ADVERTISEMENT

ಬಜೆಟ್‌: ಚಾಮರಾಜನಗರ ಜಿಲ್ಲೆಗೆ ಆದ್ಯತೆ ನೀಡುವರೇ ಸಿದ್ದರಾಮಯ್ಯ?

ಜಿಲ್ಲೆಯ ಜನರಲ್ಲಿ ಹಲವು ನಿರೀಕ್ಷೆ, ವಿಧಾನಸಭಾ ಅಧಿವೇಶನದ ಮೇಲೆ ಎಲ್ಲರ ದೃಷ್ಟಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 6:55 IST
Last Updated 12 ಫೆಬ್ರುವರಿ 2024, 6:55 IST
ಚಾಮರಾಜನಗರದ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್‌ ಕೈಗಾರಿಕೆ
ಚಾಮರಾಜನಗರದ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಬೃಹತ್‌ ಕೈಗಾರಿಕೆ   

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ 16ರಂದು 2024–25ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಪ್ರತಿ ಬಾರಿಯಂತೆ ಈ ಸಲವೂ ಜಿಲ್ಲೆಯ ಜನರು ಬಜೆಟ್‌ ಬಗ್ಗೆ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. 

ಕಳೆದ ವರ್ಷ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆಗಳು ಇರಲಿಲ್ಲ.

ರಾಜ್ಯದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ (ಕೆಎಸ್‌ಎಸ್‌ಐಡಿಸಿ) ವತಿಯಿಂದ ಚಾಮರಾಜನಗರದ ಬದನಗುಪ್ಪೆಯಲ್ಲಿ ವಸಾಹತು ಸ್ಥಾಪನೆ ಹಾಗೂ ಪ್ರೂಟ್ಸ್‌ (FRUITS), ಕುಟುಂಬ (Kutumba), ಜಿಐಎಸ್‌ಗಳನ್ನು (GIS) ಬಳಸಿಕೊಂಡು ತಾಲ್ಲೂಕು ಹಂತದ ಕಚೇರಿಗಳಲ್ಲಿನ ಸೇವೆಗಳನ್ನು ತತ್‌ಕ್ಷಣವೇ ಅಥವಾ ಅದೇ ದಿನದಂದು ಅಥವಾ ಅತ್ಯಂತ ಸಂಕೀರ್ಣ ಪ್ರಕರಣಗಳಲ್ಲಿ ವಾರದೊಳಗೆ ಸಾರ್ವಜನಿಕರಿಗೆ ಒದಗಿಸುವ ಪ್ರಯೋಗಿಕ ಯೋಜನೆಯನ್ನು ಚಾಮರಾಜನಗರ ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದರು. 

ADVERTISEMENT

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013–18) ಜಿಲ್ಲೆ ಹಾಗೂ ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿದ್ದರು. ಹಾಗಾಗಿ, ಅವರ ಮೇಲೆ ಜಿಲ್ಲೆಯ ಜನರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಬಾರಿ, ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತವಾಗಿರುವುದರಿಂದ ರೈತಾಪಿ ವರ್ಗ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ.   

ವಿಶೇಷ ಪ್ಯಾಕೇಜ್‌ ಬೇಕು: ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕಳಚಿಕೊಳ್ಳಲು ಯತ್ನಿಸುತ್ತಿರುವ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಇನ್ನಷ್ಟು ಉತ್ತೇಜನ ನೀಡಬೇಕಾಗಿದೆ. ದೊಡ್ಡ ದೊಡ್ಡ ಯೋಜನೆಗಳು ಬರಬೇಕಾಗಿದೆ. ಹಾಗಾಗಿ, ಜಿಲ್ಲೆಗೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂಬ ಕೂಗು ಹಲವು ವಲಯಗಳಿಂದ ಕೇಳಿ ಬರುತ್ತಿದೆ.

ತಾಲ್ಲೂಕಿನ ಕೆಲ್ಲಂಬಳ್ಳಿ– ಬದನಗುಪ್ಪೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದ ಕಾರಣದಿಂದ ಈಗ ಉದ್ದಿಮೆಗಳು ಬರುತ್ತಿವೆ. ಪ‍್ರಮುಖ ವಾಣಿಜ್ಯ ನಗರಿಯಾಗಿರುವ ಕೊಳ್ಳೇಗಾಲದಲ್ಲೂ ಇಂತಹ ಕೈಗಾರಿಕಾ ಪ್ರದೇಶ ಬೇಕು ಎಂಬುದು ಉದ್ಯಮಿಗಳ ಬೇಡಿಕೆ. ಹನೂರು, ಗುಂಡ್ಲುಪೇಟೆಯಲ್ಲೂ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು ಎಂಬ ಒತ್ತಾಯವನ್ನು ಆ ಭಾಗದವರು ಮಾಡುತ್ತಿದ್ದಾರೆ. 

