ಕೊಳ್ಳೇಗಾಲ: ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯಗಳಿಂದ 2.20 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರನ್ನು ನದಿಗೆ ಬಿಟ್ಟ ಪರಿಣಾಮ ತಾಲ್ಲೂಕಿನ ಆರು ಗ್ರಾಮಗಳಾದ ಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆಅಣಗಳ್ಳಿ, ಹರಳೆ ಮತ್ತು ಯಡಕುರಿಯ ಗ್ರಾಮಗಳು ನೀರಿನಿಂದ ಜಲಾವೃತಗೊಂಡಿದೆ.
ಈ ಎಲ್ಲಾ ಗ್ರಾಮಗಳಲ್ಲಿಯೂ ಸಹ ನಾಲ್ಕು ಅಡಿಗಿಂತ ಹೆಚ್ಚು ನೀರು ತುಂಬಿಕೊಂಡಿದ್ದು ಕ್ಷಣಕ್ಷಣಕ್ಕೂ ಸಹ ನೀರಿನ ಮಟ್ಟ ಹೆಚ್ಚಾಗುತ್ತಿದೆ. ನದಿ ಪಾತ್ರದ ಒಂಬತ್ತು ಗ್ರಾಮಗಳ ಪೈಕಿ ಈ ಆರು ಗ್ರಾಮಗಳು ಜಲಾವೃತಗೊಂಡಿದ್ದರೆ, ಇನ್ನೂ ಸರಗೂರು, ಧನಗೆರೆ, ಸತ್ತೇಗಾಲ ಗ್ರಾಮಗಳ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದೆ. ಒಟ್ಟಾರೆ ಸಾವಿರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು ಅಪಾರ ಬೆಳೆ ನಷ್ಟ ಉಂಟಾಗಿದೆ.
ಪ್ರತಿವರ್ಷ ಈ ನದಿ ಪಾತ್ರದ ಗ್ರಾಮದ ಜನರಿಗೆ ಪ್ರವಾಹ ತಪ್ಪಿದ್ದಲ್ಲ ಹಾಗಾಗಿ ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನ ಒತ್ತಾಯ ಕೇಳಿ ಬಂದಿದೆ.
ರಾತ್ರೋರಾತ್ರಿ ಗ್ರಾಮಗಳು ಖಾಲಿ: ಜಲಾಶಯಗಳ ನೀರಿನ ಮಟ್ಟ ಹೆಚ್ಚುತ್ತಿರುವ ಕಾರಣ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ರಾತ್ರೋರಾತ್ರಿ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಕರೆ ತಂದಿದ್ದಾರೆ.
ಬೆಳಿಗ್ಗೆ ನೀರು ಹೆಚ್ಚಾಗಿದ್ದರಿಂದ ಅಧಿಕಾರಿಗಳು ತೆಪ್ಪದ ಮೂಲಕ ಹೋಗಿ ಎಲ್ಲ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕಾಳಜಿ ಕೇಂದ್ರಕ್ಕೆ ಕರೆ ತಂದಿದ್ದಾರೆ. ನೀರಿನ ಮಟ್ಟ ಅತೀ ಹೆಚ್ಚಾಗಿರುವ ಗ್ರಾಮಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹಗ್ಗಗಳ ಸಹಾಯದಿಂದ ಗ್ರಾಮಸ್ಥರನ್ನು ರಕ್ಷಿಸಿದರು.
ಈಗಾಗಲೇ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ 5 ಕಾಳಜಿ ಕೇಂದ್ರಗಳನ್ನು ತೆರೆದಿದ್ದಾರೆ. ಕಾಳಜಿ ಕೇಂದ್ರದಲ್ಲಿ ದಾಸನಪುರ, ಹಳೆ ಅಣಗಳ್ಳಿ, ಹರಳೆ ಗ್ರಾಮಸ್ಥರು ಇದ್ದಾರೆ. ಮುಳ್ಳೂರು ಗ್ರಾಮದಲ್ಲಿ ಎರಡು ಬೀದಿಗಳಿಗೆ ಮಾತ್ರ ನೀರು ಜಲಾವೃತವಾಗಿದೆ ಹಾಗಾಗಿ ಗ್ರಾಮದಲ್ಲೇ ತೆರೆದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ಕೆಲವರು ಇದ್ದಾರೆ. ಕೊಳ್ಳೇಗಾಲದ ಕಾಳಜಿ ಕೇಂದ್ರಗಳಲ್ಲಿ 770 ಮಂದಿ, ಮುಳ್ಳೂರು ಗ್ರಾಮದಲ್ಲಿ 130 ಮಂದಿ ಇದ್ದಾರೆ.
