ಕೊಳ್ಳೇಗಾಲ: ಕಬಿನಿ ಮತ್ತು ಕೆಆರ್‌ಎಸ್ ಜಲಾಶಯಗಳಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು, ತಾಲ್ಲೂಕಿನಲ್ಲಿ ಹಾದುಹೋಗುವ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದೆ.
ವಾರದಿಂದೀಚೆಗೆಕೇರಳ ಮತ್ತು ಕೊಡಗಿನಲ್ಲಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು, 20 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಕೆಆರ್‌ಎಸ್ ಜಲಾಶಯದಿಂದಲೂ 4,500 ಕ್ಯೂಸೆಕ್‌ಗಳಷ್ಟು ನೀರು ಬಿಡಲಾಗುತ್ತಿದೆ. ಮೈಸೂರು ಜಿಲ್ಲಾಡಳಿತ ಈಗಾಗಲೇ ನದಿ ಪಾತ್ರದಲ್ಲಿ ನೆಲೆಸಿರುವವರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ.
ಇದರಿಂದಾಗಿ ಅಂದಾಜು 25 ಸಾವಿರ ಕ್ಯೂಸೆಕ್‌ನಷ್ಟು ನೀರು ನದಿಯಲ್ಲಿ ಹರಿಯುತ್ತಿದೆ. ಇದರ ಜೊತೆಗೆ ಸ್ಥಳೀಯವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಲೂ ಸಾಕಷ್ಟು ಪ್ರಮಾಣದ ನೀರು ಕಾವೇರಿಗೆ ಸೇರುತ್ತಿದೆ. ಭಾರಿ ಪ್ರಮಾಣದಲ್ಲಿ ನೀರು ಹರಿದರೆ, ತಾಲ್ಲೂಕಿನ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವುದು ಖಚಿತ. ಮೂರ್ನಾಲ್ಕು ವರ್ಷಗಳಿಂದ ಪ್ರತಿ ವರ್ಷ ತಾಲ್ಲೂಕಿನಮುಳ್ಳೂರು, ಹಳೆ ಹಂಪಾಪುರ, ದಾಸನಪುರ, ಹಳೆ ಅಣಗಳ್ಳಿ, ಹರಳೆ, ನರೀಪುರ, ಸರಗೂರು, ಧನಗೆರೆ, ಸತ್ತೇಗಾಲದ ಯಡಕುರಿಯಾ ಗ್ರಾಮಗಳು ಪ್ರವಾಹಕ್ಕೆ ತುತ್ತಾಗುತ್ತಿವೆ.
ಕಳೆದ ವರ್ಷ ಆಗಸ್ಟ್ 10 ರಿಂದ 17 ರವರೆಗೆ ಈ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿತ್ತು. ಕಾವೇರಿ ನದಿಗೆ ಎರಡೂ ಜಲಾಶಯಗಳಿಂದ ಒಟ್ಟು 2.57 ಲಕ್ಷ ಕ್ಯೂಸೆಕ್‌ಗಳಷ್ಟು ನೀರನ್ನು ಹೊರ ಬಿಡಲಾಗಿತ್ತು. ನದಿ ಉಕ್ಕಿ ಹರಿದ ಕಾರಣದಿಂದ527 ಮನೆಗಳು ಮುಳುಗಡೆಯಾಗಿ, 32 ಮನೆಗಳು ಸಂಪೂರ್ಣ ಹಾಳಾಗಿತ್ತು. 491 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ರಾಗಿ, ಜೋಳ, ಭತ್ತ, ಕಬ್ಬು, ಈರುಳ್ಳಿ, ತರಕಾರಿ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗಿತ್ತು. ಜಾನುವಾರುಗಳೂ ಮೃತಪಟ್ಟಿದ್ದವು. ಅಂದಾಜು ₹10.45 ಕೋಟಿ ನಷ್ಟವಾಗಿತ್ತು.
ಏರುತ್ತಿದೆ ನೀರಿನ ಮಟ್ಟ: ತಾಲ್ಲೂಕು ಹಾಗೂ ನದಿ ಪಾತ್ರದ ಪ್ರದೇಶಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ಹತ್ತು ದಿನಗಳಿಂದೀಚೆಗೆ ನೀರಿನ ಮಟ್ಟ ಏರುತ್ತಿದೆ. ಜಲಾಶಯಗಳಿಂದ ಬಿಟ್ಟ ಹೆಚ್ಚುವರಿ ನೀರು ತಾಲ್ಲೂಕಿಗೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ನೀರಿನ ಮಟ್ಟ ಹೆಚ್ಚಲು ಕನಿಷ್ಠ ಎರಡು ದಿನಗಳಾದರೂ ಬೇಕು ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
‘ಕಾವೇರಿ ನದಿಗೆ ಕಬಿನಿಯಿಂದ 20 ಸಾವಿರ ಕ್ಯೂಸೆಕ್ ಹಾಗೂ ಕೆ.ಆರ್.ಎಸ್ ನಿಂದ 4,500 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಮಳೆ ಹೆಚ್ಚಾದರೆ, ಹೊರ ಹರಿವಿನ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಘು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಈ ಬಾರಿಯೂ ಪ್ರವಾಹ ಬರುವ ಲಕ್ಷಣ ಕಾಣುತ್ತಿದೆ. ನೆರೆ ಬಂದರೆ ನಾವು ಗ್ರಾಮದಿಂದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಲೇ ಬೇಕಿದೆ ಎಂದು ಹಳೆ ಅಣ್ಣಗಳ್ಳಿ ಗ್ರಾಮದ ನಂಜಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.