೆವು. ಅವರು ನಮ್ಮನ್ನು ಭೇಟಿ ಮಾಡುತ್ತಾರೆ ಎಂದರೆ ನಂಬಲಾಗುತ್ತಿಲ್ಲ, ಖುಷಿಯಾಗುತ್ತಿದೆ. ಇಲಾಖೆಗೆ ಇನ್ನೂ ಸೇವೆ ಮಾಡುವ ಮನಸ್ಸಿದೆ
-ಬೊಮ್ಮ, ಕಾವಾಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.