ಚಾಮರಾಜನಗರ: ಭಾರತೀಯ ಬೌದ್ದ ಮಹಾಸಭಾ ರಾಜ್ಯ ಶಾಖೆ, ಮೈಸೂರು ಜಿಲ್ಲಾ ಶಾಖೆ ವತಿಯಿಂದ ಇದೇ 26ರಂದು ಮೈಸೂರಿನಲ್ಲಿ ರಾಜ್ಯ ಮಟ್ಟದ ಬೌದ್ದ ಮಹಾ ಸಮ್ಮೇಳನ ನಡೆಯಲಿದೆ.
ಮಹಾಸಭಾದ ರಾಜ್ಯ ಉಪಾಧ್ಯಕ್ಷ ಮಹೇಂದ್ರ ಮಾಂಕಾಳೆ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂಬೇಡ್ಕರ್ ಅವರ ಸಂದೇಶವನ್ನು ಜನರಿಗೆ ಪ್ರಚುರ ಪಡಿಸುವುದಕ್ಕಾಗಿ ಮೈಸೂರಿನ ಲಲಿತ ಮಹಲ್ ಅರಮನೆ ಮೈದಾನದಲ್ಲಿ ಮಹಾ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ ಮೈಸೂರು ಪುರಭವನದಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ, ಅಂಬೇಡ್ಕರ್ ಅವರ ಮೊಮ್ಮಗ, ಭಾರತೀಯ ಬೌದ್ದ ಮಹಾಸಭಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಮಾಲಾರ್ಪಣೆ ಮಾಡಲಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯದ ಸಮತಾ ಸೈನಿಕ ದಳದವರಿಂದ ಪಥ ಸಂಚಲನ ನಡೆಯಲಿದೆ’ ಎಂದರು.
ಬೆಳಿಗ್ಗೆ 10.30ಕ್ಕೆ ಭಿಕ್ಕು ಸಂಘದ ಸಾನಿಧ್ಯದಲ್ಲಿ ತಿಸರಣ-ಪಂಚಶೀಲ ಸ್ವೀಕಾರ-ಮೈತ್ರಿಧ್ಯಾನ ನಡೆಯಲಿದೆ. ಡಾ.ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಾವೇಶ ನಡೆಯಲಿದೆ. ಇದೇ ಮೊದಲ ಬಾರಿಗೆ ಸಮ್ಮೇಳನ ಆಯೋಜಿಸಲಾಗಿದೆ. ಬೌದ್ದ ಸಂಘಟನೆಗಳು ಹಾಗೂ ಎಲ್ಲ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಸಮಾವೇಶ ಅಯೋಜಿಸಲಾಗಿದೆ. ಇದು ರಾಜಕೀಯೇತರ ಸಮ್ಮೇಳನ ಎಲ್ಲರಿಗೂ ಇಲ್ಲಿ ಅವಕಾಶ ಇದೆ. 25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದರು.
ಭಾರತೀಯ ಬೌದ್ದ ಮಹಾಸಭಾ ಜಿಲ್ಲಾಧ್ಯಕ್ಷ ಆರ್.ಬಸವರಾಜು ಮಾತನಾಡಿ, ‘ಜಿಲ್ಲೆಯಿಂದ 5000 ಜನರು ಭಾಗವಹಿಸಲಿದ್ದಾರೆ’ ಎಂದರು.
ಆರ್ಥಿಕ ನೆರವು: ದಲಿತ ಮಹಸಭಾದ ಅಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಮಾತನಾಡಿ, ‘ಈ ಸಮಾವೇಶಕ್ಕಾಗಿ ನಾವು ರಾಜಕಾರಣಿಗಳ ಬಳಿ ದೇಣಿಗೆ ಕೇಳಿಲ್ಲ. ಸ್ವಯಂ ಪ್ರೇರಿತರಾಗಿ ನೀಡಿದರೆ ತೆಗೆದುಕೊಳ್ಳುತ್ತೇವೆ. ನಾನೂ ವೈಯಕ್ತಿಕವಾಗಿ ₹50 ಸಾವಿರ ದೇಣಿಗೆ ನೀಡುತ್ತಿದ್ದೇನೆ. ಎಲ್ಲರೂ ಆರ್ಥಿಕವಾಗಿ ಸಹಾಯ ಮಾಡಬೇಕು’ ಎಂದು ಮನವಿ ಮಾಡಿದರು.
ಭಾರತೀಯ ಬೌದ್ದ ಮಹಾಸಭಾ ತಾಲ್ಲೂಕು ಅಧ್ಯಕ್ಷ ಸಿದ್ದರಾಜು, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ಮುಖಂಡ ಜಿ.ಎಂ.ಗಾಡ್ಕರ್, ದೊಡ್ಡರಾಯಪೇಟೆ ಮಹೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.