ಪ್ರತಿ ಕಾಳಜಿ ಕೇಂದ್ರಕ್ಕೂ ಭೇಟಿ ನೀಡಿದ ಶಾಸಕ ಎ.ಆರ್.ಕೃಷ್ಣಮೂರ್ತಿ, ‘ಗ್ರಾಮಸ್ಥರಿಗೆ ಮೂಲ ಸೌಕರ್ಯ, ಗುಣಮಟ್ಟದ ರುಚಿಯಾದ ಆಹಾರ ನೀಡಬೇಕು’ ಎಂದು ಕಾಳಜಿ ಕೇಂದ್ರದ ಅಧಿಕಾರಿಗಳಿಗೆ ಹೇಳಿದರು.
‘ಎಲ್ಲ ಕಾಳಜಿ ಕೇಂದ್ರದಲ್ಲೂ ಸಹ ವೈದ್ಯರು ಇದ್ದಾರೆ, ಸಮಸ್ಯೆ ಇದ್ದರೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬಹುದು ಹಾಗಾಗಿ ಯಾರೂ ಸಹ ಭಯಪಡುವ ಅಗತ್ಯವಿಲ್ಲ’ ಎಂದು ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಜಾನುವಾರುಗಳಿಗೆ ಮೇವು ಪೂರೈಕೆ: ಎಪಿಎಂಸಿ ಆವರಣದಲ್ಲಿ ಜಾನುವಾರುಗಳಿಗೆ ಕಾಳಜಿ ಕೇಂದ್ರ ತೆರೆಯಲಾಗಿತ್ತು. ಆದರೆ, ಇಲ್ಲಿಗೆ ದನ–ಕರು ಹಾಗೂ ಕುರಿಗಳನ್ನು ಕರೆತರಲು ಕಷ್ಟವಾಗುತ್ತಿದೆ. ಹಾಗಾಗಿ ಗ್ರಾಮದ ಹೊರವಲಯದ ಮುಖ್ಯ ರಸ್ತೆಯಲ್ಲೇ ನೂರಾರು ಕುರಿ, ಹಸುಗಳನ್ನು ಕಟ್ಟಿ ಹಾಕಿದ್ದಾರೆ. ಕೋಳಿಗಳಿಗೆ ಶೆಡ್ ನಿರ್ಮಿಸಿಕೊಂಡು ಅಲ್ಲಿಯೇ ತಿಂಡಿ– ಊಟ ಮಾಡಿಕೊಂಡು ವಿಶ್ರಾಂತಿ ಪಡೆದು ಅವುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮೇವಿನ ಕೊರತೆ ಆಗಬಾರದು ಎಂದು ಜಿಲ್ಲಾಧಿಕಾರಿ ಸೂಚನೆಯಂತೆ ಮೇವು ಪೂರೈಸಲಾಗಿದೆ.
ನದಿಗೆ ಬಿದ್ದ ಯುವಕ ರಕ್ಷಣೆ: ಸತ್ತೇಗಾಲ ಗ್ರಾಮದ ಸೇತುವೆ ಕೆಳಗೆ ಚಾಮರಾಜನಗರದ ಯುವಕ ಮಹಮ್ಮದ್ ಮನ್ಸೂರ್ ಬಹಿರ್ದೆಸೆಗೆ ಹೋಗಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು, ಸುಮಾರು 300 ಮೀಟರ್‌ಗೂ ಹೆಚ್ಚು ದೂರ ಕೊಚ್ಚಿ ಹೋಗಿದ್ದಾನೆ. ತಕ್ಷಣ ಯುವಕನು ಮರದ ಕೊಂಬೆಯನ್ನು ಹಿಡಿದುಕೊಂಡು ನದಿಯಲ್ಲಿ ತೇಲುತ್ತಿದ್ದ ಇದನ್ನು ಕಂಡ ಸ್ಥಳೀಯರು, ತೆಪ್ಪದ ಮೂಲಕ ಹೋಗಿ ಯುವಕನನ್ನು ರಕ್ಷಿಸಿದ್ದಾರೆ.
ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ
ಬೆಳಿಗ್ಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಉಪ ವಿಭಾಗಾಧಿಕಾರಿ ಮಹೇಶ್ ತಹಶೀಲ್ದಾರ್ ಮಂಜುಳಾ ಸೇರಿದಂತೆ ಅನೇಕ ಅಧಿಕಾರಿಗಳು ಪ್ರತಿ ಗ್ರಾಮಕ್ಕೂ ಸಹ ತೆಪ್ಪದಲ್ಲಿ ತೆರಳಿ ಗ್ರಾಮಸ್ಥರಿಗೆ ತಿಳಿ ಹೇಳಿ ಕಾಳಜಿ ಕೇಂದ್ರಕ್ಕೆ ಕರೆ ತಂದರು. ಕೆಲವರು ಗ್ರಾಮದಲ್ಲಿ ಅವಿತು ಕುಳಿತಿದ್ದರು.
ವಿಷಯ ತಿಳಿದ ಜಿಲ್ಲಾಧಿಕಾರಿ ಮನೆಯ ಒಳಗಡೆ ಯಾರೂ ಇರಬಾರದು ಈಗಾಗಲೇ ನಿಮ್ಮ ಗ್ರಾಮಗಳಿಗೆ ನೀರು ನುಗ್ಗಿದೆ. ಕೂಡಲೇ ಕಾಳಜಿ ಕೇಂದ್ರಕ್ಕೆ ತೆರಳಬೇಕು ಎಂದು ಮೈಕ್‌ನಲ್ಲಿ ಕೂಗಿದರು.
ಆಗ ದಾಸನಪುರ ಹಾಗೂ ಹಳೆ ಅಣಗಳ್ಳಿ ಗ್ರಾಮಸ್ಥರು ಮನೆಯಿಂದ ಹೊರಬಂದು ‘ನಾವು ಗ್ರಾಮ ಬಿಟ್ಟು ಹೋಗುವುದಿಲ್ಲ ಇಲ್ಲಿ ಕಳ್ಳರಿದ್ದಾರೆ ನಮ್ಮ ವಸ್ತುಗಳು ಹೋದರೆ ಯಾರು ಜವಾಬ್ದಾರಿ’ ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ‘ನೀವು ಮನೆಯಲ್ಲೇ ಇದ್ದರೆ ಗ್ರಾಮದಲ್ಲಿ ಯಾರದೇ ಮನೆಯಲ್ಲಿ ಕಳ್ಳತನವಾದರೂ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಹಾಗಾಗಿ ನೀವು ಮನೆಯಿಂದ ಹೊರಟು ಕಾಳಜಿ ಕೇಂದ್ರಕ್ಕೆ ಬರಬೇಕು ನಿಮ್ಮ ಗ್ರಾಮವನ್ನು ನೋಡಿಕೊಳ್ಳಲು ಪೊಲೀಸ್ ಇಲಾಖೆ ಇದೆ ಕೂಡಲೇ ಹೊರ ಬರಬೇಕು. ಇಲ್ಲವಾದರೆ ತಮ್ಮ ಮೇಲೆ ಎಫ್ಐಆರ್ ದಾಖಲು ಮಾಡಬೇಕಾಗುತ್ತದೆ’ ಎಂದು ಖಡಕ್ ಆಗಿ ಹೇಳಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು ನಂತರ ಕಾಳಜಿ ಕೇಂದ್ರಕ್ಕೆ ಬಂದರು.
