ADVERTISEMENT

ಮಗ ಎಂದು ಬೋಸ್‌ಗೆ ಟಿಕೆಟ್‌ ಕೊಟ್ಟಿಲ್ಲ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:06 IST
Last Updated 28 ಮಾರ್ಚ್ 2024, 14:06 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಹನೂರು (ಚಾಮರಾಜನಗರ): ‘ಸುನೀಲ್‌ ಬೋಸ್‌ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತ. ಹಾಗಾಗಿ ಟಿಕೆಟ್‌ ಸಿಕ್ಕಿದೆ. ಮಹದೇವಪ್ಪನ ಮಗ ಎಂಬ ಕಾರಣಕ್ಕೆ ಸಿಕ್ಕಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಗುರುವಾರ ಹೇಳಿದರು. 

ಹನೂರಿನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಸುನೀಲ್ ಬೋಸ್ ದುಡಿದಿದ್ದಾನೆ. ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದಾನೆ. ಇದನ್ನು ಗಮನಿಸಿ ಪಕ್ಷ ಟಿಕೆಟ್ ನೀಡಿದೆ’ ಎಂದರು. 

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ  ಪಶುಸಂಗೋಪನೆ ಮತ್ತು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌, ‘ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ವಿತರಣೆ ಮಾಡಲಾದ ಮಂತ್ರಾಕ್ಷತೆ ಅಯೋಧ್ಯೆಯಿಂದ ಬಂದಿದ್ದಲ್ಲ. ಇವರೇ ಅರಿಸಿನ ಬೆರೆಸಿ ಹಂಚಿದ್ದಾರೆ. ಅದನ್ನೇ ಅಯೋಧ್ಯೆಯಿಂದ ಬಂದಿದ್ದು ಎಂದು ಸುಳ್ಳು ಹೇಳಿದ್ದಾರೆ. ಆ ಅಕ್ಕಿ ಕೂಡ ಅನ್ನಭಾಗ್ಯದ್ದು. ಬಿಜೆಪಿಯವರು ಅಂತಹ ನೀಚರು’ ಎಂದರು. 

ADVERTISEMENT

‘ಮಾತೆತ್ತಿದರೆ ರಾಮಮಂದಿರ, ರಾಮಮಂದಿರ ಎಂದು ಹೇಳುತ್ತಾರೆ. ಅಯೋಧ್ಯೆಯಲ್ಲಿ ಮಾತ್ರ ರಾಮಮಂದಿರ ಇದೆಯಾ? ಎಲ್ಲ ಊರುಗಳಲ್ಲೂ ಇದೆ. ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡೇ ಬಿಜೆಪಿಯವರು ರಾಜಕೀಯ ಮಾಡುತ್ತಾರೆ’ ಎಂದು ದೂರಿದರು. 

‘ಸಂವಿಧಾನ ಬದಲಾವಣೆ ಮಾಡುವ ರಹಸ್ಯ ಕಾರ್ಯಸೂಚಿಯನ್ನು ಇಟ್ಟುಕೊಂಡೇ 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಅಷ್ಟು ಸ್ಥಾನಗಳಲ್ಲಿ ಗೆದ್ದರೆ ಮುಂದೆ, ಚುನಾವಣೆಯೇ ಬೇಡ ಜನರು ನಮಗೆ ಮತ ಹಾಕುತ್ತಾರೆ ಎಂದು ಹೇಳುತ್ತಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.