ADVERTISEMENT

ನನಸಾಗಲಿದೆಯೇ ‘ಜೀವವೈವಿಧ್ಯ ಭರಚುಕ್ಕಿ’ ಕನಸು?

ಕೊಳ್ಳೇಗಾಲ; ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಿದೆ ಕಾಳಜಿ, ಕೈಗಾರಿಕೆಗೆ ಸಿಗಬೇಕಿದೆ ಉತ್ತೇಜನ

ಅವಿನ್ ಪ್ರಕಾಶ್
Published 21 ಫೆಬ್ರುವರಿ 2022, 19:45 IST
Last Updated 21 ಫೆಬ್ರುವರಿ 2022, 19:45 IST
ಭರಚುಕ್ಕಿ ಜಲಪಾತದ ಮನಮೋಹಕ ನೋಟ
ಭರಚುಕ್ಕಿ ಜಲಪಾತದ ಮನಮೋಹಕ ನೋಟ   

ಕೊಳ್ಳೇಗಾಲ: ಚಾಮರಾಜನಗರ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿರುವ ಕೊಳ್ಳೇಗಾಲ ಹಾಗೂ ತಾಲ್ಲೂಕು ಪ್ರವಾಸಿ ತಾಣಗಳಿಗೆ ಪ್ರಸಿದ್ಧಿ.

ಹನೂರು ಪ್ರತ್ಯೇಕ ತಾಲ್ಲೂಕು ಆಗಿ ರೂಪುಗೊಂಡ ನಂತರ ಕೊಳ್ಳೇಗಾಲ ತಾಲ್ಲೂಕಿನ ವ್ಯಾಪ್ತಿ ಕುಗ್ಗಿದೆ. ಪುಟ್ಟ ತಾಲ್ಲೂಕಿನಲ್ಲಿ ಹಲವು ಪ್ರವಾಸಿ ಸ್ಥಳಗಳಿವೆ. ಪವಾಡ ಪುರುಷರು ಓಡಾಡಿದ ಧಾರ್ಮಿಕ ಸ್ಥಳಗಳಿವೆ. ಹಾಗಾಗಿ, ಇಲ್ಲಿ ಪರಿಸರ, ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೇರಳ ಅವಕಾಶಗಳಿವೆ.

ಭರಚುಕ್ಕಿ ಜಲಪಾತ, ಸಮೂಹ ದೇವಾಲಯಗಳು, ಮುಸ್ಲಿಮರ ದರ್ಗ ಹಾಗೂ ಇತಿಹಾಸ ಹೊಂದಿರುವ ವೆಸ್ಲಿ ಸೇತುವೆ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಲ್ಲೆಲ್ಲ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ನಡೆದಿಲ್ಲ.

ADVERTISEMENT

ಭರಚುಕ್ಕಿ ಜಲಪಾತ ಪ್ರದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವ ಎಲ್ಲ ಸಾಮರ್ಥ್ಯ ಹೊಂದಿದೆ. ಆದರೆ, ಈ ಪ್ರದೇಶ ಹೆಚ್ಚು ಅಭಿವೃದ್ಧಿಯಾಗಿಲ್ಲ.

