ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು ವಲಯದ ಬೇಡಗುಳಿ ವ್ಯಾಪ್ತಿಯಲ್ಲಿ ಸೋಮವಾರ ಕಂಡು ಬಂದಿದ್ದ ಕಾಳ್ಗಿಚ್ಚನ್ನು ತಡ ರಾತ್ರಿ ಆರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬೇಡಗುಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ವ್ಯಾಪ್ತಿಯ ಕುರಿಮಂದೆ, ಬಜೆಬಾವಿ ಪ್ರದೇಶದ ಮೂರು ಕಡೆ ಬೆಂಕಿ ಕಾಣಿಸಿಕೊಂಡಿತ್ತು. ಎರಡು ಕಡೆಗಳಲ್ಲಿ ಸಂಜೆ ಒಳಗಾಗಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದರು. ಆದರೆ, ಮತ್ತೊಂದು ಸ್ಥಳದಲ್ಲಿ ಸಾಧ್ಯವಾಗಿರಲಿಲ್ಲ. ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಡ ರಾತ್ರಿವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಿದರು.
ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ದೀಪ್ ಜೆ.ಕಾಂಟ್ರ್ಯಾಕ್ಟರ್, ‘ರಾತ್ರಿ 12 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಬೂದಿಯಲ್ಲಿ ಬೆಂಕಿಯ ಕಿಡಿಗಳು ಇರುವ ಸಾಧ್ಯತೆ ಇದ್ದುದರಿಂದ ಮಂಗಳವಾರ ಮತ್ತೆ ಬೆಂಕಿ ಬಿದ್ದ ಸ್ಥಳಗಳಿಗೆ ಭೇಟಿ ನೀಡಿ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದರು.
ಎಷ್ಟು ಪ್ರದೇಶ ಸುಟ್ಟಿದೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಧಿಕಾರಿಗಳು 50–60 ಎಕರೆಗಳಷ್ಟು ಸುಟ್ಟಿರಬಹುದು ಎಂದು ಅಂದಾಜಿಸಿದ್ದಾರೆ. ಸ್ಥಳೀಯರು ಮಾತ್ರ ಕನಿಷ್ಠ ಎರಡು ಗುಡ್ಡಗಳಿಗೆ ಬೆಂಕಿ ಬಿದ್ದಿದೆ. ಹಾಗಾಗಿ, ಹೆಚ್ಚಿನ ಪ್ರದೇಶ ಸುಟ್ಟಿರಬಹುದು ಎಂದು ಹೇಳುತ್ತಿದ್ದಾರೆ.
‘50ಕ್ಕೂ ಹೆಚ್ಚು ಎಕರೆ ಪ್ರದೇಶ ಸುಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಡ್ರೋನ್ ಸರ್ವೆಯಲ್ಲಿ ಪೂರ್ಣ ಮಾಹಿತಿ ಸಿಕ್ಕಿಲ್ಲ. ಉಪಗ್ರಹ ಆಧಾರಿತ ಚಿತ್ರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ದೀಪ್ ಹೇಳಿದರು.
ನೆಲ ಬೆಂಕಿಯಾಗಿದ್ದರಿಂದ ಬೆಂಕಿ ಹೆಚ್ಚು ಎತ್ತರಕ್ಕೆ ವ್ಯಾಪಿಸಿಲ್ಲ. ಬಿಸಿಲು ಮತ್ತು ಗಾಳಿ ಬೀಸುತ್ತಿದ್ದುದರಿಂದ ಬೆಂಕಿ ಆರಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು
-ದೀಪ್ ಜೆ.ಕಾಂಟ್ರ್ಯಾಕ್ಟರ್ ಬಿಆರ್‌ಟಿ ಡಿಸಿಎಫ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.