ಚಾಮರಾಜನಗರ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಶುಕ್ರವಾರ ಕರೆ ನೀಡಿರುವ ‘ಕರ್ನಾಟಕ ಬಂದ್’ಗೆ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
ವಿವಿಧ ಸಂಘಟನೆಗಳನ್ನು ಒಳಗೊಂಡಿರುವ ಕಾವೇರಿ ಹೋರಾಟ ಕ್ರಿಯಾ ಸಮಿತಿಯು ಈಗಾಗಲೇ ಬಂದ್‌ಗೆ ಬೆಂಬಲ ಘೋಷಿಸಿ, ಎಲ್ಲ ಸಂಘಟನೆಗಳು, ವರ್ತಕರು, ಜನ ಸಾಮಾನ್ಯರಿಗೆ ಬಂದ್‌ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತಿದೆ. ಇದರ ಜೊತೆಗೆ ಖಾಸಗಿ ಬಸ್ ಮಾಲೀಕರ ಸಂಘ, ಆಟೊ ಚಾಲಕ, ಮಾಲೀಕರ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ಘೋಷಿಸಿವೆ.
ಕಾವೇರಿ ಹೋರಾಟ ಕ್ರಿಯಾ ಸಮಿತಿಯಲ್ಲಿ ಕಬ್ಬು ಬೆಳೆಗಾರರ ಸಂಘ, ಜಿಲ್ಲಾ ತಮಿಳು ಸಂಘ, ಚಾಮರಾಜನಗರ ವರ್ತಕರ ಸಂಘ, ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟ, ಡಾ.ಬಿ.ಆರ್.ಅಂಬೇಡ್ಕರ್ ಸಂಘಟನೆಗಳ ಒಕ್ಕೂಟ, ಅಂಬೇಡ್ಕರ್ ಸಂಘಗಳು, ಎಸ್‌ಡಿಪಿಐ, ಕರ್ನಾಟಕ ಸೇನಾ ಪಡೆ, ಕನ್ನಡ ಸಂಘಟನೆಗಳ ಒಕ್ಕೂಟ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ಇವೆ.
ಈ ಸಮಿತಿಯು ಜಿಲ್ಲಾ ಕೇಂದ್ರದಲ್ಲಿ ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದು, ಬಂದ್‌ಗೆ ಎಲ್ಲ ಸಂಘಟನೆಗಳು, ವರ್ತಕರು, ಬ್ಯಾಂಕ್ ನೌಕರರು ಸೇರಿದಂತೆ ಎಲ್ಲ ವರ್ಗಗಳಿಂದಲೂ ಬೆಂಬಲ ಕೇಳುತ್ತಿದ್ದಾರೆ. ಬಸ್ ಮಾಲೀಕರ ಸಂಘ, ಆಟೊ ಮಾಲೀಕರು, ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘಗಳು, ರೈತ ಸಂಘಟನೆಗಳು ಬೆಂಬಲ ಘೋಷಿಸಿವೆ.
ತಾಲ್ಲೂಕು ಕೇಂದ್ರಗಳಲ್ಲೂ ಬಂದ್‌ಗೆ ಬೆಂಬಲ ವ್ಯಕ್ತವಾಗುತ್ತಿದೆ. ಕೊಳ್ಳೇಗಾಲದಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ
ಆಟೊ ಚಾಲಕರ ಸಂಘ, ಕಾರು ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ,
ಕರ್ನಾಟಕ ಯುವಶಕ್ತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಲು ಮುಂದಾಗಿವೆ.
ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಕೂಡ ಬಂದ್ ಬೆಂಬಲಿಸುವುದಾಗಿ ಹೇಳಿವೆ.
ಎಲ್ಲ ಸಂಘಟನೆಗಳ ಬೆಂಬಲ: ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಕಾವೇರಿ ಹೋರಾಟ ಕ್ರಿಯಾ ಸಿತಿ ಸಂಚಾಲಕ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ‘ರಾಜ್ಯದ ರೈತರ ಹಾಗೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದರಲ್ಲಿ ವೈಯಕ್ತಿಕ ಸ್ವಾರ್ಥ ಯಾರದ್ದೂ ಇಲ್ಲ. ನಮ್ಮಲ್ಲಿ ನೀರು ಇಲ್ಲದಿರುವಾಗ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ರೈತರು, ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಲಿದೆ. ಸರ್ಕಾರ ತಕ್ಷಣವೇ ನೀರು ಹರಿಸುವುದನ್ನು ನಿಲ್ಲಿಸಬೇಕು ಎಂಬುದು ನಮ್ಮ ಆಗ್ರಹ’ ಎಂದರು.