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳು ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿಲ್ಲ. ಸಮರ್ಪಕ ಒಳಚರಂಡಿ ವ್ಯವಸ್ಥೆಗಳೂ ಇಲ್ಲಿಲ್ಲ. ಜನ ಸೌಕರ್ಯಗಳೂ ಸರಿಯಾಗಿಲ್ಲ. 

ಚಾಮರಾಜನಗರಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರತ್ಯೇಕ ತಾಲ್ಲೂಕು ಆಗಿರುವ ಹನೂರು ಪಟ್ಟಣ ಅಭಿವೃದ್ಧಿಯ ಹಾದಿಗೆ ಇನ್ನೂ ಹೊರಳಿಲ್ಲ. ಜಿಲ್ಲಾ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆಗಳು ಹಾಳಾಗಿದ್ದು, ಅಭಿವೃದ್ಧಿಗಾಗಿ ಕಾಯುತ್ತಿವೆ.  

ವಿವಿಗೆ ಬೇಕಿದೆ ಅನುದಾನ: ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡಿಲ್ಲ. ಕೊಠಡಿಗಳಂತಹ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಹಾಗಾಗಿ, ಹೆಚ್ಚಿನ ಅನುದಾನ ಬೇಕು ಎಂಬುದು ವಿದ್ಯಾರ್ಥಿಗಳು, ಪೋಷಕರ ಆಗ್ರಹ. 

ಗಡಿ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸುವ ಅಗತ್ಯವೂ ಇದೆ.

ಪ್ರವಾಸಿಗರಿಗೆ ಸೌಕರ್ಯ ಬೇಕು: ಜಿಲ್ಲೆಯ ಆದಾಯವನ್ನು ಹೆಚ್ಚಿಸಬಲ್ಲಂತಹ ಪ್ರವಾಸಿ ತಾಣಗಳು ಸಾಕಷ್ಟಿವೆ. ಆದರೆ, ಯಾವುದೂ ವ್ಯವಸ್ಥಿತವಾಗಿ ಅಭಿವೃದ್ಧಿಯಾಗಿಲ್ಲ. ಧಾರ್ಮಿಕ ಪ್ರವಾಸಿ ತಾಣಗಳಾದ ದೇವಾಲಯಗಳು , ಇತರೆ ಪ್ರಸಿದ್ಧ ತಾಣಗಳಲ್ಲಿ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ.  

ರೇಷ್ಮೆಗೆ ಸಿಗುವುದೇ ಉತ್ತೇಜನ?: ರೇಷ್ಮೆ ಕೃಷಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಲ್ಲಿ ಈಗ ರೇಷ್ಮೆ ಕೃಷಿ ಅಪರೂಪವಾಗಿದೆ. ರೇಷ್ಮೆ ಕಾರ್ಖಾನೆಗಳು ಮುಚ್ಚಿವೆ. ಮಾರುಕಟ್ಟೆಗಳಷ್ಟೇ ಚಾಲ್ತಿಯಲ್ಲಿವೆ. 

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರೇಷ್ಮೆ ಕಾರ್ಖಾನೆಗಳ ಪುನಶ್ಚೇತನಕ್ಕೆ ₹5 ಕೋಟಿ ಘೋಷಿಸಿದ್ದರು. ಅದು ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲೆಯಲ್ಲಿ ಮತ್ತೆ ರೈತರು ರೇಷ್ಮೆ ಕೃಷಿಗೆ ಮನಸ್ಸು ಮಾಡಿದ್ದು, ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕಿದೆ. 

ಸುಧಾರಿಸಬೇಕಿದೆ ಆರೋಗ್ಯ ಸೇವೆ: ಜಿಲ್ಲೆಯ ನಗರ, ಪಟ್ಟಣ ಹಾಗೂ ಗ್ರಾಮೀಣ ಭಾಗ, ಕಾಡಂಚಿನ ಪ್ರದೇಶಗಳಲ್ಲಿ ಆರೋಗ್ಯ ಸೇವೆ ಇನ್ನಷ್ಟು ಸುಧಾರಿಸಬೇಕಿದೆ. ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ಎಲ್ಲ ಚಿಕಿತ್ಸೆಗಳು ಲಭ್ಯವಾಗುವಂತೆ ಮಾಡಬೇಕಿದೆ. 

ಶೇ 48ರಷ್ಟು ಅರಣ್ಯ ಪ್ರದೇಶ ಇರುವುದರಿಂದ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಅನುದಾನದ ಅಗತ್ಯವೂ ಇದೆ. 

ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ ನಿಧಾನವಾಗುತ್ತಿದ್ದು, ಹೆಚ್ಚು ಅನುದಾನ ನೀಡುವ ಮೂಲಕ ಯೋಜನೆಗೆ ವೇಗ ನೀಡಬೇಕಾಗಿದೆ. ಮಳೆಯಾಶ್ರಿತ ಪ್ರದೇಶಗಳಿಗೆ, ವಿಶೇಷವಾಗಿ ಗುಂಡ್ಲುಪೇಟೆ ತಾಲ್ಲೂಕಿಗೆ ನೀರಾವರಿ ಯೋಜನೆಯ ಅಗತ್ಯವಿದೆ. 

ಪೂರಕ ಮಾಹಿತಿ: ನಾ.ಮಂಜುನಾಥಸ್ವಾಮಿ, ಅವಿನ್‌ ಪ್ರಕಾಶ್‌ ವಿ., ಮಹದೇವ್ ಹೆಗ್ಗವಾಡಿಪುರ, ಮಲ್ಲೇಶ ಎಂ., ಬಿ.ಬಸವರಾಜು

.
ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಇನ್ನಷ್ಟು ವೇಗ ನೀಡಬೇಕಿದೆ
ಮುನ್ನ
ಶಿವಣ್ಣ
ನಾಗೇಂದ್ರ
ಪ್ರದೀಪ್‌
ದೀಪಕ್‌
ಮಹೇಶ್‌
ಹೊನ್ನೂರು ಪ್ರಕಾಶ್‌
ಪ್ರಭಾಕರ್‌
ಚಾಮರಾಜನಗರ ವಿವಿ ಕಟ್ಟಡ

