ADVERTISEMENT

ಅಸ್ಪೃಶ್ಯತೆ ಹತ್ತಿಕ್ಕಲು ಯುವ ಜನರು ಮುಂದಾಗಿ: ಪುಟ್ಟರಂಗಶೆಟ್ಟಿ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದ ೩೮ ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2023, 16:12 IST
Last Updated 3 ಆಗಸ್ಟ್ 2023, 16:12 IST
ಚಾಮರಾಜನಗರ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ಪುರುಷರ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 132ನೇ ಜಯಂತಿ ಹಾಗೂ ಹಾಸ್ಟೆಲ್‌ನ 38ನೇ ವಾರ್ಷಿಕೋತ್ಸವದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಚಾಮರಾಜನಗರ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ಪುರುಷರ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 132ನೇ ಜಯಂತಿ ಹಾಗೂ ಹಾಸ್ಟೆಲ್‌ನ 38ನೇ ವಾರ್ಷಿಕೋತ್ಸವದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು   

ಚಾಮರಾಜನಗರ: ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವರ ಹಾದಿಯಲ್ಲೇ ಸಾಗಬೇಕು’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಗುರುವಾರ ಹೇಳಿದರು. 

ನಗರದ ಚಾಮರಾಜನಗರ ವಿಶ್ವವಿದ್ಯಾಲಯದ ಎಸ್‌ಸಿ, ಎಸ್‌ಟಿ ಪುರುಷರ ಹಾಸ್ಟೆಲ್‌ನಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ 132ನೇ ಜಯಂತಿ ಹಾಗೂ ಹಾಸ್ಟೆಲ್‌ನ 38ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. 

‘ಅಂಬೇಡ್ಕರ್ ಒಬ್ಬ ಮಹಾನ್ ವ್ಯಕ್ತಿ. ಅವರ ವಿಚಾರಧಾರೆಗಳು ಇಂದಿನ ಯುವಜನತೆಗೆ ದಾರಿದೀಪ. ಅವರು ರಚಿಸಿದ ಸಂವಿಧಾನದಿಂದಾಗಿ ಹಲವಾರು ಶೋಷಿತ ಸಮುದಾಯಗಳಿಗೆ ರಕ್ಷಣೆ ದೊರಕಿದೆ. ಸಂವಿಧಾನ ಅಂಗೀಕರಿಸಿ ಏಳು ದಶಕಗಳಾದರೂ ಮುಂದುವರಿದ ಸಮಾಜಗಳು ಅಸ್ಪೃಶ್ಯತೆ ಆಚರಣೆ ಮಾಡುತ್ತಿವೆ’ ಎಂದರು. 

ADVERTISEMENT

‘ಅನೇಕ ಸಮಾಜಗಳು ಸಮಾನತೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಅನೇಕ ಕಡೆಗಳಲ್ಲಿ ಇನ್ನೂ ಕೂಡ ಅಸ್ಪೃಶ್ಯತೆ ಆಚರಣೆ ಇದೆ. ಇಂತಹ ಆಚರಣೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಯುವ ಸಮುದಾಯ ಮುಂದಾಗಬೇಕು’ ಎಂದರು. 

ಮೈಸೂರು ಮಹಾರಾಜ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ವಿ.ಷಣ್ಮುಗಂ ಮಾತನಾಡಿ,‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಅಸ್ಪೃಶ್ಯತೆ, ಅಸಮಾನತೆ ಈಗಲೂ ತಾಂಡವವಾಡುತ್ತಿದೆ. ಸಮುದಾಯವನ್ನು ಅಸ್ಪೃಶ್ಯತೆಯಿಂದ ವಿಮೋಚನೆಗೊಳಿಸಲು ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬಲ್ಲರು’ ಎಂದರು. 

‘ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ಬುದ್ದಿಶಕ್ತಿ, ಸಾಮರ್ಥ್ಯ ಸಾಬೀತುಪಡಿಸಬೇಕು. ವೈಯಕ್ತಿಕ ಅಭಿವೃದ್ಧಿ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೂ ಗಮನಹರಿಸಬೇಕು’ ಎಂದು ಹೇಳಿದರು. ಶ್ರೀ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಲಯದ ಶಿಕ್ಷಣ ಸಲಹೆಗಾರ ಪಿ.ದೇವರಾಜು, ವಿವಿ ಕುಲಪತಿ ಪ್ರೊ.ಎಂ.ಆರ್‌.ಗಂಗಾಧರ್‌ ಮಾತನಾಡಿದರು. ಮೈಸೂರು ವಿ.ವಿ ವಿದ್ಯಾರ್ಥಿಕ್ಷೇಮ ವಿದ್ಯಾರ್ಥಿನಿಲಯದ ನಿರ್ದೇಶಕ ಬಿ.ಎಸ್.ಚಂದ್ರಶೇಖರ್, ನಗರಸಭಾ ಸದಸ್ಯೆ ಕುಮುದಾ, ವಿ.ಜೆ.ಸಿದ್ದರಾಜು, ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಚಂದ್ರಮ್ಮ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.