ಎರಡು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯ ಅಧಿಕಾರಿಗಳು ಜಲಪಾತ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ನೀಲ ನಕ್ಷೆಯೊಂದನ್ನು ಸಿದ್ಧಪಡಿಸಿದ್ದರು. ’ಜೀವವೈವಿಧ್ಯ ಭರಚುಕ್ಕಿ‘ ಎಂಬ ಹೆಸರಿನಲ್ಲಿ 150 ಎಕರೆ ಪ್ರದೇಶದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಯೋಜನೆಯೊಂದನ್ನು ರೂಪಿಸಿದ್ದರು. ಪ್ರವಾಸೋದ್ಯಮ ಸಚಿವರ ಮುಂದೆಯೂ ಯೋಜನೆಯ ವಿವರಗಳನ್ನು ಪ್ರದರ್ಶಿಸಿದ್ದರು. ಈ ಯೋಜನೆಗೆ ₹60 ಕೋಟಿಯಿಂದ ₹100 ಕೋಟಿಗಳಷ್ಟು ಹಣ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಈ ಯೋಜನೆ ಅನುಷ್ಠಾನಗೊಂಡರೆ ಭರಚುಕ್ಕಿ ಜಲಪಾತ ಪ್ರದೇಶ ಜಾಗತಿಕವಾಗಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವೇ ಇಲ್ಲ ಎಂದು ಹೇಳುತ್ತಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಒಂದೇ ಬಾರಿಗೆ ಅಷ್ಟೂ ಹಣವನ್ನು ನೀಡಬೇಕಾಗಿಲ್ಲ. ಹಂತ ಹಂತವಾಗಿ ಮಂಜೂರು ಮಾಡಿದರೆ ಸಾಕು.ಕನಿಷ್ಠ ಪಕ್ಷ ಪ್ರಾಥಮಿಕ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡಿದರೆ ಪ್ರವಾಸಿ ತಾಣದ ಅಭಿವೃದ್ಧಿಯ ದೃಷ್ಟಿಯಿಂದ ಅನುಕೂಲವಾಗುತ್ತದೆ ಎಂಬುದು ಅವರ ಮಾತು.

ಈ ಯೋಜನೆ ಅನುಷ್ಠಾನಗೊಂಡರೆ ತಾಲ್ಲೂಕಿಗೂ ಹೆಸರು ಬರುತ್ತದೆ. ಅಭಿವೃದ್ಧಿಯೂ ಆಗುತ್ತದೆ. ಹಾಗಾಗಿ, ಸರ್ಕಾರ ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಬೇಕು ಎಂಬುದು ತಾಲ್ಲೂಕಿನ ಜನರ ಒತ್ತಾಸೆ.

ಕೈಗಾರಿಕೆಗೆ ಬೇಕು ಉತ್ತೇಜನ: ತಾಲ್ಲೂಕುಗಳಲ್ಲಿ ಹೆಚ್ಚು ಕೈಗಾರಿಕೆಗಳಿಲ್ಲ. ನಂತೂರಿನಲ್ಲಿರುವ ಸಕ್ಕರೆ ಕಾರ್ಖಾನೆ ಬಿಟ್ಟರೆ ದೊಡ್ಡ ಕಾರ್ಖಾನೆಗಳು ಬೇರೆ ಇಲ್ಲ. ತಾಲ್ಲೂಕಿನ ಯುವ ಜನತೆ ಕೆಲಸಕ್ಕಾಗಿ ಮೈಸೂರು, ಬೆಂಗಳೂರಿನಂತಹ ನಗರಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬಜೆಟ್‌ನಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ಕೊಟ್ಟರೆ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ ಎಂಬುದು ತಾಲ್ಲೂಕಿನ ಜನರ ಅಭಿಪ್ರಾಯ.

ಸಮುದಾಯ ಭವನಗಳಿಗೆ ಅನುದಾನದ ನಿರೀಕ್ಷೆ: ಅನುದಾನದ ಕೊರತೆಯಿಂದಾಗಿ ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಸಮುದಾಯ ಭವನಗಳ ಕಾಮಗಾರಿಗಳು ಮುಕ್ತಾಯವಾಗಿಲ್ಲ. ಭವನಗಳ ನಿರ್ಮಾಣ ವಿಳಂಬವಾಗುತ್ತಿರುವುದರಿಂದ ಜನರು ಶಾಸಕರು, ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಪ್ರಸಂಗಗಳೂ ಆಗಾಗ ಜರುಗುತ್ತಿರುತ್ತವೆ. ಹೀಗಾಗಿ, ಸಮುದಾಯ ಭವನಗಳ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ತಾಲ್ಲೂಕಿನ ಗ್ರಾಮೀಣ ಭಾಗಗಳ ರಸ್ತೆಗಳು ಹದಗೆಟ್ಟಿವೆ. ನಗರದ ಅಭಿವೃದ್ಧಿಯೂ ಹಿಂದೆ ಉಳಿದಿದೆ. ಕೆರೆಗಳಿಗೆ ನೀರು ತುಂಬಿಸುವುದು, ಅಭಿವೃದ್ಧಿ ಇನ್ನೂ ಆಗಿಲ್ಲ. ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘರ್ಷಗಳು ಕಡಿಮೆಯಾಗಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಮಂಡಿಸುವ ಬಜೆಟ್‌ನಲ್ಲಿ ಇವುಗಳ ಬಗ್ಗೆಯೂ ಗಮನಹರಿಸಬೇಕು ಎಂದು ಹೇಳುತ್ತಾರೆ ಸಾರ್ವಜನಿಕರು.

