ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪ-ವಿಭಾಗದ ಹೆಬ್ಬಳ್ಳ ಗಸ್ತಿನ ಚಾಮಲಾಪುರ ಕಟ್ಟೆಯ ಅರಣ್ಯ ಪ್ರದೇಶದಲ್ಲಿ ಗಂಡು ಹುಲಿಯೊಂದರ ಮೃತದೇಹ ಪತ್ತೆಯಾಗಿದ್ದು, ವಯೋಸಹಜ ಅನಾರೋಗ್ಯದಿಂದಾಗಿ ಹುಲಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಗೆ 11 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಎಡಗೈ ಭುಜದ ಮೂಳೆ ಮುರಿದಿರುವುದು, ನಾಲ್ಕು ಕೋರೆ ಹಲ್ಲುಗಳು ಸವೆದಿರುವುದು ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಕಂಡು ಬಂದಿದೆ ಎಂದು ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ವಾಸೀಂ ಮಿರ್ಜಾ ತಿಳಿಸಿದ್ದಾರೆ.
ಇಲಾಖೆಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣ ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಹೆಡಿಯಾಲ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ, ಹೆಡಿಯಾಲ ವಲಯ ಅರಣ್ಯಾಧಿಕಾರಿ ನಾರಾಯಣ ಹಾಗೂ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಪಿ.ರಮೇಶ್ ಕುಮಾರ್, ವನ್ಯಜೀವಿ ಪರಿಪಾಲಕರಾದ ಕೃತಿಕಾ ಆಲನಹಳ್ಳಿ, ರಘುರಾಮ್ ಸೇರಿದಂತೆ ಹೆಡಿಯಾಲ ವಲಯದ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.