ಹನೂರು: ಪಟ್ಟಣದ ಸೆಸ್ಕ್ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೈತರು ಸಭೆಯನ್ನು ಬಹಿಷ್ಕರಿಸಿದರು.
ಈವರೆಗೆ ಐದು ಜನಸಂಪರ್ಕ ಸಭೆಗಳನ್ನು ನಡೆಸಿದ್ದು, ರೈತರು ಅನೇಕ ದೂರುಗಳನ್ನು ಸಲ್ಲಿಸಿದ್ದಾರೆ. ಆದರೆ, ಮೊದಲ ಜನಸಂಪರ್ಕ ಸಭೆಯಲ್ಲಿ ನೀಡಿದ್ದ ದೂರುಗಳನ್ನೇ ಬಗೆಹರಿಸಿಲ್ಲ. ಅಧಿಕಾರಿಗಳು ಕಾಟಾಚಾರಕ್ಕಾಗಿ ಸಭೆಯನ್ನು ಆಯೋಜಿಸುತ್ತಿದ್ದಾರೆ ಎಂದು ದೂರಿದರು.
‘ಜಮೀನಿನ ಪಂಪ್‍ಸೆಟ್‌ಗೆ ವಿದ್ಯುತ್ ಪಡೆಯಲು ಕಂಬ ಅಳವಡಿಸುವಂತೆ 2012ರಲ್ಲಿ ₹13,400 ಪಾವತಿಸಿದ್ದೆ. ಆದರೆ, ಈವರೆಗೂ ಕಂಬ ಅಳವಡಿಸಿಲ್ಲ. ಐದು ಜನಸಂಪರ್ಕ ಸಭೆಗಳಲ್ಲೂ ಈ ಬಗ್ಗೆ ಅಹವಾಲು ಸಲ್ಲಿಸಿದ್ದೇನೆ. ಆದರೆ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಲೊಕ್ಕನಹಳ್ಳಿ ಗ್ರಾಮದ ರೈತ ತಂಗಮುತ್ತು ಗೌಂಡರ್ ಆರೋಪಿಸಿದರು.
ಶಾಗ್ಯ ಗ್ರಾಮದ ಸಿದ್ದಮ್ಮ, ‘ನಮ್ಮ ಜಮೀನಿಗೂ ವಿದ್ಯುತ್ ಕಂಬ ಅಳವಡಿಸಲು ಆರು ವರ್ಷಗಳ ಹಿಂದೆಯೇ ₹13,400 ಶುಲ್ಕ ಕಟ್ಟಿದ್ದೆ. ಆದರೆ, ಈವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ಕೃಷಿಯನ್ನೇ ನಂಬಿರುವ ನಮಗೆ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಸೆಸ್ಕ್ ಅಧೀಕ್ಷಕ ಪ್ರದೀಪ್, ‘ಕಳೆದ ಮೂರು ಜನಸಂಪರ್ಕ ಸಭೆಗಳಲ್ಲಿ ರೈತರಿಂದ 25 ಅಹವಾಲುಗಳು ಬಂದಿದ್ದು, ಇದರಲ್ಲಿ 15 ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇನ್ನುಳಿದ ಅಹವಾಲುಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಇಂದಿನ ಸಭೆಯಲ್ಲಿ ರೈತರು ಸಲ್ಲಿಸುವ ಅಹವಾಲುಗಳ ಜತೆಗೆ ಉಳಿದಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸುವಂತೆ ಕಿರಿಯ ಅಧಿಕಾರಿಗಳಿಗೆ ತಾಕೀತು ಮಾಡುತ್ತೇನೆ’ ಎಂದರು.
ಎಇ ತಾರಾ, ಎಇಇಗಳಾದ ನಿಂಗರಾಜು, ಪ್ರತಾಪ್, ಕರವೇ (ಸ್ವಾಭಿಮಾನಿ ಬಣ) ಹನೂರು ಘಟಕದ ಅಧ್ಯಕ್ಷ ವಿನೋದ್, ರೈತರ ಸಂಘದ ಕರಿಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.