ಖರೀದಿ ಕೇಂದ್ರಗಳು ಸ್ಥಾಪನೆ ಆಗಬೇಕು

ನಮ್ಮ ಜಿಲ್ಲೆಯಲ್ಲಿ ಹಾಗೂ ತಾಲ್ಲೂಕಿನಲ್ಲಿ ಹೆಚ್ಚಾಗಿ ರೈತರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರು ಕಷ್ಟಪಟ್ಟು ಬೆಳೆ ಬೆಳೆಯುತ್ತಾರೆ. ಆದರೆ ಅವರಿಗೆ ಸರಿಯಾಗಿ ಬೆಂಬಲ ಬೆಲೆ ಸಿಗುವುದಿಲ್ಲ ದಳ್ಳಾಳಿಗಳ ಹಾವಳಿ ಮೀತಿ ಮೀರಿದೆ. ಆ ಕಾರಣ ತಾಲ್ಲೂಕಿನಲ್ಲಿ ಬೆಳೆಗಳ ಖರೀದಿ ಕೇಂದ್ರಗಳು ಸ್ಥಾಪನೆ ಆಗಬೇಕು. ಗ್ರಾಮಗಳಲ್ಲಿಯೂ ಸ್ಥಾಪನೆ ಆಗಬೇಕು

– ಶೈಲೇಂದ್ರ,ರೈತ

ಮಾದರಿ ತಾಲ್ಲೂಕು ಆಗಲಿ

ಕೊಳ್ಳೇಗಾಲ ರಾಜ್ಯಕ್ಕೆ ಮಾದರಿಯಾಗಬೇಕು. ನಗರದಲ್ಲಿ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿ, ಸರ್ಕಟನ್ ಕಾಲುವೆ, ರಸ್ತೆ, ಚರಂಡಿ, 24x7 ಶುದ್ಧಕುಡಿಯುವ ನೀರಿನ ಕಾಮಗಾರಿ ಶೀಘ್ರ ಪೂರ್ಣಗೊಳ್ಳಬೇಕು. ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಬೇಕಾದರೆ ತಾಲ್ಲೂಕಿನ ಎಲ್ಲ ಕೆರೆಗಳನ್ನೂ ಅಭಿವೃದ್ದಿಪಡಿಸಬೇಕು. ನಗರದ ಚಿಕ್ಕರಂಗನಾಥನ ಮತ್ತು ದೊಡ್ಡರಂಗನಾಥ ಕೆರೆ, ಕೊಂಗಳಕೆರೆ, ಪಾಳ್ಯ ಗ್ರಾಮದ ದೊಡ್ಡ ಕೆರೆಯನ್ನು ಅಭಿವೃದ್ದಿ ಮಾಡಲು ಕ್ರಿಯಾ ಯೋಜನೆ ತಯಾರು ಮಾಡಲಾಗಿದೆ. ಬಜೆಟ್‌ನಲ್ಲಿ ಈ ಕಾರ್ಯಕ್ಕೆ ಅನುದಾನ ಮೀಸಲಿಡಬೇಕು.

–ಮುಡಿಗುಂಡ ಶಾಂತರಾಜು, ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.