ADVERTISEMENT

ರಾಜ್ಯದ ಮತದಾರರಿಗೆ ಕಾಂಗ್ರೆಸ್‌ ಕಟ್ಟಿಹಾಕುವ ಶಕ್ತಿ ಇದೆ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 13:34 IST
Last Updated 3 ಏಪ್ರಿಲ್ 2024, 13:34 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ಚಾಮರಾಜನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕುವಂತಹ ದೊಡ್ಡ ವ್ಯಕ್ತಿ ನಾನಲ್ಲ. ಆದರೆ, ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಹಾಕುವ ಶಕ್ತಿ ಈ ರಾಜ್ಯದ ಮತದಾರರು, ಬಿಜೆಪಿ, ಜೆಡಿಎಸ್‌ ಕಾರ್ಯಕರ್ತರಿಗೆ ಇದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ಹೇಳಿದರು. 

ನಗರದಲ್ಲಿ ಎನ್‌ಡಿಎ ಅಭ್ಯರ್ಥಿ ಎಸ್‌.ಬಾಲರಾಜು ಅವರು ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಅಮಲಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಂತಹ ಭ್ರಮೆಯಲ್ಲಿ ಅವರಿದ್ದಾರೆ. ಅವರು ಏನು ಹೇಳುತ್ತಾರೆ ಎಂಬುದು ಮುಖ್ಯ ಅಲ್ಲ. ರಾಜ್ಯದ ಜನರು ಏನು ಹೇಳುತ್ತಾರೆ ಎನ್ನುವುದು ಮುಖ್ಯ’ ಎಂದರು. 

ADVERTISEMENT

‘ಕಾಂಗ್ರೆಸ್‌ನ ಬಣ್ಣ ಬಣ್ಣದ ಮಾತುಗಳಿಗೆ ಮೋಸ ಹೋಗಿದ್ದೇವೆ. ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡುವ ಸಲುವಾಗಿ ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ರಾಜ್ಯದ ಯುವಕರು, ತಾಯಂದಿರು, ಬಡವರು, ರೈತರು, ಪ್ರಜ್ಞಾವಂತರು ಮಾತನಾಡುತ್ತಿದ್ದಾರೆ. ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲೂ ಬಿಜೆಪಿ, ಜೆಡಿಎಸ್‌ ಪರವಾದ ವಾತಾವರಣ ಇದೆ’ ಎಂದು ಅವರು ಹೇಳಿದರು.

‘ಕೇಂದ್ರದಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ, ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ’ ಎಂದು ವಿಜಯೇಂದ್ರ ಹೇಳಿದರು.  

‘ಚಾಮರಾಜನಗರ ಕ್ಷೇತ್ರದಲ್ಲಿ ಆಡಳಿತ ಪಕ್ಷವು ಅಧಿಕಾರದ ಅಮಲಿನಲ್ಲಿ, ಹಣ ಹೆಂಡದ ಆಧಾರದಲ್ಲಿ ಗೆಲ್ಲುವ ಎಂಬ ಭ್ರಮೆಯಲ್ಲಿದೆ. ಆದರೆ ಇಲ್ಲಿನ ಜನರು ಪ್ರಜ್ಞಾಂತರಿದ್ದಾರೆ. ಕಾಂಗ್ರೆಸ್‌ನವರನ್ನು ಭ್ರಮೆಯಿಂದ ಹೊರತರುವ ಕೆಲಸ ಮಾಡುತ್ತೇವೆ’ ಎಂದರು. 

ಸಂಸದ ಶ್ರೀನಿವಾಸ ಪ್ರಸಾದ್‌ ಬೆಂಬಲಿಗರು ಕಾಂಗ್ರೆಸ್‌ಗೆ ಸೇೆರ್ಪಡೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ‘ಶ್ರೀನಿವಾಸ ಪ್ರಸಾದ್‌ ಅವರನ್ನು ನಾನೂ ಭೇಟಿಯಾಗಿದ್ದೇನೆ. ತಾವು ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದು, ಯಾರ ಪರವಾಗಿಯೂ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ಬಗ್ಗೆ ಅವರಿಗೆ ಒಳ್ಳೆಯ ಅಭಿಪ್ರಾಯ ಇದೆ. ಅವರ ಅಳಿಯ ಹರ್ಷವರ್ಧನ್‌ ನಮ್ಮ ಜೊತೆ ಇದ್ದಾರೆ. ಮತ್ತೊಬ್ಬ ಅಳಿಯ ಮೋಹನ್‌ ಕೂಡ ನಮ್ಮೊಂದಿಗೆ ಇರಲಿದ್ದಾರೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.