ವೆಲ್ಲೆಸ್ಲಿ ಸೇತುವೆಗೆ ಹಾನಿ
ಕಾವೇರಿ ನದಿಯ ಪ್ರವಾಹದಿಂದ ತಾಲ್ಲೂಕಿನ ಶಿವನಸಮುದ್ರದ ಪಾರಂಪರಿಕ ವೆಲ್ಲೆಸ್ಲಿ ಸೇತುವೆ ಇದೀಗ ಮತ್ತೆ ಪ್ರವಾಹದ ಹೊಡೆತಕ್ಕೆ ಸಿಲುಕಿ ಇನ್ನಷ್ಟು ಹಾನಿಗೊಳಗಾಗಿದೆ. ಕಳೆದ ಐದು ವರ್ಷಗಳ ಹಿಂದೆ ಪ್ರವಾಹಕ್ಕೆ ತುತ್ತಾಗಿ ಸೇತುವೆ 40 ಮೀಟರ್‌ನಷ್ಟು ಕುಸಿದಿತ್ತು. ಈ ವರ್ಷವೂ ಅಂದಾಜು 10 ಮೀಟರ್‌ನಷ್ಟು ಕುಸಿತ ಕಂಡಿದೆ.
ತಾಲ್ಲೂಕಿನ ಶಿವನಸಮುದ್ರ ದ್ವೀಪ ಗ್ರಾಮ ಆದಿಶಕ್ತಿ ಮಾರಮ್ಮ ಮಧ್ಯರಂಗನಾಥ ಸೋಮೇಶ್ವರ ಸಮೂಹ ದೇವಾಲಯಗಳಿಗೆ ಮತ್ತು ಭರಚುಕ್ಕಿ ಜಲಪಾತಕ್ಕೆ ತೆರಳಲು ಬ್ರಿಟಿಷರ ಕಾಲದಲ್ಲಿ ಕಲ್ಲಿನ ಕಂಬಗಳನ್ನು ಬಳಸಿ ಕಾವೇರಿ ನದಿಗೆ 350 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿತ್ತು. ಪಾರಂಪರಿಕ ಸೇತುವೆ ಶಿಥಿಲಗೊಂಡಿದ್ದರಿಂದ 8 ವರ್ಷಗಳ ಹಿಂದೆಯೇ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಅದಕ್ಕೆ ಪರ್ಯಾಯವಾಗಿ 10 ವರ್ಷಗಳ ಹಿಂದೆಯೇ 2 ಸೇತುವೆ ನಿರ್ಮಾಣ ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಪ್ರವಾಸಿಗರು ಹಾಗೂ ಸಾರ್ವಜನಿಕರು ವೆಲ್ಲೆಸ್ಲಿ ಸೇತುವೆ ಮೇಲೆ ಓಡಾಡಿಕೊಂಡು ನದಿಯನ್ನು ಕಣ್ತುಂಬಿಕೊಂಡು ಆನಂದಿಸುತ್ತಿದ್ದರು. ‘ಈಗ ಸೇತುವೆ ಕುಸಿದ ಕಾರಣ ಪಾರಂಪರಿಕ ಸೇತುವೆ ವೈಭವ ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸೇತುವೆ ಪ್ರವಾಹದಿಂದ ಹಾನಿಯಾಗಿರುವುದು ನಿಜಕ್ಕೂ ಬೇಸರದ ವಿಷಯ’ ಎಂದು ಶಿವನಸಮುದ್ರ ಗ್ರಾಮದ ಶಂಕರ್ ಪ್ರಜಾವಾಣಿಗೆ ತಿಳಿಸಿದರು.
ಸಂಪರ್ಕ ಸೇತುವೆ ರಸ್ತೆಗಳು ಬಂದ್
ಕಲಿಯೂರು ಮುಳ್ಳೂರು ಮಾರ್ಗವಾಗಿ ಮೈಸೂರಿಗೆ ಹೋಗುವ ಪ್ರಮುಖ ಮುಖ್ಯರಸ್ತೆ ಜಲಾವೃತವಾಗಿದ್ದು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರ ಜೊತೆಗೆ ಅಂತರ್ ಜಿಲ್ಲೆ ದಾಸನಪುರ ಹಾಗೂ ಮಂಡ್ಯ ಜಿಲ್ಲೆಯ ಕಾವೇರಿಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಮುಳುಗಡೆಯಾಗಿದೆ. ಹೀಗಾಗಿ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಒಟ್ಟಾರೆ ಆರು ಗ್ರಾಮದಲ್ಲಿ 600 ರಿಂದ 700 ಮನೆಗಳು ಜಲಾವೃತವಾಗಿವೆ. ಆದರೆ ಯಾವುದೇ ಮನೆಗಳು ಕುಸಿದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.