ಜನರು ಏನಂತಾರೆ? ತೆರಿಗೆ ವಿದ್ಯುತ್‌ ರಿಯಾಯಿತಿ ಕೊಡಿ ಜಿಲ್ಲೆಯಲ್ಲಿ ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಬಿಎಸ್‌ಟಿ ಸಬ್ಸಿಡಿ ನೀಡಬೇಕು. ವಿದ್ಯುತ್‌ ಬಿಲ್‌ನಲ್ಲಿ ರಿಯಾಯಿತಿ ಕೊಡಬೇಕು. ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದ 2ನೇ ಹಂತದ ಅಭಿವೃದ್ಧಿಗೆ ವೇಗ ನೀಡಬೇಕು. ಕೊಳ್ಳೇಗಾಲದಲ್ಲೂ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಬೇಕು. ಬದನಗುಪ್ಪೆ ಕೆಲ್ಲಂಬಳ್ಳಿ ಪ್ರದೇಶದಲ್ಲಿ ಪೊಲೀಸ್‌ ಉಪಠಾಣೆ ಅಗ್ನಿಶಾಮಕ ದಳ ಸಾರಿಗೆ ಬಸ್‌ ಸೌಲಭ್ಯ ಸೇರಿದಂತೆ ಇತರೆ ಸೌಕರ್ಯಗಳನ್ನು ಕಲ್ಪಿಸಬೇಕು.  –ವಿ.ಪ್ರಭಾಕರ್‌ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ರೈತರ ಬವಣೆ ನೀಗಿಸಬೇಕು ಕಾಡಂಚಿನ ಪ್ರದೇಶಗಳಲ್ಲಿ ಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸಾವಯವ ನೈಸರ್ಗಿಕ ಕೃಷಿಗೆ ಹೆಚ್ಚು ಪ್ರೋತ್ಸಾಹ ಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಲು ವಿಶೇಷ ಯೋಜನೆ ರೂಪಿಸಬೇಕು. ಮಹದೇಶ್ವರ ಬೆಟ್ಟ ವ್ಯಾಪ್ತಿಯ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು. ಚಂಗಡಿ ಗ್ರಾಮ ಸ್ಥಳಾಂತರಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು –ಹೊನ್ನೂರು ಪ್ರಕಾಶ್‌ ರೈತ ಮುಖಂಡ ಪುರುಷರಿಗೂ ಗ್ಯಾರಂಟಿ ಬೇಕು  ತಳ್ಳುಗಾಡಿ ವ್ಯಾಪಾರಿಗಳು ಪರವಾನಗಿ ಪಡೆಯಲು ಹೆಚ್ಚು ಹಣ ವ್ಯಯಿಸಬೇಕಾಗಿದೆ. ಇದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಪುರುಷರಿಗೂ ಗ್ಯಾರಂಟಿ ಯೋಜನೆಯಡಿ ಕರ ವಿನಾಯಿತಿ ಘೋಷಿಸಲಿ. ಎಲ್ಲ ಪಂಚಾಯಿತಿಗಳಲ್ಲಿ ಶ್ರಮಿಕರಿಗೆ ವಿಶೇಷ ಅನುದಾನದಡಿ ಸೌಲಭ್ಯ ಕಲ್ಪಿಸಲು ಸರ್ಕಾರ ನೆರವಾಗಲಿ  – ಮುನ್ನ ವ್ಯಾಪಾರಿ ಯಳಂದೂರು  ಕಾಡಂಚಿನ ಕೃಷಿಕರಿಗೆ ನೆರವಾಗಿ ಬಿಆರ್‌ಟಿ ಸೇರಿದಂತೆ ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ರೈತರ ಜಮೀನಿಗೆ ವನ್ಯಜೀವಿಗಳು ಲಗ್ಗೆ ಇಡುವುದನ್ನು ತಪ್ಪಿಸಲು ರೈಲ್ವೆ ಬ್ಯಾರಿಕೇಡ್ ಮತ್ತು ಸೋಲಾರ್ ತಂತಿ ಬೇಲಿ ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು. ಕೃಷಿಕರಿಗೆ ನಷ್ಟವಾದಲ್ಲಿ ವೈಜ್ಞಾನಿಕ ಬೆಲೆ ನೀಡಬೇಕು. ರೈತರ ಸಮಸ್ಯೆಗಳನ್ನು ನಿವಾರಿಸುವ ಯೋಜನೆಗಳು ಬೇಕು –ಶಿವಣ್ಣ ರೈತ ಮುಖಂಡ ಅಲ್ಕೆರೆ ಅಗ್ರಹಾರ ಯಳಂದೂರು ತಾಲ್ಲೂಕು ಸೈಕಲ್‌ಗೆ ಅನುದಾನ ಸಿಗಲಿ ಈ ಬಾರಿಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ವ್ಯವಸ್ಥೆ ಸುಧಾರಿಸುವತ್ತ ಚಿತ್ರ ಹರಿಸಬೇಕು. ರಾಜ್ಯದ ಎಲ್ಲ ಶಾಲೆಗಳಲ್ಲಿ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು –ಬಿ.ದೀಪಕ್ ವಿದ್ಯಾರ್ಥಿ ಯಳಂದೂರು ಗುಡಿ ಕೈಗಾರಿಕೆ ಉತ್ತೇಜಿಸಲಿ ಸರ್ಕಾರಗಳು ಯುವಕರಿಗೆ ಉದ್ಯೋಗ ನೀಡುತ್ತಿಲ್ಲ. ಹೀಗಾಗಿ ಅವರಿಗೆ ಸಾಲ ಸೌಲಭ್ಯ ನೀಡಿ ಸ್ವಯಂ ಉದ್ಯೋಗಕ್ಕೆ ಅವಕಾಶ ಮಾಡಿಕೊಡಬೇಕು. ಜತೆಗೆ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಿ ಮಾರುಕಟ್ಟೆಗೆ ಅವಕಾಶ ಮಾಡಿಕೊಡಬೇಕು. ಹೋಬಳಿ ಮಟ್ಟದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. –ನಾಗೇಂದ್ರ ಸಂತೇಮರಹಳ್ಳಿ ಚಾಮರಾಜನಗರ ತಾಲ್ಲೂಕು ನೀರಾವರಿ ವ್ಯವಸ್ಥೆ ಅಗತ್ಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕೈಗಾರಿಕೆಗಳಿಲ್ಲ. ನದಿ ಮೂಲಗಳಿಲ್ಲ ಮಳೆ ನಂಬಿ ಕೃಷಿ ಮಾಡಬೇಕು. ಜನರು ಕೂಲಿಗಾಗಿ ತಮಿಳುನಾಡು ಕೇರಳವನ್ನು ಅವಂಬಿಸಿದ್ದಾರೆ. ಈ ಭಾಗದ ಜನರ ಬದುಕು ಬದಲಾವಣೆ ಕಾಣಬೇಕಾದರೆ ಕೈಗಾರಿಕೆಗಳು ಆರಂಭವಾಗಬೇಕಿದೆ. ಕೃಷಿಗಾಗಿ ಅಕ್ಕಪಕ್ಕದ ನದಿಗಳಿಂದ ಸದಾ ನೀರು ಸಿಗುವಂತಾಗಬೇಕು. –ಮಹೇಶ್ ಗುಂಡ್ಲುಪೇಟೆ ವಿಶೇಷ ಅನುದಾನ ಬೇಕು ಕೊಳ್ಳೇಗಾಲವನ್ನು ಮಾದರಿ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನ ಸೆಳೆಯಬೇಕು.  –ಪ್ರದೀಪ್ ಕೊಳ್ಳೇಗಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.