ADVERTISEMENT

ವಾಚರ್‌ ನೇಮಕಾತಿ: ನಿಯಮ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 5:26 IST
Last Updated 2 ಮಾರ್ಚ್ 2024, 5:26 IST
ಚಾಮರಾಜನಗರದ ಸುಲ್ತಾನ್‌ ಷರೀಫ್‌ ವೃತ್ತದಲ್ಲಿರುವ ಸಿಸಿಎಫ್‌ ಕಚೇರಿ ಮುಂದೆ ಸೇರಿದ್ದ ಅಭ್ಯರ್ಥಿಗಳು
ಚಾಮರಾಜನಗರದ ಸುಲ್ತಾನ್‌ ಷರೀಫ್‌ ವೃತ್ತದಲ್ಲಿರುವ ಸಿಸಿಎಫ್‌ ಕಚೇರಿ ಮುಂದೆ ಸೇರಿದ್ದ ಅಭ್ಯರ್ಥಿಗಳು   

ಚಾಮರಾಜನಗರ: ಅರಣ್ಯ ಇಲಾಖೆಯ ಚಾಮರಾಜನಗರ ವೃತ್ತದ ವ್ಯಾಪ್ತಿಗೆ ನಡೆಯುತ್ತಿರುವ ವಾಚರ್‌ ನೇಮಕಾತಿಯಲ್ಲಿ ಅಧಿಕಾರಿಗಳು ನಿಯಮ ಪಾಲಿಸಿಲ್ಲ ಎಂದು ಆರೋಪಿಸಿ 50ಕ್ಕೂ ಹೆಚ್ಚು ಅಭ್ಯರ್ಥಿಗಳು ಶುಕ್ರವಾರ ನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಮುಂದೆ ಜಮಾಯಿಸಿ, ದೈಹಿಕ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು. 

ವೃತ್ತ ವ್ಯಾಪ್ತಿಯಲ್ಲಿ 27 ವಾಚರ್‌ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಡೆದಿತ್ತು. ಅದರಲ್ಲಿ‌ ತೇರ್ಗಡೆ ಆದವರಿಗೆ ಶುಕ್ರವಾರ ವೈದ್ಯಕೀಯ ಪರೀಕ್ಷೆ ನಡೆಯಿತು.

‘ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕಾರಿಗಳು ಪ್ರಕಟಿಸಬೇಕು. ಎಲ್ಲ ವೃತ್ತಗಳಲ್ಲಿ ಅದೇ ರೀತಿ ಮಾಡಿದ್ದಾರೆ. ಆದರೆ, ಇಲ್ಲಿ ಅಧಿಕಾರಿಗಳು ಪಟ್ಟಿ ಹಾಕದೆ ಕೆಲವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಈ ನಡೆಯು ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಅನುಮಾನ ಹುಟ್ಟುಹಾಕಿದೆ’ ಎಂದು ಅಭ್ಯರ್ಥಿಗಳು ದೂರಿದರು.

ADVERTISEMENT

ಬಹುತೇಕ ಅಭ್ಯರ್ಥಿಗಳು ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಬಂದಿದ್ದರು.

‘ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳಿಂದ ಇಲ್ಲೇ ಇದ್ದೇವೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ನ್ಯಾಯಾಲಯದಲ್ಲಿ ನೀವು ಪ್ರಶ್ನಿಸಬಹುದು ಎಂದು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು. 

‘ದೈಹಿಕ ಪರೀಕ್ಷೆಯ ಸಂದರ್ಭದಲ್ಲೂ ನಿಯಮಗಳ ಪಾಲನೆ ಮಾಡಿಲ್ಲ. 1,600 ಮೀಟರ್‌ ದೂರವನ್ನು ಏಳು ನಿಮಿಷದ ಒಳಗಡೆ ಓಡಿ ಮುಗಿಸಬೇಕು ಎಂಬುದು ನಿಯಮ. ಆದರೆ, ಇಲ್ಲಿ ಏಳೂವರೆ ನಿಮಿಷ, ಎಂಟು ನಿಮಿಷ ತೆಗೆದುಕೊಂಡವರನ್ನೂ ಪರಿಗಣಿಸಲಾಗಿದೆ. ಅಂಕಗಳು ಹೆಚ್ಚಿದ್ದು, ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನೂ ವೈದ್ಯಕೀಯ ಪರೀಕ್ಷೆಗೆ ಕರೆದಿಲ್ಲ. ತಮಗೆ ಬೇಕಾದವರಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ’ ಎಂದು ಅಭ್ಯರ್ಥಿಗಳಾದ ಭಾಗಣ್ಣ, ಬಾಬು, ಸಿದ್ದರಾಮೇಶ್‌, ರಮೇಶ್‌ ಇತರರು ‘ಪ್ರಜಾವಾಣಿ’ ಮುಂದೆ ದೂರಿದರು.

