ಚಾಮರಾಜನಗರ: ಕಾವೇರಿ ವನ್ಯಧಾಮದ ವ್ಯಾಪ್ತಿಗೆ ಬರುವ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಗ್ಗೂರು ಫಾರೆಸ್ಟ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ವೆ ನಂಬರ್‌ಗಳಲ್ಲಿ ಪರಿಸರ ಪ್ರವಾಸೋದ್ಯಮದ (ಇಕೊ ಟೂರಿಸಂ) ಉದ್ದೇಶಕ್ಕೆ ಭೂಪರಿವರ್ತನೆಗಾಗಿ ಅನುಮತಿ ಕೋರಿರುವ ಪ್ರಸ್ತಾವವನ್ನು ವನ್ಯಧಾಮದ ಪರಿಸರ ಸೂಕ್ಷ್ಮ ವಲಯ (ಎಎಸ್‌ಝಡ್) ಮೇಲ್ವಿಚಾರಣಾ ಸಮಿತಿ ತಿರಸ್ಕರಿಸಿದೆ.
ಮುಗ್ಗೂರು ಫಾರೆಸ್ಟ್ ಗ್ರಾಮದ ಸರ್ವೆ ನಂ.5ರಲ್ಲಿ 12 ಎಕರೆ 13 ಗುಂಟೆ ಜಮೀನು, ಸರ್ವೆ ನಂ.3ರಲ್ಲಿ 8 ಎಕರೆ 20 ಗುಂಟೆ
ಜಮೀನು, ಸರ್ವೆ ನಂ.2/1ರಲ್ಲಿ 5 ಎಕರೆ 24 ಗುಂಟೆ ಜಮೀನು, ಸರ್ವೆ ನಂ.2/2ರಲ್ಲಿ 4 ಎಕರೆ 15 ಗುಂಟೆ ಜಮೀನು, ಉಯ್ಯಂಬಳ್ಳಿ ಹೋಬಳಿ ಚಿಕ್ಕಮುದುಡೆ ಗ್ರಾಮದ ಸರ್ವೆ ನಂ.100/2 ರಲ್ಲಿ 1 ಎಕರೆ ಜಮೀನನ್ನು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಾಗಿ ಭೂಪರಿವರ್ತನೆಗೆ ಅನುಮತಿ ಕೋರಲಾಗಿತ್ತು.
ಮೈಸೂರಿನ ಪ್ರಾದೇಶಿಕ ಆಯುಕ್ತ ಪ‍್ರಕಾಶ್ ನೇತೃತ್ವದ ಮೇಲ್ವಿಚಾರಣಾ ಸಮಿತಿ ಸಭೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದಿದ್ದು, ಅಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. ಪ್ರಸ್ತಾವಿತ ಜಮೀನುಗಳು ಪರಿಸರ ಸೂಕ್ಷ್ಮ ವಲಯದಲ್ಲಿ ಬರುವುದರಿಂದ ಅಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದಲ್ಲದೇ, ಪರಿಸರ ಸೂಕ್ಷ್ಮ ವಲಯದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಲು ಸಮಿತಿ ನಿರಾಕರಿಸಿದೆ ಎಂದು ಗೊತ್ತಾಗಿದೆ.
ಬಿಆರ್‌ಟಿ ಅಕ್ರಮ ರೆಸಾರ್ಟ್ ಚರ್ಚೆ: ಗುರುವಾರ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದ ಮೇಲ್ವಿಚಾರಣಾ ಸಮಿತಿ ಸಭೆಯೂ ನಡೆದಿದ್ದು, ಬಿಳಿಗಿರಿರಂಗನಬೆಟ್ಟದಲ್ಲಿರುವ ಒಂಬತ್ತು ಅಕ್ರಮ ರೆಸಾರ್ಟ್, ಹೋಂಸ್ಟೇಗಳ ಬಗ್ಗೆ ಚರ್ಚೆ ನಡೆದಿದೆ.
ಬೆಟ್ಟದಲ್ಲಿ ಕಾರ್ಯಾಚರಿಸುತ್ತಿರುವ ರೆಸಾರ್ಟ್, ಹೋಂಸ್ಟೇಗಳು ಯಾವೆಲ್ಲ ನಿಯಮ ಉಲ್ಲಂಘಿಸಿವೆ ಎಂಬುದರ ಬಗ್ಗೆ ಕಂದಾಯ ಇಲಾಖೆಯ ತನಿಖೆ ನಡೆಸಲು ಸಮಿತಿ ಅಧ್ಯಕ್ಷರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ ಅವರು ಅರಣ್ಯದ ಅಂಚಿನ ಪ್ರದೇಶ ಹಾಗೂ ಈ ಹಿಂದೆ ಬಡವರಿಗೆ ನೀಡಲಾಗಿದ್ದ ಸಾಗುವಳಿ ಭೂಮಿಯ ಗಡಿಯ ಗುರುತಿಗೆ ಜಂಟಿ ಸಮೀಕ್ಷೆ ನಡೆಸಬೇಕು ಎಂಬ ಸಲಹೆಯನ್ನೂ ನೀಡಿದರು ಎಂದು ಗೊತ್ತಾಗಿದೆ.
Quote -
ಬಿಆರ್‌ಟಿಯಲ್ಲಿರುವ ಅಕ್ರಮ ರೆಸಾರ್ಟ್ ಬಗ್ಗೆ ಇಎಸ್‌ಝಡ್ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ಗೊತ್ತಿಲ್ಲ. ಆದರೆ ಅಕ್ರಮ ರೆಸಾರ್ಟ್ ಹೋಂಸ್ಟೇಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ ಮತ್ತು ದೂರುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.