‘ಜಿಲ್ಲೆಯಲ್ಲೂ ಜನರು ಶುಕ್ರವಾರ ಸ್ವಯಂ ಪ್ರೇರಿತರಾಗಿ ಬಂದ್ ಮಾಡಲಿದ್ದಾರೆ. ಕ್ರಿಯಾ ಸಮಿತಿಯಲ್ಲಿ ಹಲವು ಸಂಘಟನೆಗಳು ಇವೆ. ಇದಲ್ಲದೇ ನಾವು ಖಾಸಗಿ ಬಸ್ ಮಾಲೀಕರ ಸಂಘ, ಆಟೊ, ಟ್ಯಾಕ್ಸಿ, ಖಾಸಗಿ ಲಾರಿ ಮಾಲೀಕರ ಸಂಘ, ಚಾಲಕರ ಸಂಘಗಳಿಗೆ, ವರ್ತಕರಿಗೆ, ಪೆಟ್ರೋಲ್ ಬಂಕ್ ಮಾಲೀಕರಿಗೆ ಸೇರಿದಂತೆ ಎಲ್ಲ ಸಂಘಗಳಿಗೂ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗಗಳಲ್ಲೂ ಬಂದ್ ಯಶಸ್ವಿಯಾಗುವ ವಿಶ್ವಾಸವಿದೆ’ ಎಂದು ಹೇಳಿದರು.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಖಾಸಗಿ ಮಾಲೀಕರ ಸಂಘದ ವಿಜಯ ಕೃಷ್ಣ ಮತ್ತು ತ್ಯಾಗರಾಜ್ ಅವರು, ‘ಕಾವೇರಿ ವಿಚಾರವೂ ಜನರು ಹಾಗೂ ರೈತರಿಗೆ ಸಂಬಂಧಿಸಿದ್ದು. ನೀರು ಹರಿಸುತ್ತಿರುವುದರಿಂದ ನಮಗೆ ಅನ್ಯಾಯವಾಗುತ್ತಿದೆ. ಅದರ ವಿರುದ್ಧ ಕರೆ ನೀಡಿರುವ ಬಂದ್‌ಗೆ ನಮ್ಮ ಸಂಘ ಬೆಂಬಲ ನೀಡಲಿದೆ. ಶುಕ್ರವಾರ ಖಾಸಗಿ ಬಸ್‌ಗಳು ಸಂಚರಿಸುವುದಿಲ್ಲ’ ಎಂದರು.
ಡಿ.ಸಿ ಸಭೆ: ಬಂದ್ ವಿಚಾರವಾಗಿ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾ ನಾಗ್ ಅವರು ಗುರುವಾರ ಸಂಜೆ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಹಾಗೂ ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಆ ಬಳಿಕ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶ ಹೊರಡಿಸಿದರು.
ಕಾವೇರಿ ನೀರನ್ನು ಯಾರು ಕುಡಿಯುತ್ತಾರೋ ಬಳಕೆ ಮಾಡುತ್ತಾರೋ ಅವರೆಲ್ಲರೂ ಕರ್ನಾಟಕ ಬಂದ್‌ಗೆ ಬೆಂಬಲ ನೀಡಬೇಕುಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಾವೇರಿ ಹೋರಾಟ ಕ್ರಿಯಾ ಸಮಿತಿ
ಬಸ್ ಕಾರ್ಯಾಚರಣೆ ಮಾಡಲು ನಾವು ಸಿದ್ಧರಾಗಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಪೊಲೀಸರ ಸಲಹೆ ಪಡೆದು ತೀರ್ಮಾನಿಸುತ್ತೇವೆಅಶೋಕ್ ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಬಂದ್ ಬೆಂಬಲಿಸಿ ಕರಪತ್ರ ಚಳವಳಿ
ಈ ಮಧ್ಯೆ ಶುಕ್ರವಾರದ ಕರ್ನಾಟಕ ಬಂದ್ ಬೆಂಬಲಿಸಿ ಕಾವೇರಿ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ಕರಪತ್ರ ಹಂಚುವ ಚಳವಳಿ ನಡೆಸಿದರು. ಭುವನೇಶ್ವರಿ ವೃತ್ತದಲ್ಲಿ ಸೇರಿದ ಸಮಿತಿ ಸದಸ್ಯರು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ತಮಿಳುನಾಡು ಸರ್ಕಾರ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೋರಹಾಕಿದರು. ಬಂದ್‌ಗೆ ಬೆಂಬಲ ಕೋರಲು ಮುದ್ರಿಸಿರುವ ಕರಪತ್ರಗಳನ್ನು ನಗರದಲ್ಲಿ ಹಂಚಿ ಜಾಗೃತಿ ಮೂಡಿಸಿದರು.
ಸಮಿತಿ ಸಂಚಾಲಕ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ ‘ಮಳೆಯ ಅಭಾವದಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದ್ದು ರಾಜ್ಯದ ಜನರಿಗೆ ಕುಡಿಯುವ ನೀರಿಗೆ ಕೊರತೆ ಉಂಟಾಗಲಿರುವ ಸಂದರ್ಭದಲ್ಲಿ ತಮಿಳುನಾಡು ಸರ್ಕಾರ ನೀರು ಬಿಡುವಂತೆ ಒತ್ತಾಯ ಮಾಡುತ್ತಿರುವುದು ಹಾಗೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಆದೇಶ ನೀಡಿರುವುದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.
ಕಾವೇರಿ ನೀರು ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯದ ವಿವಿಧ ಸಂಘಟನೆಗಳು ಶುಕ್ರವಾರ (ಇಂದು) ಕರೆ ಕೊಟ್ಟಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜನತೆ ಬೆಂಬಲ ಸೂಚಿಸಿ ಬಂದ್ ಯಶಸ್ವಿಗೊಳಿಸಬೇಕು’ ಎಂದು ಅವರು ಮನವಿ ಚಾ.ರಂ.ಶ್ರೀನಿವಾಸಗೌಡ ಮನವಿ ಮಾಡಿದರು. ಕ್ರಿಯಾ ಸಮಿತಿ ಸಂಚಾಲಕ ಶಾ.ಮುರಳಿ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಪಣ್ಯದಹುಂಡಿರಾಜು ತಮಿಳು ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಾರ್‌ಅಹಮದ್ ಸಿ.ಎಂ.ಕೃಷ್ಣಮೂರ್ತಿ ಚಾ.ವೆಂ.ರಾಜ್‌ಗೋಪಾಲ್ ನಂಜುಂಡಶೆಟ್ಟಿ ಲಿಂಗರಾಜು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.