‘ಸಿಸಿಎಫ್‌ ಅವರನ್ನು ಭೇಟಿ ಮಾಡಿದ್ದೇವೆ. ಅಧಿಕಾರಿಗಳನ್ನೂ ಕೇಳಿದ್ದೇವೆ. ನಿಯಮಗಳ ಅನುಸಾರವೇ ನೇಮಕಾತಿ ನಡೆಯುತ್ತಿದೆ ಎಂದು ಹೇಳುತ್ತಿದ್ದಾರೆ. ನಮಗೆ ಅನ್ಯಾಯವಾಗಿದ್ದು, ಅಧಿಕಾರಿಗಳು ಮತ್ತೆ ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.

ಹೀರಾಲಾಲ್‌
ಅಕ್ರಮ ನಡೆದಿಲ್ಲ: ಸಿಸಿಎಫ್‌ 
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಟಿ.ಹೀರಾಲಾಲ್‌ ‘ಸರ್ಕಾರದ ಅಧಿಸೂಚನೆಯಂತೆ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಅಕ್ರಮ ನಡೆದಿಲ್ಲ. ಚಾಮರಾಜನಗರ ವೃತ್ತದಲ್ಲಿ 27 ವಾಚರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕೆ ಲಿಖಿತ ಪರೀಕ್ಷೆ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ’ ಎಂದು ಹೇಳಿದರು.  ‘27 ಹುದ್ದೆಗಳಿಗೆ 16 ಸಾವಿರದಷ್ಟು ಅರ್ಜಿಗಳು ಬಂದಿತ್ತು. ಹಲವರು ಅರ್ಜಿ ಶುಲ್ಕ ಪಾವತಿಸಿರಲಿಲ್ಲ. 14 ಸಾವಿರ ಅರ್ಜಿಗಳನ್ನು ಪರಿಶೀಲನೆ ಮಾಡಿ ಹೆಚ್ಚಿನ ಅಂಕ ಪಡೆದಿರುವವನ್ನು 1:20 ಅನುಪಾತದಲ್ಲಿ 540 ಮಂದಿಯನ್ನು ದೈಹಿಕ ಪರೀಕ್ಷೆಗೆ ಆಯ್ಕೆ ಮಾಡಲಾಗಿತ್ತು’ ಎಂದರು.  ‘ಗುರುವಾರ ನಡೆದ ದೈಹಿಕ ಪರೀಕ್ಷೆಗೆ 368 ಅಭ್ಯರ್ಥಿಗಳು ಬಂದಿದ್ದರು. ಇವರಲ್ಲಿ 258 ಮಂದಿ ಅರ್ಹತೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ 1:3ರ ಅನುಪಾತದಲ್ಲಿ 81 ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಆಯ್ಕೆ ಮಾಡಲಾಗಿದೆ. 30 ಜನರ ಮೂರು ತಂಡವನ್ನಾಗಿ ಮಾಡಿ ಮೂರು ದಿನಗಳ ಕಾಲ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಆಯ್ಕೆಯಾದವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದೇವೆ. ಕೆಲವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರಿಗೆ ಮತ್ತೆ ಕರೆ ಮಾಡಿ ಪರೀಕ್ಷೆ ನಡೆಸಲಾಗುವುದು’ ಎಂದು ಹೀರಾಲಾಲ್‌ ಹೇಳಿದರು.  ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಸಂತೋಷ್ ಕುಮಾರ್ ಬಿಆರ್‌ಟಿ ಹುಲಿ ಯೋಜನೆ ನಿರ್ದೇಶಕಿ ದೀಪ್ ಜೆ. ಕಾಂಟ್ರ್ಯಾಕ್ಟರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.